– ಹಣ್ಣು, ತರಕಾರಿ ವ್ಯಾಪಾರಿಗೆ 1 ಕೋಟಿ ರೂ. ಟ್ಯಾಕ್ಸ್, ನೋಟಿಸ್ ಕಂಡು ಹೌಹಾರಿದ ವ್ಯಕ್ತಿ
ಬೆಂಗಳೂರು: ಬಡವರು ಸಣ್ಣ-ಪುಟ್ಟ ವ್ಯಾಪಾರ ಮಾಡಿಕೊಂಡು ಬದುಕು ಕಟ್ಟಿಕೊಳ್ಳೋಣ ಅಂತ ಕನಸು ಹೊಂದಿರುತ್ತಾರೆ. ಅದಕ್ಕಂತಲೇ ಬೇಕರಿ, ಕಾಂಡಿಮೆಂಟ್ಸ್, ಟೀ-ಕಾಫಿ, ತರಕಾರಿ ಅಂಗಡಿಯನ್ನು ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದಾರೆ. ಆದ್ರೆ, ವಾಣಿಜ್ಯ ತೆರಿಗೆ ಇಲಾಖೆ (Commercial Tax Department) ಜಿಎಸ್‌ಟಿ (GST) ಗುನ್ನಾ ಕೊಟ್ಟಿದೆ.
ಸಣ್ಣ-ಪುಟ್ಟ ಅಂಗಡಿಗಳು ಅಂದಮೇಲೆ ಅಲ್ಲಿ ಫೋನ್ ಪೇ, ಗೂಗಲ್ ಪೇ.. ಆನ್‌ಲೈನ್ ಪೇಮೆಂಟ್ ಮೋಡ್ ಇದ್ದೇ ಇರುತ್ತೆ, ವ್ಯಾಪಾರಿಗಳಿಗೂ ಆನ್‌ಲೈನ್ ಪೇಮೆಂಟ್ ಸ್ವೀಕರಿಸೋದು ಕಾಮನ್ ಆಗೋಗಿದೆ. ಆದ್ರೆ, ಅವ್ರು ಇದೆಂದೂ ಕಂಡಿರದ, ಕೇಳಿರದ ಶಾಕ್‌ಗೆ ಅಂಗಡಿ ಮಾಲೀಕರು (Traders) ಒಳಗಾಗಿದ್ದಾರೆ. ಆನ್ ಲೈನ್ ಪೇಮೆಂಟ್ ನೋಡಿ ಟ್ಯಾಕ್ಸ್ ಕಟ್ಟುವಂತೆ ವಾಣಿಜ್ಯ ತೆರಿಗೆ ಇಲಾಖೆ ನೋಟಿಸ್ ನೀಡಿದೆ. 40 ರಿಂದ 60 ಲಕ್ಷ ರೂ. 1 ಕೋಟಿವರೆಗೂ ದಂಡ ವಿಧಿಸಿದ್ದು, ವಾಣಿಜ್ಯ ತೆರಿಗೆ ಇಲಾಖೆ ನೋಟಿಸ್‌ಗೆ ವ್ಯಾಪಾರಸ್ಥರು ಕಂಗಾಲಾಗಿದ್ದಾರೆ.
ವ್ಯಾಪಾರಸ್ಥರು ಗರಂ
ಇನ್ನೂ ವಾಣಿಜ್ಯ ತೆರಿಗೆ ಇಲಾಖೆ ಕಳಿಸಿರೋ ನೋಟಿಸ್‌ಗೆ ವ್ಯಾಪಾರಿಗಳು ಶಾಕ್‌ಗೆ ಒಳಗಾಗಿದ್ದಾರೆ. `ನಮ್ ಕಿಡ್ನಿ ಮಾರಿ.. ಅಂಗಡಿ ಅಡವಿಟ್ರು ಈ ದಂಡ ಕಟ್ಟೋಕೆ ಆಗಲ್ಲ’.. ಸಣ್ಣ-ಪುಟ್ಟ ವ್ಯಾಪಾರಿಗಳ ಹೊಟ್ಟೆಯ ಮೇಲೆ ಹೊಡೆಯುತ್ತಿದ್ದಾರೆ ಎಂದು ʻಪಬ್ಲಿಕ್ ಟಿವಿʼ ಬಳಿ ಅಳಲು ತೋಡಿಕೊಂಡಿದ್ದಾರೆ. ಅದರಂತೆ ರಾಜೇಂದ್ರ ಶೆಟ್ಟಿ, ಇವ್ರು ದೂರದ ಕುಂದಾಪುರದಿಂದ ಜೀವನ ಸಾಗಿಸಲು ಬೆಂಗಳೂರು ಸೇರಿ ಅನೇಕ ವರ್ಷಗಳೇ ಕಳೆದಿದೆ, ಕೆಂಗೇರಿಯಲ್ಲಿ ಕಾಂಡಿಮೆಂಟ್ಸ್ ಮಾಡಿಕೊಂಡು ಸಂಸಾರದ ಬಂಡಿದೂಡ್ತಿದ್ದಾರೆ. ಇವ್ರಿಗೆ 2021 ರಿಂದ ಇಲ್ಲಿವರೆಗೆ ಒಟ್ಟು 67 ಲಕ್ಷ ಟ್ಯಾಕ್ಸ್ ಬಾಕಿ ಇದೆ ಅಂತಾ ನೋಟಿಸ್ ನೀಡಿದ್ದಾರೆ. ಟ್ಯಾಕ್ಸ್ ಕಟ್ಟೋದಕ್ಕೆ ಹೇಗೆ ಆಗುತ್ತೆ ಬೇಕಾದ್ರೇ ನಮ್ಮನ್ನ ಸಾಯಿಸಿ ಅಂತ ಕಣ್ಣೀರಿಟ್ಟಿದ್ದಾರೆ.
ಬನ್ನೇರುಘಟದಲ್ಲಿ ತರಕಾರಿ-ಹಣ್ಣಿನ ವ್ಯಾಪಾರಿ ವೀರಮಾದ ಮಾತನಾಡಿ, ಆನ್‌ಲೈನ್ ಮೂಲಕ ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ. ಇದಕ್ಕೆ ವಾಣಿಜ್ಯ ತೆರಿಗೆ ಇಲಾಖೆಯವ್ರು ನೋಟಿಸ್ ನೀಡಿದ್ದು, ಬರೋಬ್ಬರಿ 1 ಕೋಟಿ 30 ಲಕ್ಷ ಹಣ ಕಟ್ಟುವಂತೆ ತಿಳಿಸಿದ್ದಾರೆ. ಇದರಿಂದ ಅಂಗಡಿ ಮಾಲೀಕ ಹೌಹಾರಿರಿದ್ದಾರೆ.
ಬೇಕರಿ ವ್ಯಾಪಾರಿ ರಾಜೇಂದ್ರ ಪೂಜಾರಿ ಅನ್ನೋರು ಮಾತನಾಡಿ, ನಮಗೂ 33 ಲಕ್ಷ ರೂ. ಟ್ಯಾಕ್ಸ್ ಕಟ್ಟುವಂತೆ ನೋಟಿಸ್ ಬಂದಿದೆ. ನಾವು ಕಾಫಿ, ಟೀ-ಸಿಗರೇಟ್ ಮಾರಿಕೊಂಡಿರೋರು, ನಮ್ಮ ಅಂಗಡಿಯ ವ್ಯಾಲ್ಯೂನೇ 3 ಲಕ್ಷ ಆಗೋದಿಲ್ಲ. 33 ಲಕ್ಷ ಎಲ್ಲಿಂದ ತಂದು ಕೊಟ್ಟದಕ್ಕೆ ಆಗುತ್ತೆ? ನಾವು ಟ್ಯಾಕ್ಸ್ ಪೇ ಮಾಡೋದಕ್ಕೆ ಆಗೋಲ್ಲ, ದಯಾಮರಣ ಮಾಡಿಕೊಳ್ಳಬೇಕು ಅಷ್ಟೇ ಅಂತ ಗೋಳಾಡಿದ್ದಾರೆ.
ಮಾರಾಟ ಮಾಡಿದ ಸರಕುಗಳಿಗೆ ಟ್ಯಾಕ್ಸ್ ಕಡ್ಡಾಯ
ಇದೇ ವಿಚಾರವಾಗಿ ವಾಣಿಜ್ಯ ತೆರಿಗೆಗಳ ಅಪರ ಆಯುಕ್ತರಿಂದ ಸ್ಪಷ್ಟೀಕರಣ ನೀಡಲಾಗಿದೆ. ಮಾರಾಟ ಮಾಡಿದ ಸರಕುಗಳಿಗೆ ಟ್ಯಾಕ್ಸ್ ಕಡ್ಡಾಯ, ವಾರ್ಷಿಕ 40 ಲಕ್ಷ ವಹಿವಾಟು ಮೀರಿದರೆ ಜಿಎಸ್‌ಟಿ ಫಿಕ್ಸ್ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಬೇಕರಿಗಳಲ್ಲಿ ಬ್ರೆಡ್ ಮೇಲೆ ಜಿಎಸ್‌ಟಿ ಇಲ್ಲ, ಬ್ರೆಡ್ ಹೊರತುಪಡಿಸಿ ಕುರುಕಲು ತಿಂಡಿಗಳಿಗೆ 5% ಜಿಎಸ್‌ಟಿ, ಯುಪಿಐ ಮೂಲಕ 40 ಲಕ್ಷಕ್ಕಿಂತ ಹೆಚ್ಚು ವಹಿವಾಟು ನಡೆಸಿರುವ ವರ್ತಕರಿಗೆ ನೋಟಿಸ್ ನೀಡಿರೋ ಬಗ್ಗೆ ವಾಣಿಜ್ಯ ತೆರಿಗೆ ಇಲಾಖೆ ಸ್ಪಷ್ಟನೆ ನೀಡಿದೆ.