-ಹರಕೆ ತೀರಿಸಿದ ರಾಕೇಶ್ ಪೂಜಾರಿ
ಉಡುಪಿ: ಕರಾವಳಿ ಜಿಲ್ಲೆ ಉಡುಪಿಯ ಜನ ದೇವರನ್ನು ಪೂಜಿಸುವಷ್ಟೇ ದೈವಗಳನ್ನು ಆರಾಧಿಸುತ್ತಾರೆ. ದೈವ ಕೊರಗಜ್ಜ ಪವಾಡಗಳ ದೈವ ಎಂದೇ ಪ್ರತೀತಿ ಪಡೆದ ಶಕ್ತಿ. ಇತ್ತೀಚೆಗಷ್ಟೇ ಖಾಸಗಿ ವಾಹಿನಿಯಲ್ಲಿ ಕಾಮಿಡಿ ಕಿಲಾಡಿ ಶೋ ಗೆದ್ದ ರಾಕೇಶ್ ಪೂಜಾರಿ ಮೂಲತಃ ಉಡುಪಿ ಜಿಲ್ಲೆಯವರು. ಕಾಮಿಡಿ ಕಿಲಾಡಿ ಪ್ರಶಸ್ತಿ ಗೆದ್ದ ಕೂಡಲೇ ರಾಕೇಶ್ ಹರಕೆ ಒಪ್ಪಿಸಲು ಕೊರಗಜ್ಜನ ಸನ್ನಿಧಾನಕ್ಕೆ ಓಡೋಡಿ ಬಂದಿದ್ದಾರೆ.
Advertisement
ಉಡುಪಿಯ ಬೈಲೂರಿನಲ್ಲಿರುವ ನೀಲಕಂಠ ಬಬ್ಬುಸ್ವಾಮಿ ದೇವಸ್ಥಾನಕ್ಕೆ ಆಗಮಿಸಿದ ರಾಕೇಶ್ ಪೂಜಾರಿ ವಿಶೇಷ ಪೂಜೆಯನ್ನು ಸಲ್ಲಿಸಿದ್ದಾರೆ. ರಿಯಾಲಿಟಿ ಶೋ ಆರಂಭಕ್ಕೆ ಮುನ್ನ ಕೊರಗಜ್ಜನಿಗೆ ಹರಕೆ ಹೇಳಿದ್ದ ರಾಕೇಶ್, ತನ್ನ ಹರಕೆಯನ್ನು ತೀರಿಸಿದ್ದಾರೆ. ಎಲ್ಲಾ ಕಡೆ ದೈವ ದೇವರುಗಳಿಗೆ ದುಬಾರಿ ವೆಚ್ಚದ ಹರಕೆಯನ್ನು ತೀರಿಸಲಾಗುತ್ತದೆ. ಆದರೆ ಉಡುಪಿಯ ಕೊರಗಜ್ಜನಿಗೆ ಎಲೆ ಅಡಿಕೆ, ಚಕ್ಕುಲಿ ಮತ್ತು ಮದ್ಯವೇ ಹರಕೆ. ರಿಯಾಲಿಟಿ ಶೋದಲ್ಲಿ ಪ್ರತಿ ಬಾರಿ ವೇದಿಕೆ ಪ್ರವೇಶಕ್ಕೆ ಮುನ್ನ ಬೈಲೂರು ಬಬ್ಬುಸ್ವಾಮಿ ಕೊರಗಜ್ಜ ದೈವವನ್ನು ರಾಕೇಶ್ ಮನಸ್ಸಿನಲ್ಲಿ ನೆನೆಯುತ್ತಿದ್ದರಂತೆ. ತಾನು ಹೇಳಿದ ಹರಕೆಯಂತೆ ರಾಕೇಶ್ ಗೆಳೆಯರ ಜೊತೆ ಬಂದು ದೇವರಿಗೆ ಹರಕೆ ತೀರಿಸಿದ್ದಾರೆ.
Advertisement
Advertisement
76 ಬಡಗಬೆಟ್ಟು ಬೈಲೂರು ನೀಲಕಂಠ ಮಹಾಸ್ವಾಮಿ ದೈವಸ್ಥಾನಕ್ಕೆ ಸೆಲೆಬ್ರಿಟಿಗಳ ದಂಡೇ ಹರಿದು ಬರುತ್ತದೆ. ಈ ಹಿಂದೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿತ್ರ ಯಶಸ್ವಿಯಾದಾಗ ನಿರ್ದೇಶಕ ರಿಷಬ್ ಶೆಟ್ಟಿ ಕ್ಷೇತ್ರಕ್ಕೆ ಬಂದು ಹರಕೆ ಸಲ್ಲಿಸಿದ್ದರು. ಉಳಿದವರು ಕಂಡಂತೆ ಚಿತ್ರದ ಸಂದರ್ಭದಿಂದ ಅವನೇ ಶ್ರೀಮನ್ನಾರಾಯಣ ಚಿತ್ರದವರೆಗೂ ನಟ ರಕ್ಷಿತ್ ಶೆಟ್ಟಿ ಕ್ಷೇತ್ರದ ಭಕ್ತ. ಇದೀಗ ರಾಕೇಶ್ ಗೆಲುವು ಕ್ಷೇತ್ರದಲ್ಲಿ ಹೇಳಿಕೊಂಡ ಹರಕೆಯಿಂದ ಸಿದ್ಧಿ ಪಡೆಯುತ್ತದೆ, ದೈವಕ್ಕೆ ಕಾರಣಿಕ ಇದೆ ಎಂಬೂದಕ್ಕೆ ಸಾಕ್ಷಿಯಿದು. ಇದನ್ನೂ ಓದಿ: ರಕ್ಷಿತ್, ರಿಷಬ್‌ಗೆ ಬೈಲೂರು ಕೊರಗಜ್ಜನ ಅಭಯ
Advertisement
ಸ್ಥಳೀಯ ಚೇತನ್ ಮಾತನಾಡಿ, ಕೊರಗಜ್ಜ ದೈವ ತುಳುನಾಡಿನಲ್ಲಿ ಅದರಲ್ಲೂ ಕಲಿಯುಗದಲ್ಲಿ ಬಹಳ ಶಕ್ತಿ ಇರುವ ದೈವ. ಯಾವುದೇ ಕಷ್ಟ ಬಂದ್ರೆ ಕೊರಗಜ್ಜ ದೈವದ ಬಳಿ ತನ್ನ ಕಷ್ಟವನ್ನು ಹೇಳಿಕೊಂಡರೆ ಹಲವಾರು ಜನರಿಗೆ ಇದರಲ್ಲಿ ಉಪಯೋಗವಾಗಿದೆ. ದೈವ ಅವರ ಕಷ್ಟವನ್ನೆಲ್ಲಾ ನಿವಾರಿಸಿ ಕೊಟ್ಟಿದ್ದಾರೆ. ಹಲವಾರು ಮಂದಿ ಚಲನ ಚಿತ್ರ ನಟರು ಬಂದಿದ್ದಾರೆ. ನಂಬಿದವರಿಗೆ ಇಂಬು ಕೊಡುವ ದೈವ ಅಂದ್ರೆ ಅದು ಕೊರಗಜ್ಜ.
ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ರಾಕೇಶ್ ಮೊದಲು ಹರಕೆ ತೀರಿಸಲು ಆಗಮಿಸಿದರು. ಈ ಸಂದರ್ಭದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದರು. ನಾನು ಕಾಮಿಡಿ ಕಿಲಾಡಿ ರಾಕೇಶ್ ಪೂಜಾರಿ. ಈ ಕ್ಷೇತ್ರದ ಬಗ್ಗೆ ಆರು ತಿಂಗಳ ಹಿಂದೆ ನನಗೆ ತಿಳಿದು ಬಂತು. ಕಾಮಿಡಿ ಕಿಲಾಡಿಗೆ ಸೆಲೆಕ್ಟ್ ಆಗಬೇಕು ಎಂದು ಈ ಕ್ಷೇತ್ರಕ್ಕೆ ಹರಕೆ ಹೇಳಿದ್ದೆ. ಆದರೆ ಈ ದೈವ ನನ್ನನ್ನು ಸ್ಪರ್ಧೆಯಲ್ಲಿ ಗೆಲ್ಲಿಸಿ ಕೊಟ್ಟಿದೆ ಎಂದು ಖುಷಿ ಹಂಚಿಕೊಂಡರು.
ನನ್ನ ಜೀವನದಲ್ಲಿ ಈ ದೇವರನ್ನು ಆರಾಧನೆ ಮಾಡಿದ ಮೇಲೆ ಹಿಂತಿರುಗಿ ನೋಡಿದ್ದೇ ಇಲ್ಲ ಎಂದು ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಅನುಭವ ಹೇಳಿಕೊಂಡರು. ಪ್ರತಿ ಬಾರಿ ಒಂದೊಂದೇ ಮೆಟ್ಟಿಲು ಮೇಲಕ್ಕೆ ಈ ದೈವ ನನ್ನನ್ನು ತೆಗೆದುಕೊಂಡು ಹೋಗಿದೆ. ಪ್ರತಿ ಬಾರಿ ವೇದಿಕೆ ಹತ್ತುವ ಮೊದಲು ಸ್ವಾಮಿ ಕೊರಗಜ್ಜ ಎಂದು ಮನಸ್ಸಿನಲ್ಲಿ ಒಂದು ಬಾರಿ ನೆನಪು ಮಾಡಿಕೊಳ್ಳುತ್ತಿದ್ದೆ. ಈ ಕ್ಷೇತ್ರದ ಪ್ರಸಾದವನ್ನು ಹಣೆಗೆ ಇಟ್ಟುಕೊಂಡರೆ ಏನೋ ಒಂದು ವಿಶೇಷ ಶಕ್ತಿ ಬರುತ್ತಿತ್ತು. ವೇದಿಕೆ ಹತ್ತಲು ಯಾವುದೇ ಅಳುಕು ಆತಂಕ ಇಲ್ಲದಂತಾಗುತ್ತಿತ್ತು. ಮುಂದೆಯೂ ನಾನು ಊರಿಗೆ ಬಂದಾಗ ವಿಶೇಷ ದಿನಗಳಲ್ಲಿ ಕೊರಗಜ್ಜ ದೈವದ ಆರಾಧನೆ ಮಾಡುತ್ತೇನೆ ಹರಕೆ ತೀರಿಸುತ್ತೇನೆ ಎಂದು ಹೇಳಿದರು.