ವೆಂಕಟ್ ನಾಗ್ ನಿರ್ದೇಶನದ ಕೈಲಾಸ ಕಾಸಿದ್ರೆ (Kailasa Kasidre) ಚಿತ್ರ ಇದೇ ತಿಂಗಳ 8ರಂದು ಬಿಡುಗಡೆಗೊಳ್ಳುತ್ತಿದೆ. ಯೂಥ್ ಫುಲ್ ಕಥೆಯ ಸುಳಿವಿನೊಂದಿಗೆ, ಚೆಂದದ ಹಾಡುಗಳ ಹಿಮ್ಮೇಳದೊಂದಿಗೆ ಪ್ರೇಕ್ಷಕರನ್ನು ಮುಟ್ಟಿರುವ ಈ ಸಿನಿಮಾ ಪ್ರೀತಿ, ನಶೆ ಮತ್ತು ಭರಪೂರ ನಗುವಿನ ಕಾಂಬಿನೇಷನ್ನಿನಲ್ಲಿ ಮೂಡಿ ಬಂದಿದೆ ಎಂಬ ವಿಚಾರವನ್ನು ಈಗಾಗಲೇ ಚಿತ್ರತಂಡ ಹೇಳಿಕೊಂಡಿದೆ. ಟ್ರೈಲರ್ ನಲ್ಲಿಯೂ ಅದಕ್ಕೆ ನಿಖರ ಪುರಾವೆ ಸಿಕ್ಕಂತಿದೆ. ಇದೊಂದು ಕ್ರೈಂ ಕಂ ಕಾಮಿಡಿ ಜಾನರಿನ ಚಿತ್ರ. ಸದಾ ಒಂದು ಕುತೂಹಲವನ್ನು ಜಾರಿಯಲ್ಲಿಟ್ಟುಕೊಂಡು, ಅದಕ್ಕೆ ಹೆಜ್ಜೆ ಹೆಜ್ಜೆಗೂ ನಗುವಿನ ಸಾಥ್ ಸಿಗುತ್ತದೆಂದರೆ ಸಹಜವಾಗಿಯೇ ಪ್ರೇಕ್ಷಕರ ಚಿತ್ತ ಅದರತ್ತ ಹೊರಳಿಕೊಳ್ಳುತ್ತೆ. ಈ ಚಿತ್ರದ ಬಗ್ಗೆ ಪ್ರೇಕ್ಷಕರು ಆಕರ್ಷಿತರಾಗಿರೋದಕ್ಕೆ ಕಾಮಿಡಿ ಕಿಲಾಡಿಗಳು ಖ್ಯಾತಿಯ ಸೂರಜ್ (Suraj) ನಿಭಾಯಿಸಿರುವ ಪಾತ್ರವೂ ಪ್ರಧಾನ ಕಾರಣವಾಗಿ ದಾಖಲಾಗುತ್ತೆ.
Advertisement
ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಾ ಬಂದಿರುವ ಪ್ರಸಿದ್ಧ ಶೋ ಕಾಮಿಡಿ ಕಿಲಾಡಿಗಳು. ಈ ಕಾರ್ಯಕ್ರಮದಿಂದ ಕರ್ನಾಟಕದ ಮೂಲೆ ಮೂಲೆಯಲ್ಲಿದ್ದ ಪ್ರತಿಭಾನ್ವಿತರು ಬೆಳಕಿಗೆ ಬಂದಿದ್ದಾರೆ. ಅದರಲ್ಲೊಂದಷ್ಟು ಮಂದಿ ಇದೀಗ ಕನ್ನಡ ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆ ಕಂಡುಕೊಳ್ಳುತ್ತಿದ್ದಾರೆ. ಈ ಸಾಲಿನಲ್ಲಿ ಮುಖ್ಯವಾಗಿ ಗುರುತಿಸಿಕೊಳ್ಳುವವರು ಸೂರಜ್. ಈತ ಸದರಿ ಶೋನ ಸಂದರ್ಭದಲ್ಲಿಯೇ ಭರವಸೆ ಮೂಡಿಸಿದ್ದರು. ಆ ನಂತರ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದ ಸೂರಜ್ ಗೆ ಕೈಲಾಸ ಕಾಸಿದ್ರೆ ಚಿತ್ರದಲ್ಲಿ ಪ್ರಧಾನ ಪಾತ್ರವೇ ಸಿಕ್ಕಿದೆ.
Advertisement
Advertisement
ಸೂರಜ್ ಇಲ್ಲಿ ನಾಯಕನ ಗೆಳೆಯನ ಪಾತ್ರದಲ್ಲಿ ನಟಿಸಿದ್ದಾರೆ. ಸಾಮಾನ್ಯವಾಗಿ ಹಾಸ್ಯ ಪಾತ್ರಗಳು ಕೆಲ ಸೀನುಗಳಿಗೆ ಮಾತ್ರವೇ ಸೀಮಿತವಾಗೋದಿದೆ. ಆದರೆ ಈ ಚಿತ್ರದಲ್ಲಿ ಅಂಥಾ ಟ್ರ್ಯಾಕ್ ಕಾಮಿಡಿ ಇಲ್ಲ. ನಾಯಕನ ಗೆಳೆಯನ ಪಾತ್ರವನ್ನು ನಿರ್ದೇಶಕ ನಾಗ್ ವೆಂಕಟ್ ಸೃಷ್ಟಿಸಿದಾಗ ಅದನ್ನು ನಿಭಾಯಿಸೋರು ಯಾರೆಂಬ ಪ್ರಶ್ನೆ ಹುಟ್ಟಿಕೊಂಡಿತ್ತಂತೆ. ಯಾಕೆಂದರೆ, ಅದಕ್ಕೆ ಪಳಗಿಕೊಂಡಿರೋ ಪ್ರತಿಭಾವಂತ ನಟನೇ ಬೇಕಿತ್ತು. ಚಿತ್ರದುದ್ದಕ್ಕೂ, ನಾಯಕನಿಗೆ ಸರಿಸಮನಾಗಿ ಮುಂದುವರೆಯೋ ಆ ಪಾತ್ರಕ್ಕೆ ಸೂರಜ್ ಸೂಟ್ ಆಗುತ್ತಾರೆನ್ನಿಸಿದ್ದೇ ಅವರನ್ನು ನಾಗ್ ವೆಂಕಟ್ (Nag Venkat) ಒಪ್ಪಿಸಿದ್ದರಂತೆ.
Advertisement
ಈ ಪಾತ್ರ ಮತ್ತು ಒಟ್ಟಾರೆ ಕಥೆ ಖುದ್ದು ಸೂರಜ್ ಗೆ ಬಹುವಾಗಿ ಹಿಡಿಸಿದೆ. ಆರಂಭದಿಂದ ಕಡೆಯವರೆಗೂ ವಿಶಿಷ್ಟ ಅನುಭವ ನೀಡಿದ ಚಿತ್ರೀಕರಣದ ಬಗ್ಗೆಯೂ ಅವರಲ್ಲೊಂದು ಬೆರಗಿದೆ. ಈ ಪಾತ್ರವನ್ನು ನಿರ್ದೇಶಕರ ಇಂಗಿತದಂತೆಯೇ ಜೀವ ತುಂಬಿ ನಟಿಸಿದ ತೃಪ್ತಿಯೂ ಅವರಲ್ಲಿದೆ. ಈ ಸಿನಿಮಾ ಕ್ರೈಂ ಹಾಗೂ ನಗುವಿನ ಒಡ್ಡೋಲಗದಲ್ಲಿ ಪ್ರೇಕ್ಷಕರನ್ನು ಸೆಳೆಯುತ್ತದೆಂಬ ತುಂಬು ಭರವಸೆಯೂ ಸೂರಜ್ ಗಿದೆ. ಈಗ ಹಲವಾರು ಶೋಗಳಲ್ಲಿ, ದೊಡ್ಡ ಸಿನಿಮಾಗಳಲ್ಲಿ ಸೂರಜ್ ಬ್ಯುಸಿಯಾಗಿದ್ದಾರೆ. ಕೈಲಾಸ ಕಾಸಿದ್ರೆ ಚಿತ್ರ ತನ್ನ ವೃತ್ತಿ ಬದುಕಿಗೆ ಮತ್ತಷ್ಟು ವೇಗ ನೀಡಬಹುದೆಂಬ ನಿರೀಕ್ಷೆ ಸೂರಜ್ ರದ್ದು.
ಸುಕನ್ಯಾ ನಟಿಸಿದ್ದಾರೆ ಈ ಚಿತ್ರದ ನಾಯಕಿಯಾಗಿ, ಕಾಲೇಜು ಹುಡುಗಿಯಾಗಿ ಕಂಗೊಳಿಸಿದ್ದಾರೆ. ವಾಸಿಕ್ ಅಲ್ಸಾದ್ ನಿರ್ಮಾಣ ಮಾಡಿರುವ ಕೈಲಾಸ ಚಿತ್ರಕ್ಕೆ ಆಶಿಕ್ ಅರುಣ್ ಸಂಗೀತ, ತ್ಯಾಗರಾಜನ್ ಸಂಕಲನ, ಲೇಖಕ್ ಎಂ ಸಾಹಿತ್ಯ, ವಿನೋದ್ ರಾಜೇಂದ್ರನ್ ಛಾಯಾಗ್ರಹಣ, ಧನಂಜಯ ಬಿ ನೃತ್ಯ ನಿರ್ದೇಶನವಿದೆ. ವಾಸಿಕ್ ಅಲ್ಸಾದ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಸಾಫ್ಟ್‍ವೇರ್ ಜಗತ್ತಿನಿಂದ ಆಗಮಿಸಿರುವ ನಾಗ್ ವೆಂಕಟ್ ಚೊಚ್ಚಲ ನಿರ್ದೇಶನದ ಚಿತ್ರವಿದು. ಟ್ರೈಲರ್, ಹಾಡುಗಳ ಮೂಲಕ ಮೋಡಿ ಮಾಡಿರುವ ಈ ಚಿತ್ರ ತೆರೆಗಾಣಲು ಇದೀಗ ದಿನಗಣನೆ ಶುರುವಾಗಿದೆ.