ನೆಲಮೂಲದ ಕಥೆ ಹೊಂದಿರೋ `ಕೆರೆಬೇಟೆ’ (Kerebete) ಚಿತ್ರ ಎಲ್ಲ ವರ್ಗದ ಪ್ರೇಕ್ಷಕರಿಗೂ ಫುಲ್ ಮೀಲ್ಸ್ ನಂತಿದೆ ಎಂಬ ವಿಚಾರ ಈಗಾಗಲೇ ಪಕ್ಕಾ ಆಗಿದೆ. ಮಲೆನಾಡು ಫ್ಲೇವರಿನಲ್ಲಿ ಮಿಂದೆದ್ದಂಥಾ ಕಥೆ ಮತ್ತು ಅದೇ ವಾತಾವರಣದಲ್ಲಿ ಉತ್ಪತ್ತಿಯಾದಂತಿರೋ ಕಾಮಿಡಿಯ ಸಾಥ್… ಇವಿಷ್ಟು ಅಂಶಗಳೊಂದಿಗೆ ಕೆರೆಬೇಟೆ ಮಾಸ್ ಲುಕ್ಕಿನಲ್ಲಿ ಕಂಗೊಳಿಸಿದೆ ಎಂಬ ನಂಬಿಕೆಯೂ ಬಲಗೊಂಡಿದೆ. ಸಾಮಾನ್ಯವಾಗಿ ಎಲ್ಲ ಪ್ರದೇಶಗಳಲ್ಲಿಯೂ ಆಯಾ ಭಾಷಾ ಶೈಲಿಗನುಗುಣವಾಗಿ ಹಾಸ್ಯಗಳಿದ್ದಾವೆ. ಆ ದಿಸೆಯಲ್ಲಿ ನೋಡಹೋದರೆ, ಮಲೆನಾಡು ಭಾಗದ ಹಾಸ್ಯಕ್ಕೆ ಬೇರೆಯದ್ದೇ ಮುದವಿದೆ. ಅದನ್ನು ಅಕ್ಷರಶಃ ಆವಾಹಿಸಿಕೊಂಡಂತಿರುವ ಪಾತ್ರಕ್ಕೆ ಕಾಮಿಡಿ ಕಿಲಾಡಿ ಖ್ಯಾತಿಯ ರಾಕೇಶ್ ಪೂಜಾರಿ (Rakesh Pujari) ಜೀವ ತುಂಬಿದ್ದಾರೆ.
Advertisement
ಕಾಮಿಡಿ ಕಿಲಾಡಿಗಳು ಶೋ ಮೂಲಕ ಅನೇಕ ಕಲಾವಿದರು ಚಿತ್ರರಂಗಕ್ಕೆ, ಕಿರುತೆರೆಗೆ ಆಗಮಿಸಿದ್ದಾರೆ. ಆ ಶೋ ಮೂಲಕ ಬೆಳಕು ಕಂಡು ಸದ್ಯ ಕಿರುತೆರೆ ಮತ್ತು ಹಿರಿತೆರೆಗಳಲ್ಲಿ ಬ್ಯುಸಿಯಾಗಿರುವವರು ರಾಕೇಶ್ ಪೂಜಾರಿ. ದಕ್ಷಿಣ ಕನ್ನಡ ಮೂಲದ ರಾಕೇಶ್ ಕಾಮಿಡಿಗೆ ಒಂದಷ್ಟು ಅಭಿಮಾನಿ ಬಳಗವಿದೆ. ಅವರೆಲ್ಲರೂ ಇದೀಗ ಕೆರೆಬೇಟೆಯತ್ತ ಕಣ್ಣಿಟ್ಟು ಕೂತಿದ್ದಾರೆ. ರಾಕೇಶ್ ಇಲ್ಲಿ ಕೋದ ಎಂಬ ಪಾತ್ರವನ್ನು ನಿಭಾಯಿಸಿದ್ದಾರೆ. ನಾಯಕನ ಆಸುಪಾಸಲ್ಲಿ ಸುಳಿದಾಡುತ್ತಾ, ಹೆಜ್ಜೆ ಹೆಜ್ಜೆಗೂ ನಗು ಚಿಮ್ಮಿಸುತ್ತಾ, ಒಂದಷ್ಟು ಎಡವಟ್ಟು, ತಿರುವುಗಳಿಗೆ ಕಾರಣೀಭೂತವಾಗುವ ಈ ಪಾತ್ರ ರಾಕೇಶ್ ಪಾಲಿಗೆ ಭಿನ್ನ ಅನುಭವವನ್ನು ಕಟ್ಟಿಕೊಟ್ಟಿದೆ.
Advertisement
Advertisement
ದಕ್ಷಿಣ ಕನ್ನಡ ಮತ್ತು ಮಲೆನಾಡು ಒಂದಕ್ಕೊಂದು ಹೊಂದಿಕೊಂಡಂತಿರೋ ಪ್ರದೇಶ. ಇಲ್ಲಿನ ಸಂಸ್ಕೃತಿ, ಜನಜೀವನದಲ್ಲಿಯೂ ಸಾಮ್ಯತೆಯಿದೆ. ಆದರೆ, ಒಂದಕ್ಕೊಂದು ಅಪರಿಚಿತವಾದ ಆಚರಣೆಗಳು ಇಲ್ಲಿದ್ದಾವೆ. ಘಟ್ಟದ ಮೇಲಿನ ಅಂಥಾ ವಾತಾವರಣದ ಭಾಗವಾಗಿ, ಅದರಲ್ಲೊಂದು ಪಾತ್ರವಾಗುವ ಅವಕಾಶವನ್ನು ರಾಕೇಶ್ ಸಂಭ್ರಮಿಸಿದ್ದಾರಂತೆ. ಅದರಲ್ಲಿಯೂ ಬೇರೆಯದ್ದೇ ಚಹರೆ ಹೊಂದಿರೋ ಈ ಕಥೆ ಮತ್ತು ಅದರ ಪಾತ್ರ ಸಿನಿಮಾರಂಗದಲ್ಲಿನ ತನ್ನ ಮುಂದಿನ ಹೆಜ್ಜೆಗಳಿಗೆ ಹೊಸ ಆವೇಗ ನೀಡುತ್ತದೆಂಬ ದೃಢ ನಂಬಿಕೆ ರಾಕೇಶ್ ರಲ್ಲಿದೆ. ಈಗಾಗಲೇ, ಅನೇಕ ಸಿನಿಮಾಗಳಲ್ಲಿ ಥರ ಥರದ ಪಾತ್ರಗಳನ್ನು ಮಾಡಿರುವ ರಾಕೇಶ್, ಕೋದನ ಗೆಟಪ್ಪಿನಲ್ಲಿ ಪ್ರೇಕ್ಷಕರ ಮುಂದೆ ಬರುವ ಕ್ಷಣಗಳು ಹತ್ತಿರಾಗಿವೆ.
Advertisement
ಜನಮನ ಸಿನಿಮಾಸ್ ಬ್ಯಾನರಿನಡಿಯಲ್ಲಿ ಜೈಶಂಕರ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಕೇವಲ ಕಥೆ ಮಾತ್ರವಲ್ಲದೇ ತಾಂತ್ರಿಕವಾಗಿಯೂ ಶ್ರೀಮಂತಿಕೆ ಹೊಂದಿರುವ ಕೆರೆಬೇಟೆಯಲ್ಲಿ ಗಗನ್ ಬದೇರಿಯಾ ಸಂಗೀತ, ಕೀರ್ತನ್ ಪೂಜಾರಿ ಛಾಯಾಗ್ರಹಣ, ಜ್ಞಾನೇಶ್-ಯುವರತ್ನ ಸಂಕಲನ, ಕಂಬಿ ರಾಜು ನೃತ್ಯ ನಿರ್ದೇಶನ ಮತ್ತು ಗೋಪಾಲ್ ದೇಶಪಾಂಡೆ, ಹರಿಣಿ, ಸಂಪತ್ ಕುಮಾರ್, ರಘು ರಾಜಾನಂದ, ರಾಮ್ ದಾಸ್, ರಾಕೇಶ್ ಪೂಜಾರಿ, ಚಿಲ್ಲರ್ ಮಂಜು, ಗೌತಮ್ ರಾಜ್, ವರ್ಧನ್ ತೀರ್ಥಹಳ್ಳಿ, ರಣಧೀರ್ ಗೌಡ, ಶೇಖರ್ ಕೆ, ದೇವಿಪ್ರಕಾಶ್, ಆಶಾ ಸುಜಯ್, ವಿದ್ಯಾ, ಕಿರಣ್ ರಾವ್, ಗೀತಾ ಮೈಸೂರು ಮುಂತಾದವರ ತಾರಾಗಣವಿದೆ. ಅಂದಹಾಗೆ, ಕೆರೆಬೇಟೆ ಚಿತ್ರ ಇದೇ ಮಾರ್ಚ್ 15ರಂದು ರಾಜ್ಯಾದ್ಯಂತ ತೆರೆಗಾಣಲಿದೆ.