Connect with us

Karnataka

ಪ್ರಧಾನಿ ಮೋದಿಗೆ ಪ್ರಾಣೇಶ್ ಅಭಿನಂದನೆ

Published

on

ಕೊಪ್ಪಳ: ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಮಾಡಿದ್ದಕ್ಕೆ ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್ ಮೆಚ್ಚುಗೆ ವ್ಯಕ್ತಪಡಿಸಿದ್ದು, ಪ್ರಧಾನಿ ನರೇಂದ್ರ ಮೋದಿಯವರಿಗೆ ಅಭಿನಂದನಾ ಪತ್ರ ಬರೆದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರೇ ಯಾವುದೇ ಸ್ವಾರ್ಥವಿಲ್ಲದೆ ರಾಷ್ಟ್ರದ ಏಳಿಗೆಯ ಪಣತೊಟ್ಟು ಕಾಯ್ದೆ ಜಾರಿ ಮಾಡಿದ್ದೀರಿ. ಇದಕ್ಕಾಗಿ ನಿಮಗೆ ಅಭಿನಂದನೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ದೇಶದಲ್ಲಿ ಸಮಾನತೆ, ಮಾನವೀಯ ಮೌಲ್ಯಗಳನ್ನು ನಿರಂತರವಾಗಿ ತಲುಪಿಸಲುವಲ್ಲಿ ಯಶಸ್ವಿಯಾಗಿದ್ದೀರಿ. ಇದೊಂದು ರೀತಿಯ ತಪಸ್ಸು ಎಂದು ಪ್ರಾಣೇಶ್ ಅವರು ಅಭಿನಂದನಾ ಪತ್ರದಲ್ಲಿ ಕೊಂಡಾಡಿದ್ದಾರೆ. ಅಲ್ಲದೆ ಇನ್ನೂ ಬಾಕಿ ಉಳಿದಿರುವ ಕಾನೂನುಗಳನ್ನೂ ಜಾರಿಗೆ ತರಲು ತಮಗೆ ಶಕ್ತಿ, ಆರೋಗ್ಯ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಪತ್ರದಲ್ಲೇನಿದೆ?
ನಮ್ಮ ನಾಡು, ದೇಶ ಮಹಾತ್ಮರ, ಸಂತರ, ಯೋಗಿಗಳ ತಪೋಭೂಯಾಗಿದ್ದು, ಇಂತಹ ಪುಣ್ಯಭೂಮಿಯ ಭದ್ರತೆಯ ಬೆಳವಣಿಗೆಗೆ ಸ್ವಾರ್ಥ ದುರಾಸೆಗಳಿಲ್ಲದೆ ಸೇವೆಗೈದು ರಾಷ್ಟ್ರದ ರಕ್ಷಣೆಗೆ ಪಣತೊಟ್ಟು, ದೇಶದ ಐಕ್ಯತೆ, ಭದ್ರತೆಗೆ ಪೌರತ್ವ ತಿದ್ದುಪಡಿ ಕಾಯ್ದೆ 2019 ಜಾರಿಗೆ ತಂದಿದ್ದೀರಿ ನಿಮಗೆ ಅಭಿನಂದನೆಗಳು.

ಭಾರತ ಸ್ವಾತಂತ್ರ್ಯ ಪಡೆದ ನಂತರ ದೇಶದ ಭದ್ರತೆಗಾಗಿ ಯೋಜನೆ ರೂಪಿಸದೇ ದೇಶ ಬಲಹೀನತೆಯಿಂದ ಕೂಡಿತ್ತು. ಈ ವ್ಯವಸ್ಥೆಯನ್ನು ಸರಿಪಡಿಸಲು ತಮ್ಮ ಅವಿರತ ಪರಿಶ್ರಮದಿಂದ ಭಾರತವು ಪ್ರಪಂಚದಲ್ಲೇ ಭದ್ರತೆಯಲ್ಲಿ ಅಗ್ರಸ್ಥಾನ ಪಡೆಯುವಂತಾಯಿತು. ಜನಸಾಮಾನ್ಯರ ಆಶೋತ್ತರ ಈಡೇರಿಸಲು ಸತತ ಪ್ರಯತ್ನದಿಂದ ಜಮ್ಮು-ಕಾಶ್ಮೀರದ 370ನೇ ವಿಧಿ ಹಾಗೂ 35ಎ ರದ್ದುಗೊಳಿಸುವ ಮೂಲಕ ಡಾ.ಶ್ಯಾಮ್‍ಪ್ರಸಾದ್ ಮುಖರ್ಜಿಯವರ ಆಶಯವನ್ನು ಈಡೇರಿಸಿದ ಕೀರ್ತಿ ತಮಗೆ ಸಲ್ಲುತ್ತದೆ.

ಈ ದೇಶದ ಕೋಟ್ಯಂತರ ಜನರ ಭಾವನೆಗಳ ಆರಾಧ್ಯ ದೈವವಾಗಿದ್ದ, ಶ್ರೀರಾಮ ಮಂದಿರದ ಕನಸು ಕೂಡ ನಿಮ್ಮ ಸರ್ಕಾರದ ಅವಧಿಯಲ್ಲಿ ಈಡೇರಿದ್ದು ಸಂತಸದ ವಿಷಯವಾಗಿದೆ. ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತಂದಿರುವುದು ಅಖಂಡ ಭಾರತದ ಪರಿಕಲ್ಪನೆಗೆ ಸಾಕ್ಷಿಯಾಗಿದೆ. ರಾಜಕೀಯ ದುರುದ್ದೇಶ, ಮತಾಂಧತೆ, ಭಯೋತ್ಪಾದನೆ ರಾಷ್ಟ್ರದ ಶಾಂತಿಗೆ ಭಂಗ ತರಲು ಯತ್ನಿಸಿದ ನೆರೆ ರಾಷ್ಟ್ರಗಳ ಕಿರುಕುಳಗಳಿಗೆ ತಾವು ತಕ್ಕ ಉತ್ತರ ನೀಡಿದ್ದೀರಿ. ಈ ಮೂಲಕ ದೇಶದ ಶಾಂತಿ ಸಹನೆ ಕಾಪಾಡುವುದರ ಜೊತೆಗೆ ದೇಶದ ಸಂಪತ್ತನ್ನು ಸದುಪಯೋಗಪಡಿಸಿಕೊಂಡು ಅಭಿವೃದ್ಧಿ ಪಥದತ್ತ ಸಾಗುವಲ್ಲಿ ದಿಟ್ಟ ನಿರ್ಧಾರಗಳನ್ನು ಕೈಗೊಂಡಿರುವುದು ಶ್ಲಾಘನೀಯವಾಗಿದೆ.

Click to comment

Leave a Reply

Your email address will not be published. Required fields are marked *