ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ವಿರುದ್ಧ ವಾರಣಾಸಿ (Varanasi) ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿರುವ ಹಾಸ್ಯನಟ ಶ್ಯಾಮ್ ರಂಗೀಲಾ (Shyam Rangeela) ಪರವಾಗಿ ಕನ್ನಡದ ನಟ ಕಿಶೋರ್ (Kishore) ಬೆಂಬಲ ಘೋಷಿಸಿದ್ದಾರೆ. ಈ ಕುರಿತಂತೆ ಅವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ದಯವಿಟ್ಟು ಶ್ಯಾಮ್ ರಂಗೀಲಾರಿಗೆ ಓಟು ಹಾಕಿ. ಅವರಿಗೂ ಒಂದು ಅವಕಾಶ ಕೊಡಿ. ನಿಮ್ಮ ನಿರ್ಣಯದ ಬಗ್ಗೆ ಹೆಮ್ಮೆಯಿದೆ ಶ್ಯಾಮ್ ರಂಗೀಲಾ. ನೀವು ವಾರಣಾಸಿಯ ಜನಗಳಿಗೆ ಖಂಡಿತಾ ಮೋದಿಗಿಂತ ಪ್ರಾಮಾಣಿಕ ಸೇವೆ ಸಲ್ಲಿಸುತ್ತೀರೆಂಬ ನಂಬಿಕೆಯಿದೆ. ನಿಮಗೆ ಜಯವಾಗಲಿ. ನೀವು ಸಂಸದರಾಗಿ ಜನಸೇವೆಗೆ ನಿಂತರೆ ನಾವು ನಿಮ್ಮ ಕಾಮಿಡಿ ಮಿಸ್ ಮಾಡಬಹುದೇನೊ. ಆದರೆ ಮೋದಿ ನೀವು ಬಿಟ್ಟ ಸ್ಥಾನ ತುಂಬಿ ನಿಮಗಿಂತ ಒಳ್ಳೆಯ ಕಮೀಡಿಯನ್ ಆಗಿ ನಮ್ಮನ್ನು ರಂಜಿಸುವುದರಲ್ಲಿ ನಮಗ್ಯಾವ ಅನುಮಾನವೂ ಇಲ್ಲ. ಅದರ ಸಾಧ್ಯತೆಗಳನ್ನು ಕಳೆದ 10 ವರ್ಷಗಳಲ್ಲಿ ದೇಶದ ಪ್ರಜೆಗಳೆಲ್ಲ ಕಂಡಿದ್ದೇವೆ ಎಂದು ಕಿಶೋರ್ ಪೋಸ್ಟ್ ಮಾಡಿದ್ದಾರೆ.
ಶ್ಯಾಮ್ ಈ ಹಿಂದೆ ತಮ್ಮ ಎಕ್ಸ್ ಖಾತೆಯಲ್ಲಿ ವೀಡಿಯೋ ಹಂಚಿಕೊಂಡಿದ್ದರು. ವಾರಣಾಸಿಯಿಂದ (Varanasi) ಚುನಾವಣೆಗೆ ಸ್ಪರ್ಧೆ ಮಾಡುವುದಾಗಿ ಘೋಷಿಸಿದ್ದೇನೆ. ನಿಮ್ಮಲ್ಲರಿಂದ ನನಗೆ ಸಿಗುತ್ತಿರುವ ಪ್ರೀತಿ, ಬೆಂಬಲದಿಂದ ನಾನು ಉತ್ಸುಕನಾಗಿದ್ದೇನೆ. ನಾಮಪತ್ರ ಸಲ್ಲಿಕೆ ಹಾಗೂ ಮುಂದಿನ ಮಾಹಿತಿಗಳ ಬಗ್ಗೆ ವೀಡಿಯೋ ಸಂದೇಶಗಳ ಮೂಲಕ ನಿಮಗೆ ತಿಳಿಸುತ್ತಿರುತ್ತೇನೆ ಎಂದು ಹೇಳಿದ್ದಾರೆ.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 2014ರಲ್ಲಿ ನಾನು ಮೋದಿ ಅಭಿಮಾನಿಯಾಗಿದ್ದೆ. ಪ್ರಧಾನಿಗಳನ್ನು ಬೆಂಬಲಿಸುವ ಹಲವು ವೀಡಿಯೋಗಳನ್ನು ಶೇರ್ ಮಾಡಿದ್ದೆ. ರಾಹುಲ್ ಗಾಂಧಿ (Rahul Gandhi), ಅರವಿಂದ್ ಕೇಜ್ರಿವಾಲ್ ಅವರಿಗೆ ವಿರುದ್ಧವಾದ ವೀಡಿಯೋಗಳನ್ನು ಶೇರ್ ಮಾಡಿದ್ದೆ. ನಾನು ಬಿಜೆಪಿ ಬಿಟ್ಟು ಬೇರೆ ಯಾವುದೇ ಪಕ್ಷಕ್ಕೆ ಮತ ಹಾಕಲ್ಲ ಎಂದು ಶಪಥ ಮಾಡಿದ್ದೆ. ಆದ್ರೆ ಕಳೆದ 10 ವರ್ಷಗಳಲ್ಲಿ ಪರಿಸ್ಥಿತಿ ಬದಲಾಗಿದೆ. ಆದ್ದರಿಂದಲೇ ನಾನು ಈ ಬಾರಿ ವಾರಣಾಸಿಯಿಂದ ಪ್ರಧಾನಿ ವಿರುದ್ಧ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದರು.