ಕನ್ನಡದ ಹಾಸ್ಯ ನಟ ಬ್ಯಾಂಕ್ ಜನಾರ್ಧನ್ (Bank Janardhan) ಅವರ ಅಂತ್ಯಕ್ರಿಯೆ ಪೀಣ್ಯಾದ ಚಿತಾಗಾರದಲ್ಲಿ ಮರಾಠಾ ಕ್ಷತ್ರೀಯ ಸಂಪ್ರದಾಯದಂತೆ ಜರುಗಿದೆ. ಪುತ್ರ ಗುರುಪ್ರಸಾದ್ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದ್ದಾರೆ. ಈ ವೇಳೆ, ನಟನ ಅಂತ್ಯಕ್ರಿಯೆಯಲ್ಲಿ ಟೆನ್ನಿಸ್ ಕೃಷ್ಣ, ಗಣೇಶ್ ರಾವ್, ಡಿಂಗ್ರಿ ನಾಗರಾಜ್ ಭಾಗಿಯಾಗಿದ್ದಾರೆ. ಇದನ್ನೂ ಓದಿ:ಬ್ಯಾಂಕ್ ಜನಾರ್ಧನ್ ಸಾವಿನ ಸುದ್ದಿ ಕೇಳಿ ಆಘಾತವಾಯ್ತು: ದೊಡ್ಡಣ್ಣ ಭಾವುಕ
ಅಂತ್ಯಕ್ರಿಯೆಯ ಬಳಿಕ ಬ್ಯಾಂಕ್ ಜನಾರ್ದನ ಪುತ್ರ ಗುರುಪ್ರಸಾದ್ ಮಾತನಾಡಿ, ಇವತ್ತು ತಂದೆ ಅಂತ್ಯಕ್ರಿಯೆ ಮುಗಿದಿದೆ. ಬೆಳಗ್ಗೆಯಿಂದ ಎಲ್ಲರೂ ಬಂದು ಅಂತಿಮ ದರ್ಶನ ಪಡೆದಿದ್ದಾರೆ. ಕರ್ನಾಟಕ ಜನತೆಗೆ ಧನ್ಯವಾದ ಎಂದಿದ್ದಾರೆ. ಇಷ್ಟು ವರ್ಷಗಳ ಕಾಲ ನಮ್ಮ ತಂದೆಯನ್ನು ಹಾರೈಸಿ ಪ್ರೋತ್ಸಾಹಿಸಿದ್ದೀರಾ. ನನ್ನ ತಂದೆ ಮುಂದೆ ಕರ್ನಾಟಕದಲ್ಲೇ ಹುಟ್ಟಬೇಕು. ಇಲ್ಲೇ ಕಲಾವಿದನಾಗಿ ಸೇವೆ ಸಲ್ಲಿಸಬೇಕು ಅನ್ನೋದು ನನ್ನಾಸೆ ಎಂದು ಭಾವುಕರಾಗಿದ್ದಾರೆ. ಈ ದಿನದ ಜರ್ನಿಯಲ್ಲಿ ತುಂಬ ಜನ ಸಹಾಯಕ್ಕೆ ನಿಂತಿದ್ದಾರೆ. ಕಲಾವಿದರ ಸಂಘದ ಸದಸ್ಯರು ಸಹಾಯ ಮಾಡಿದ್ದಾರೆ. ನಮ್ಮ ತಂದೆ ಸ್ನೇಹಿತರಿಗೆ ಧನ್ಯವಾದಗಳು ಎಂದಿದ್ದಾರೆ. ಇನ್ನೂ 3ನೇ ದಿನ ಕಾರ್ಯ ಬುಧವಾರ ಬೆಳಗ್ಗೆ 8 ಗಂಟೆಗೆ ನಡೆಯುತ್ತದೆ. ಬಳಿಕ ಅಸ್ಥಿ ವಿಸರ್ಜನೆಗೆ ಶ್ರೀರಂಗಪಟ್ಟಣಕ್ಕೆ ಹೋಗುತ್ತವೆ. 11ನೇ ದಿನದ ಕಾರ್ಯ ನಮ್ಮ ಮನೆಯಲ್ಲಿಯೇ ನಡೆಯಲಿದೆ ಎಂದು ಬ್ಯಾಕ್ ಜನಾರ್ಧನ್ ಪುತ್ರ ಮಾಹಿತಿ ನೀಡಿದ್ದಾರೆ.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ನಟನಿಗೆ ತಡರಾತ್ರಿ ರಾತ್ರಿ ಏಕಾಏಕಿ ಉಸಿರಾಟ ಸಮಸ್ಯೆ ಕಾಣಿಸಿಕೊಂಡಿದೆ. ಕೂಡಲೇ ಆಸ್ಪತ್ರೆಗೆ ಕರೆತಂದಿದ್ದಾದರೂ ಫಲಕಾರಿಯಾಗದೇ ಇಂದು ಬೆಳಗಿನ ಜಾವ 2:30ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ. ಇದನ್ನೂ ಓದಿ:ಕನ್ನಡ ಚಿತ್ರರಂಗದ ಹಿರಿಯ ಪೋಷಕ ನಟ ಬ್ಯಾಂಕ್ ಜನಾರ್ಧನ್ ವಿಧಿವಶ
ಪೋಷಕ ನಟ ಪಾತ್ರಕ್ಕೆ ಹೆಸರುವಾಸಿಯಾಗಿದ್ದ ಜನಾರ್ಧನ್ ಅವರು ಸುಮಾರು 500ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾ ಅಲ್ಲದೇ, ಕಿರುತೆರೆ ಹಾಗೂ ರಂಗಭೂಮಿಯಲ್ಲೂ ಛಾಪು ಮೂಡಿಸಿದ್ದಾರೆ.
80, 90ರ ದಶಕದ ಬಹುಬೇಡಿಕೆ ಹೊಂದಿದ್ದ ಹಾಸ್ಯನಟರಲ್ಲಿ ಒಬ್ಬರಾದ ಜನಾರ್ಧನ್ ಉಪೇಂದ್ರ ನಿರ್ದೇಶನದ ಶ್, ತರ್ಲೆ ನನ್ಮಗ, ಬೆಳ್ಳಿಯಪ್ಪ ಬಂಗಾರಪ್ಪ, ಗಣೇಶ ಸುಬ್ರಮಣ್ಯ, ಕೌರವ ಚಿತ್ರಗಳಲ್ಲಿ ಗಮನ ಸೆಳೆಯುವ ಪಾತ್ರ ನಿರ್ವಹಿಸಿದ್ದಾರೆ. ಮಾಂಗಲ್ಯ, ರೋಬೋ ಫ್ಯಾಮಿಲಿ, ಪಾಪ ಪಾಂಡು, ಜೋಕಾಲಿ ಸೇರಿದಂತೆ ಸಾಲು ಸಾಲು ಸೀರಿಯಲ್‌ಗಳಲ್ಲಿ ಬಣ್ಣ ಹಚ್ಚಿ ಸೈ ಎನಿಸಿಕೊಂಡಿದ್ದಾರೆ.