ಉಡುಪಿ: ಸುತ್ತಾಟ ಮಾಡ್ಬೇಕು, ಟೆನ್ಶನ್ ಫ್ರೀ ಮಾಡ್ಕೋಬೇಕು ಅಂತ ಉಡುಪಿಗೆ ಬರೋ ಐಡಿಯಾ ಮಾಡಿರೋರಿಗೆ ಇದು ಶುಭಸುದ್ದಿ. ಇಷ್ಟು ದಿನ ಉಡುಪಿಗೆ ಬರೋ ಪ್ರವಾಸಿಗರು ಸಮುದ್ರ ನೋಡಿ- ಬೋಟಿಂಗ್ ಮಾಡಿ ಖುಷಿ ಪಡ್ತಾಯಿದ್ರು. ಇನ್ಮುಂದೆ ಮಲ್ಪೆಗೆ ಬರೋ ಪ್ರವಾಸಿಗರು ಸಮುದ್ರದ ನಡುವೆ ವಾಕ್ ಮಾಡ್ಬಹುದು. ಸುತ್ತಲೂ ಸಮುದ್ರ ಕಾಣೋ ಥರ ಸೆಲ್ಫೀ ತೆಗೆದು ಎಂಜಾಯ್ ಮಾಡ್ಬಹುದು.
ಮಲ್ಪೆ ಕಡಲ ತೀರ ಭಾರತದಲ್ಲೇ ಸೇಫೆಸ್ಟ್ ಕಡಲತೀರ. ಅರಬ್ಬೀ ಸಮುದ್ರದ ಸೌಂದರ್ಯ ನೋಡಲು ಜನ ಎಲ್ಲೆಲ್ಲಿಂದಲೋ ಉಡುಪಿಗೆ ಬರ್ತಾರೆ. ಉಡುಪಿಯಲ್ಲಿರೋ ಪ್ರವಾಸಿ ತಾಣಗಳ ಪಟ್ಟಿಗೆ ಹೊಸಾ ಸೇರ್ಪಡೆಯಾಗಿದೆ. ಅದೇ ಸೀ ವಾಕ್..!
ಸಿಂಪಲ್ಲಾಗಿ ಹೇಳೋದಾದ್ರೆ ಸೀ ವಾಕ್ ಅಂದ್ರೆ ಸಮುದ್ರದ ಮೇಲೆ ನಡೆದಾಡೋದು. ಇಂತದ್ದೊಂದು ಅವಕಾಶ ಮಲ್ಪೆಯಲ್ಲಿ ಶುರುವಾಗಿದೆ. ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಿ ಜನರನ್ನು ಹೆಚ್ಚು ಸಂಖ್ಯೆಯಲ್ಲಿ ಸೆಳೆಯುವ ಉದ್ದೇಶದಿಂದ ಸೀ ವಾಕ್ ಆರಂಭಿಸಲಾಗಿದೆ. ಮಲ್ಪೆ ಬಂದರು ಸಮೀಪದಲ್ಲಿ ಸೀ ವಾಕ್ ಟ್ರ್ಯಾಕ್ ಮಾಡಲಾಗಿದೆ. ಸಮುದ್ರದ ನಡುವೆ ಸುಮಾರು ಮುಕ್ಕಾಲು ಕಿಲೋಮೀಟರ್ ನಡ್ಕೊಂಡು ಹೋಗಿ ಸಮುದ್ರದ ಸೌಂದರ್ಯವನ್ನು ಆಸ್ವಾದಿಸಬಹುದು.
ಈ ಹಿಂದೆ ಮೀನುಗಾರಿಕಾ ಬೋಟ್ ಓಡಾಡಲು ಇಲ್ಲಿ ಉದ್ದಕ್ಕೆ ಕಲ್ಲನ್ನು ಹಾಕಿ ಅಲೆಗಳನ್ನು ತಡೆಯಲಾಗಿತ್ತು. ಇದೀಗ ಅದರ ಮೇಲೆ ಟ್ರ್ಯಾಕ್ ಮಾಡಿ ಸೀ ವಾಕ್ ಗೆ ಅವಕಾಶ ಮಾಡಿಕೊಡಲಾಗಿದೆ. ಸುಮಾರು 53 ಲಕ್ಷ ರೂಪಾಯಿ ವೆಚ್ಚದಲ್ಲಿ ತಡೆಗೋಡೆ, ವಾಕಿಂಗ್ ಟ್ರ್ಯಾಕ್- ದೀಪಸ್ತಂಭ, ರಸ್ತೆಯನ್ನು ನಿರ್ಮಾಣ ಮಾಡಲಾಗಿದೆ. ಇಂಟರ್ಲಾಕ್ ಟೈಲ್ಸ್ ಹಾಕಿ ಪಕ್ಕಾ ಟ್ರ್ಯಾಕ್ ನಿರ್ಮಾಣ ಮಾಡಲಾಗಿದೆ. ಜನ ಸಮುದ್ರದ ನಡುವೆ ಸಲೀಸಾಗಿ ಓಡಾಡೋ ಅವಕಾಶ ಇದು. ಸಮುದ್ರದ ಅಲೆಗಳಿಂದ ಏಳೋ ರಭಸ ಗಾಳಿಗೆ ಮೈಯ್ಯೊಡ್ಡುವ ಅವಕಾಶ ಜನರಿಗೆ ಸಿಕ್ಕಿದೆ.
ಸಚಿವ ಪ್ರಮೋದ್ ಮಧ್ವರಾಜ್ ರಾಜ್ಯದ ಮೊಟ್ಟ ಮೊದಲ ಸೀ ವಾಕ್ ಗೆ ಚಾಲನೆ ನೀಡಿದ್ದಾರೆ. ಕಡಲಿನ ಜೊತೆ ಕಡಲಾಳವನ್ನು ಕಂಡ ಜನರಿಗೆ ವಿಭಿನ್ನ ಅನುಭವವಾಗಿದೆ. ಕಡಲಿನಲ್ಲಿ ಓಡುವ ಬೋಟ್ಗಳನ್ನು ಪಕ್ಕದಲ್ಲೇ ನಿಂತು ನೋಡುವ ಅವಕಾಶ ಜನರಿಗೆ ಸಿಕ್ಕಿದೆ. ಈ ಕುರಿತು ಪಬ್ಲಿಕ್ ಟಿವಿ ಜೊತೆ ಸ್ಥಳೀಯ ನವೀನ್ ಕೊಳಲಗಿರಿ ಮಾತನಾಡಿ, ಉಡುಪಿಯಲ್ಲೇ ಇರುವವರು ನಾವು. ಆದ್ರೆ ಯಾವತ್ತೂ ಸೀ ವಾಕ್ ಮಾಡಿರಲಿಲ್ಲ. ಈ ಪ್ಲೇಸ್ ಡೇಂಜರಸ್ ಆಗಿತ್ತು. ಆದ್ರೆ ಈಗ ಪ್ರವಾಸಿ ತಾಣ ಆಗಿರೋದು ಬಹಳ ಸಂತಸವಾಗುತ್ತಿದೆ ಎಂದು ಅಭಿಪ್ರಾಯ ಹಂಚಿಕೊಂಡರು.
ಕೇರಳದಲ್ಲಿ ಒಂದು ಕಡೆ ಸೀ ವಾಕ್ ಇದೆ. ರಾಜ್ಯದಲ್ಲಿ ಮಲ್ಪೆ ಕಡಲ ತೀರದಲ್ಲಿ ಮೊದಲ ಸೀ ವಾಕ್ ನಿರ್ಮಾಣವಾಗಿದೆ. ಹುಣಸೂರಿನ ಅನಿತಾ ಮತ್ತು ಅನುಶಾ ಮಲ್ಪೆ ಸೀ ವಾಕ್ ಗೆ ಫುಲ್ ಫಿದಾ ಆಗಿದ್ರು. ಸಮುದ್ರದ ಆಳಕ್ಕೆ ಹೋಗಿ ಬಂದ ಅನುಭವ ಆಯ್ತು, ಮೀನು ಅಲೆಗಳ ನಡುವೆ ಹಾರೋದನ್ನು ನೋಡಿದೆವು. ಸಮುದ್ರದ ಮೇಲೆ ವಾಕ್ ಮಾಡಿದ ಅನುಭವ ಆಯ್ತು. ಮತ್ತೆ ಮತ್ತೆ ಬರಬೇಕು ಅಂತ ಡಿಸೈಡ್ ಮಾಡಿದ್ದೇವೆ, ಇದೊಂದು ಮರೆಯಲಾಗದ ಪ್ರವಾಸ ಅಂತ ಹೇಳಿದ್ರು.
ಮಲ್ಪೆ ಅಭಿವೃದ್ಧಿ ಸಮಿತಿ ಸೀ ವಾಕ್ ನ ಮೇಲ್ವಿಚಾರಣೆ ನೋಡಿಕೊಳ್ಳಲಿದೆ. ಸಮುದ್ರದ ಮೇಲೆ ಒಂದು ವಾಕ್ ಮಾಡೋ ಅನುಭವ ನಿಮ್ಗೂ ಆಗ್ಬೇಕೂಂದ್ರೆ ಉಡುಪಿಗೆ ಒಂದು ಸಾರಿ ಬನ್ನಿ. ಫ್ರೀಯಾಗಿ ಸೀ ಮೇಲೆ ವಾಕ್ ಮಾಡ್ಬಹುದು.