ಅಭಿಷೇಕ್ (Abhishek) ಅಂಬರೀಶ್-ಅವಿವಾ (Aviva) ಮದುವೆಯ ಬೀಗರೂಟ ನಾಳೆ ಮಂಡ್ಯದಲ್ಲಿ ನಡೆಯಲಿದೆ. ಮಂಡ್ಯದ ಸರ್ವ ಜನರೂ ಬೀಗರೂಟಕ್ಕೆ (Beegaruta) ಬರುವಂತೆ ಸುಮಲತಾ (Sumalatha) ಅಂಬರೀಶ್ ಆಹ್ವಾನ ನೀಡಿದ್ದಾರೆ. ಸುದೀರ್ಘ ಬರಹವೊಂದನ್ನು ಪೋಸ್ಟ್ ಮಾಡಿರುವ ಸುಮಲತಾ, ಕುಟುಂಬ ಸಮೇತ ಎಲ್ಲರೂ ಬೀಗರೂಟಕ್ಕೆ ಬರುವಂತೆ ವಿನಂತಿಸಿಕೊಂಡಿದ್ದಾರೆ.
Advertisement
ಸೋಷಿಯಲ್ ಮೀಡಿಯಾದ ಮೂಲಕ ಆಹ್ವಾನ ನೀಡಿರುವ ಸುಮಲತಾ, ‘ಮಂಡ್ಯ ಜಿಲ್ಲೆಯ ಆತ್ಮೀಯ ಜನತೆಗೆ ನಿಮ್ಮ ಸುಮಲತಾ ಅಂಬರೀಶ್ ಮಾಡುವ ನಮಸ್ಕಾರಗಳು. ತಮ್ಮೆಲ್ಲರ ಆಶೀರ್ವಾದ ಮತ್ತು ಶುಭ ಹಾರೈಕೆಗಳೊಂದಿಗೆ ನನ್ನ ಮಗನಾದ ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಮದುವೆಯನ್ನು ಮತ್ತು ಆರತಕ್ಷತೆ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ನೆರವೇರಿಸಿರುತ್ತೇನೆ. ಮಂಡ್ಯದ (Mandya) ಸ್ವಾಭಿಮಾನಿ ಜನತೆ ಅಂಬರೀಶ್ ಕುಟುಂಬದ ಮೇಲೆ ಇಟ್ಟಿರುವ ಪ್ರೀತಿ ವಾತ್ಸಲ್ಯ ಅಭಿಮಾನಕ್ಕೆ ನಾವು ಸದಾ ಚಿರಋಣಿಯಾಗಿರುತ್ತೇವೆ. ಅಭಿಷೇಕ್ ಹಾಗೂ ಅವಿವಾ ಮದುವೆಯ ಸಂಭ್ರಮವನ್ನು ತಮ್ಮೊಂದಿಗೆ ಹಂಚಿಕೊಳ್ಳುವ ಉದ್ದೇಶದಿಂದ ಇದೇ ಶುಕ್ರವಾರ, ದಿನಾಂಕ 16/06/2023 ರಂದು ಬೆಳಿಗ್ಗೆ 11:30 ರಿಂದ ಬೀಗರ ಔತಣವನ್ನು ಏರ್ಪಡಿಸಲಾಗಿದೆ. ಇದಕ್ಕಾಗಿ ಮಂಡ್ಯ ಬಳಿಯ ಗೆಜ್ಜಲಗೆರೆಯಲ್ಲಿ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. ಮದುವೆ ಕಾರ್ಯಕ್ರಮಗಳು ಮತ್ತು ಇನ್ನಿತರೆ ಕಾರ್ಯದ ಒತ್ತಡದಿಂದ ನಾನು ಖುದ್ದಾಗಿ ಬಂದು ಬೀಗರ ಔತಣಕ್ಕೆ ತಮ್ಮನ್ನು ಆಹ್ವಾನಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ತಾವೆಲ್ಲರೂ ಅನ್ಯತಾ ಭಾವಿಸದೆ ತಮ್ಮ ಕುಟುಂಬ ಸಮೇತರಾಗಿ ಬೀಗರ ಔತಣಕ್ಕೆ ಆಗಮಿಸಿ ನಮ್ಮ ಆತಿಥ್ಯವನ್ನು ಸ್ವೀಕರಿಸಿ, ವಧು ವರರನ್ನು ಆಶೀರ್ವದಿಸಬೇಕಾಗಿ ಈ ಮೂಲಕ ಕೋರುತ್ತೇನೆ. ಈ ಸಂದೇಶವನ್ನು ನನ್ನ ವೈಯಕ್ತಿಕ ಆಹ್ವಾನವೆಂದು ಭಾವಿಸಿ, ತಮ್ಮ ಕುಟುಂಬ ಸಮೇತರಾಗಿ ಬೀಗರ ಔತಣಕ್ಕೆ ಆಗಮಿಸಲು ಮತ್ತೊಮ್ಮೆ ಕೋರುತ್ತೇನೆ. ಅಂಬರೀಶ್ ಅವರ ಕುಟುಂಬಕ್ಕೆ ತಾವು ಇಲ್ಲಿಯವರೆಗೆ ತೋರಿದ ಪ್ರೀತಿ ವಿಶ್ವಾಸ ಮತ್ತು ಆಶೀರ್ವಾದವನ್ನು, ಇನ್ನು ಮುಂದೆಯೂ ಸಹ ನೀಡಲು ತಮ್ಮನ್ನು ಕೋರುತ್ತೇನೆ’ ಎಂದು ಬರೆದುಕೊಂಡಿದ್ದಾರೆ.
Advertisement
Advertisement
ಜನರಿಗೆ ಬೊಂಬಾಟ್ ಬಾಡೂಟ ಹಾಕಿಸಲು ಅಂಬಿ (Ambarish) ಕುಟುಂಬ ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದೆ. ಮಂಡ್ಯ ಜಿಲ್ಲೆಯ ಮದ್ದೂರು ಸಮೀಪದ ಗೆಜ್ಜಲಗೆರೆ ಕಾಲೋನಿ ಬಳಿಯ 15 ಎಕರೆ ಪ್ರದೇಶದಲ್ಲಿ ಈ ಬೀಗರ ಔತಣಕೂಟ ನಡೆಯಲಿದೆ. ಈ ಬೀಗರ ಊಟಕ್ಕೆ ಸುಮಾರು 50 ಸಾವಿರ ಜನರು ಆಗಮಿಸಿವ ನಿರೀಕ್ಷೆಯಲ್ಲಿ ಸಂಸದೆ ಸುಮಲತಾ ಅಂಬರೀಶ್ ಕುಟುಂಬಸ್ಥರು ಇದ್ದಾರೆ. ಹೀಗಾಗಿ ವಿಶಾಲ ಜಾಗದಲ್ಲಿ ಬೃಹತ್ ಜರ್ಮನ್ ಟೆಂಟ್ ಹಾಕಿ ಜನರು ಕುಳಿತು ಊಟ ಮಾಡಲು ವ್ಯವಸ್ಥೆ ಮಾಡಲಾಗಿದ್ದು, ಒಂದೇ ಬಾರಿಗೆ 4500 ಮಂದಿ ಕುಳಿತು ಊಟ ಮಾಡಲು ಆಸನದ ವ್ಯವಸ್ಥೆ ಮಾಡಲಾಗಿದೆ. ಅಭಿಷೇಕ್ ಅವಿವಾ ಅವರ ಮಂಡ್ಯದ ಬೀಗರ ಔತಣಕೂಟಕ್ಕೆ ರಾಜಕೀಯ ಹಾಗೂ ಸಿನಿಮಾ ರಂಗದ ಹಲವು ಗಣ್ಯರು ಭಾಗವಹಿಸುವ ಸಾಧ್ಯತೆ ಇದ್ದು ಹೀಗಾಗಿ ವಿಐಪಿಗಳಿಗೆ ಪ್ರತ್ಯೇಕ ಆಸನದ ವ್ಯವಸ್ಥೆ ಕಲ್ಪಿಸಲಾಗಿದೆ.
Advertisement
ನಾಳೆ ಬೆಳಿಗ್ಗೆ 11:30ರಿಂದ ಆರಂಭವಾಗಲಿರುವ ಔತಣಕೂಟದಲ್ಲಿ 5-6 ಟನ್ ಮಟನ್, 7 ಟನ್ ಚಿಕನ್ ಬಳಸಿ ಭರ್ಜರಿ ಬಾಡೂಟ ತಯಾರಿ ಮಾಡಲಾಗುತ್ತದೆ. ಮಂಡ್ಯ ಶೈಲಿಯಲ್ಲಿ ಬಾಡೂಟ ತಯಾರಿಯಾಗಲಿದ್ದು ಮಂಡ್ಯದ ಪ್ರಖ್ಯಾತ ಬಾಣಸಿಗರ ತಂಡದಿಂದ ಅಡುಗೆ ತಯಾರಿ ಕಾರ್ಯ ಇಂದು ರಾತ್ರಿಯಿಂದಲೇ ನಡೆಯುತ್ತದೆ. ಬೀಗರ ಔತಣಕೂಟ ಮೆನು ಮುದ್ದೆ, ಮಟನ್ ಬಿರಿಯಾನಿ, ಬೋಟಿ ಗೊಜ್ಜು, ಮಟನ್, ಎರಡು ಬಗೆಯ ಚಿಕನ್, ಮೊಟ್ಟೆ, ರೈಸ್, ತಿಳಿಸಾಂಬಾರ್, ಬೀಡಾ, ಐಸ್ ಕ್ರೀಂ, ಬಾಳೆಹಣ್ಣು ಇರಲಿದೆ.