ಸಿನಿಮಾ ತಾರೆಯರಾದ ಶ್ರುತಿ (Shruthi Krishna) ಮತ್ತು ಸಪ್ತಮಿ ಗೌಡ (Sapthami Gowda) ಪರಿಚಯಿಸಿದ ಎರಡು ಹೊಸ ಕತೆಗಳು ಕನ್ನಡ ವೀಕ್ಷಕರ ಮನಸ್ಸಿಗೆ ಲಗ್ಗೆ ಇಡುವಲ್ಲಿ ಸಕ್ಸಸ್ ಕಂಡಿದೆ. ಸದಾ ವಿಭಿನ್ನ ಕತೆಗಳನ್ನು ಹೇಳುತ್ತಾ ಬಂದಿರುವ ಕಲರ್ಸ್ ಕನ್ನಡ ಚಾನೆಲ್ ಇದೀಗ ಮತ್ತೆರೆಡು ಹೊಸ ಧಾರಾವಾಹಿಗಳ ಮೋಡಿ ಮಾಡುತ್ತಿದ್ದಾರೆ. ‘ವಧು’ ಮತ್ತು ‘ಯಜಮಾನ’ ದೈನಿಕ ಧಾರಾವಾಹಿಗಳು ಜ.27ರಂದು ಶುರುವಾಗಿ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸುತ್ತಿದೆ.
View this post on Instagram
ಜ.27ರಂದು ಶುರುವಾದ ಜೋಡಿ ಕತೆಗಳಾದ ಡಿವೋರ್ಸ್ ಲಾಯರ್ ಮದುವೆ ಕತೆ ‘ವಧು’ ರಾತ್ರಿ 9.30ಕ್ಕೆ, ಕಾಂಟ್ರಾಕ್ಟ್ ಮದುವೆ ಕತೆ ‘ಯಜಮಾನ’ ರಾತ್ರಿ 10 ಗಂಟೆಗೆ ಪ್ರಸಾರವಾಗುತ್ತಿದೆ. ಎರಡು ಸೀರಿಯಲ್‌ಗಳನ್ನು ಟಿವಿ ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ.
View this post on Instagram
ಸಂಬಂಧಗಳನ್ನು ಪ್ರೀತಿಸೋ, ಅಷ್ಟೇ ಗೌರವಿಸುವ ‘ವಧು’ ಒಬ್ಬ ಅವಿವಾಹಿತೆ, ವೃತ್ತಿಯಲ್ಲಿ ಡಿವೋರ್ಸ್ ಲಾಯರ್. ಮನುಷ್ಯ ಸಂಬಂಧಗಳ ಬಗ್ಗೆ ಅವಳಿಗಿರುವ ಗೌರವವೇ ಅವಳನ್ನು ತನ್ನ ವೃತ್ತಿಯಲ್ಲಿ ಹಿಂದುಳಿಯುವಂತೆ ಮಾಡಿದೆ ಅಂದ್ರೂ ತಪ್ಪಾಗಲ್ಲ. ಗಂಡ ಹೆಂಡ್ತಿ ನಡುವೆ ಬಿರುಕು ಮೂಡಿ ಡಿವೋರ್ಸ್ ಕೇಳಿ ಬಂದ ಜೋಡಿಗಳ ನಡುವೆ ಸಾಮರಸ್ಯ ಮೂಡಿಸಿ ಅವ್ರನ್ನ ಒಂದು ಮಾಡುವುದರಲ್ಲೇ ಅವಳಿಗೆ ಆಸಕ್ತಿ. ಹೀಗಿರುವಾಗ ಒಂದು ಮಹತ್ವದ ಕೇಸು ಎಲ್ಲವನ್ನೂ ತಲೆಕೆಳಗು ಮಾಡುತ್ತದೆ. ಮೋಸ್ಟ್ ಸಕ್ಸಸ್ ಫುಲ್ ಬ್ಯುಸಿನೆಸ್ ಮ್ಯಾನ್ ಸಾರ್ಥಕ್ ದಾಂಪತ್ಯದಲ್ಲಿ ಬಿರುಕುಂಟಾಗಿ, ಪತ್ನಿ ಪ್ರಿಯಾಂಕಾ ಡಿವೋರ್ಸ್ ಕೇಸ್ ಫೈಲ್ ಮಾಡಿದಾಗ ವಧು ಹತ್ತಿರ ಸಹಾಯ ಕೋರಿ ಬರುತ್ತಾರೆ. ಈ ವೇಳೆ ಕತೆ ಕುತೂಹಲಕರ ತಿರುವು ಪಡೆಯುತ್ತದೆ.
ಸಂಬಂಧಗಳನ್ನು ಪರೀಕ್ಷೆಗೊಳಪಡಿಸುವ ‘ವಧು’ ಧಾರಾವಾಹಿಯು ವೃತ್ತಿಧರ್ಮ ಮತ್ತು ಆತ್ಮಸಾಕ್ಷಿಗಳ ನಡುವಿನ ತಿಕ್ಕಾಟವನ್ನು ಹೇಳುತ್ತದೆ. ಪ್ರೀತಿ, ಮೋಸ ಮತ್ತು ನಂಬಿಕೆಗಳು ನಮ್ಮನ್ನು ಹೇಗೆಲ್ಲಾ ಘಾಸಿಗೊಳಿಸಬಹುದೆಂಬುದನ್ನು ಬಿಡಿಸಿಡುತ್ತದೆ. ತನ್ನ ಭಾವನೆಗಳ ಜೊತೆಗೆ ಗುದ್ದಾಡುತ್ತಲೇ ತನಗೆ ಸಿಕ್ಕಿರುವ ಈ ಹೊಸ ಕೇಸನ್ನು ‘ವಧು’ ಸರಿಯಾಗಿ ನಿಭಾಯಿಸುತ್ತಾಳಾ? ಪ್ರೀತಿ ಮತ್ತು ಬದ್ಧತೆಗಳ ಬಗೆಗಿನ ಅವಳ ನಿಲುವುಗಳನ್ನು ಈ ಕೇಸ್ ಬದಲಾಯಿಸುತ್ತಾ ಅನ್ನುವುದೇ ಕತೆಯನ್ನು ಮುನ್ನೆಡೆಸುವ ಎಳೆಯಾಗಿದೆ. ಇನ್ನೂ ಹೆಸರಾಂತ ಕಲಾವಿದರಾದ ವಿನಯಾ ಪ್ರಸಾದ್, ಸುಧಾ ಬೆಳವಾಡಿ, ರವಿ ಭಟ್, ರವಿ ಕುಮಾರ್ ಮತ್ತು ರೇಖಾ ಸಾಗರ್ ಅವರು ಅಭಿನಯಿಸಿದ್ದಾರೆ. ಸಾರ್ಥಕ್ ಪಾತ್ರದಲ್ಲಿ ‘ಲಕ್ಷಣ’ ಧಾರಾವಾಹಿ ಖ್ಯಾತಿಯ ಅಭಿಷೇಕ್ ಶ್ರೀಕಾಂತ್, ವಧು ಪಾತ್ರದಲ್ಲಿ ದುರ್ಗಾಶ್ರೀ ಮತ್ತು ಪ್ರಿಯಾಂಕಾ ಪಾತ್ರದಲ್ಲಿ ಸೋನಿ ಮುಲೇವಾ ನಟಿಸುತ್ತಿದ್ದಾರೆ.
ಇನ್ನೂ ‘ಯಜಮಾನ’ ಸೀರಿಯಲ್‌ನಲ್ಲಿ ಚೂರೂ ಸ್ವಾರ್ಥವಿಲ್ಲದ ಸರಳ ವ್ಯಕ್ತಿ ರಘುಗೆ ತನ್ನ ಕುಟುಂಬದ ಪ್ರೀತಿ ಗಳಿಸುವ ಮಹದಾಸೆ. ಝಾನ್ಸಿ ಹಾಗಲ್ಲ. ತಾತನ ಮಡಿಲಲ್ಲಿ ಬೆಳೆದ ಈಕೆ ಗಂಡಸರನ್ನು ದ್ವೇಷಿಸುವ ಹಠಮಾರಿ ಹುಡುಗಿ. ವಿಧಿ ಇವರಿಬ್ಬರನ್ನೂ ಒಂದು ಮದುವೆಯ ರೂಪದಲ್ಲಿ ಹತ್ತಿರ ತರುತ್ತದೆ. ತನ್ನ ಕಷ್ಟದಲ್ಲಿರುವ ಕುಟುಂಬದ ಒಳಿತಿಗೆ ಈ ಮದುವೆ ದಾರಿಯಾದೀತೆಂದು ಬಗೆಯುವ ರಘು ಮದುವೆಗೆ ಒಪ್ಪುತ್ತಾನೆ. ಮದುವೆಯ ನಂತರ ಅನೇಕ ಅನೂಹ್ಯ ತಿರುವುಗಳು ಬಂದು ಕತೆಯನ್ನು ಮತ್ತೆಲ್ಲಿಗೋ ಸೆಳೆದೊಯ್ಯುತ್ತವೆ. ರಘು ಮತ್ತು ಝಾನ್ಸಿ ತಮ್ಮ ವ್ಯಕ್ತಿತ್ವದಲ್ಲಿರುವ ಭಿನ್ನತೆಯನ್ನು ಎದುರಿಸಬೇಕಾಗುತ್ತದೆ. ಅನುಕೂಲಕ್ಕೆಂದು ಆರಂಭವಾದ ಅವರಿಬ್ಬರ ಸಂಬಂಧ ಈಗ ಗಾಢವಾಗುತ್ತಾ ಬೆಳೆದರೂ ಯಾವುದೇ ಕ್ಷಣದಲ್ಲೂ ಒಡೆದುಹೋಗುವ ಭಯವನ್ನೂ ಹುಟ್ಟಿಸುತ್ತದೆ.
View this post on Instagram
ಪ್ರೀತಿ, ಮಹತ್ವಾಕಾಂಕ್ಷೆ ಮತ್ತು ಸ್ವಾರ್ಥದ ಆಟ ‘ಯಜಮಾನ’ದ ಕತೆಯಾಗಿದೆ. ರಘು ಮತ್ತು ಝಾನ್ಸಿ ಎಂದಾದರೂ ಬದುಕು ತಮಗೆ ಒಡ್ಡುವ ಸವಾಲುಗಳನ್ನು ಗೆಲ್ಲುತ್ತಾರಾ? ಸೀರಿಯಲ್‌ನಲ್ಲಿ ಉತ್ತರ ಸಿಗಲಿದೆ. ಹೊಸ ಮುಖಗಳಾದ ಹರ್ಷ ಬಿ. ಎಸ್. ಮತ್ತು ಮಧುಶ್ರೀ ಭೈರಪ್ಪ ‘ಯಜಮಾನ’ದ ಮುಖ್ಯ ಭೂಮಿಕೆಯಲ್ಲಿದ್ದಾರೆ. ಅವರಿಗೆ ಬೆಂಬಲವಾಗಿ ರಮೇಶ್ ಭಟ್, ನಾಗಾಭರಣ, ಮಂಜುಳ, ಅಂಕಿತಾ ಜೈರಾಮ್, ತಿಲಕ್, ಸ್ಪೂರ್ತಿ, ಪ್ರದೀಪ್ ಮತ್ತು ವಿಶ್ವ ನಟಿಸುತ್ತಿದ್ದಾರೆ.
‘ವಧು’ ಮತ್ತು ‘ಯಜಮಾನ’ ಎರಡೂ ಕತೆಗಳು ಆಧುನಿಕ ಬದುಕಿನ ಸಂಬಂಧಗಳ ಹೊಸ ಸಂಕೀರ್ಣತೆಯನ್ನು ಎಳೆಎಳೆಯಾಗಿ ಬಿಡಿಸಿಡುವ ಹೊಸ ಬಗೆಯ ಕತೆಗಳು. ಈ ಸೀರಿಯಲ್ ಶುರುವಾದ ಕೆಲವೇ ದಿನಗಳಲ್ಲಿ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.