ಪಂಚಭೂತಗಳಲ್ಲಿ ಕರ್ನಲ್ ಅಶುತೋಷ್, ಮೇಜರ್ ಅನುಜ್ ಲೀನ- ಅನುಜ್ ಚಿತೆಗೆ ನಮಸ್ಕರಿಸಿದ ಪತ್ನಿ

Public TV
2 Min Read
Ashutosh Sharma Major anuj sood

– ಎರಡು ನಗರಗಳಲ್ಲಿ ಹುತಾತ್ಮರಿಗೆ ವಿದಾಯ
– ಮೇಜರ್ ಅನುಜ್ ಅಂತ್ಯಕ್ರಿಯೆ ನೆರವೇರಿಸಿದ ತಂದೆ

ಜೈಪುರ್: ಉಗ್ರರ ವಿರುದ್ಧದ ಹೋರಾಟದಲ್ಲಿ ಹುತಾತ್ಮರಾದ ಕರ್ನಲ್ ಅಶುತೋಷ್ ಶರ್ಮಾ ಹಾಗೂ ಮೇಜರ್ ಅನುಜ್ ಅವರ ಅಂತ್ಯಕ್ರಿಯೆ ಇಂದು ನೆರವೇರಿತು.

ಕರ್ನಲ್ ಅಶುತೋಷ್ ಅವರ ಪಾರ್ಥಿವ ಶರೀರವನ್ನು ಮಂಗಳವಾರ ಬೆಳಗ್ಗೆ 8:30ರ ಸುಮಾರಿಗೆ ಸೇನಾ ಕ್ಯಾಂಪಸ್‍ನಲ್ಲಿ ಇಡಲಾಗಿತ್ತು. ಇಲ್ಲಿ ಅವರ ತಾಯಿ ಮತ್ತು ಸಹೋದರ ಮಾಲಾರ್ಪಣೆ ಮಾಡಿದರು. ನಂತರ ಸೇನಾಧಿಕಾರಿಗಳು ಹುತಾತ್ಮರಿಗೆ ಗೌರವ ಸಲ್ಲಿಸಿದರು. ನಂತರ ಎಡಿಜೆ ಹೇಮಂತ್ ಪ್ರಿಯದರ್ಶಿ, ಪೊಲೀಸ್ ಆಯುಕ್ತ ಆನಂದ್ ಶ್ರೀವಾಸ್ತವ, ಕಲೆಕ್ಟರ್ ಜೋಗರಾಮ್, ಸಂಸದ ರಾಜ್ಯವರ್ಧನ್ ಸಿಂಗ್ ರಾಥೋಡ್, ಸಚಿವ ಪ್ರತಾಪ್ ಸಿಂಗ್ ಖಚಾರಿವಾಸ್, ಲಾಲ್ಚಂದ್ ಕಟಾರಿಯಾ ಅವರು ಹೂ ಅರ್ಪಿಸಿ ಗೌರವ ಸಲ್ಲಿಸಿದರು. ಇದನ್ನೂ ಓದಿ: ಗಡಿಯಲ್ಲಿ ಮತ್ತೆ ಉಗ್ರರ ಪುಂಡಾಟ- ಕರ್ನಲ್, ಮೇಜರ್ ಸೇರಿ ಐವರು ಯೋಧರು ಹುತಾತ್ಮ

ಸರ್ಕಾರಿ ಗೌರವಗಳೊಂದಿಗೆ ಕರ್ನಲ್ ಅಶುತೋಷ್ ಅವರ ಪಾರ್ಥಿವ ಶರೀರವನ್ನು ಮೋಕ್ಷಧಾಮಕ್ಕೆ ಕೊಂಡೊಯ್ಯಲಾಯಿತು. ಕರ್ನಲ್ ಅಶುತೋಷ್ ಅವರ ಪತ್ನಿ, ಮಗಳು ಅಂತ್ಯಕ್ರಿಯೆ ವೇಳೆ ಇದ್ದರು. ಈ ವೇಳೆ ಸೇನಾ ಅಧಿಕಾರಿಗಳು ಕರ್ನಲ್ ಅಶುತೋಷ್ ಅವರ ಮೇಲೆ ಹೊದಿಸಿದ್ದ ತ್ರಿವರ್ಣ ಧ್ವಜವನ್ನು ಪತ್ನಿಗೆ ಹಸ್ತಾಂತರಿಸಿದರು.

Ashutosh Sharma Wife

ಹುತಾತ್ಮ ಅನುಜ್ ಸೂದ್ ಅವರಿಗೆ ಪಂಚಕುಲದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಇದಕ್ಕೂ ಮೊದಲು ಮೇಜರ್ ಅನುಜ್ ಸೂದ್ ಅವರ ಪಾರ್ಥಿವ ಶರೀರವನ್ನು ಆರ್ಮಿ ಆಸ್ಪತ್ರೆಯಿಂದ ಚಂಡೀಗಢದ ಪಂಚಕುಲ ಮನೆಗೆ ಕೊಂಡೊಯ್ಯಲಾಗಿತ್ತು. ಈ ವೇಳೆ ಅವರ ಪತ್ನಿ ಆಕೃತಿ ಮೌನಕ್ಕೆ ಜಾರಿದ್ದರು. ಅವರು ಶವಪೆಟ್ಟಿಗೆ ಪಕ್ಕದಲ್ಲೇ ನಿಂತು ಪತಿ ಅನುಜ್ ಅವರನ್ನು ಬಹಳ ಹೊತ್ತು ನೋಡಿದರು. ಅನುಜ್ ಅವರ ತಾಯಿ ಕೂಡ ಶವಪೆಟ್ಟಿಗೆಯ ಬಳಿ ಬಹಳ ಹೊತ್ತು ಕುಳಿತು ಕಣ್ಣೀರಿಟ್ಟರು. ಹುತಾತ್ಮ ಸಹೋದರಿ ಹರ್ಷಿತಾ ಸೈನ್ಯದಲ್ಲಿ ಕ್ಯಾಪ್ಟನ್ ಆಗಿದ್ದು, ಅವರು ಕೂಡ ಮನೆಗೆ ತಲುಪಿದ್ದಾರೆ. ಅವರು ಕೆಲವೊಮ್ಮೆ ತನ್ನ ತಾಯಿಯನ್ನ, ಮತ್ತೆ ಕೆಲವೊಮ್ಮೆ ಅತ್ತಿಗೆಯನ್ನು ಸಮಾಧಾನಪಡಿಸುತ್ತಿದ್ದರು.

major anuj sood 1

ಅನುಜ್ ಸೂದ್ ಅವರ ತಂದೆ ಅಂತ್ಯಸಂಸ್ಕಾರ ನೆರವೇರಿಸಿದರು. ಪತಿಯನ್ನು ಕಳೆದುಕೊಂಡು ದುಃಖದಲ್ಲಿದ್ದ ಆಕೃತಿ ಕೊನೆಯದಾಗಿ ಪತಿಯ ಚಿತೆಗೆ ನಮಸ್ಕರಿಸಿದ ಕ್ಷಣ ಕಣ್ಣು ಕಟ್ಟುವಂತಿತ್ತು.

Share This Article
Leave a Comment

Leave a Reply

Your email address will not be published. Required fields are marked *