ಕೋಲಾರ: ಸ್ಮಶಾನ ಜಾಗದ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳು ಹೊಡೆದಾಡಿಕೊಂಡು, 50ಕ್ಕೂ ಹೆಚ್ಚು ಜನರು ಗಾಯಗೊಂಡ ಘಟನೆ ಜಿಲ್ಲೆಯ ವೇಮಗಲ್ ಹೋಬಳಿಯ ಹೊಲೇರಹಳ್ಳಿಯಲ್ಲಿ ನಡೆದಿದೆ.
ಇಂದು ಕಂದಾಯ ಇಲಾಖೆ ಅಧಿಕಾರಿಗಳು ಸ್ಮಶಾನದ ಸರ್ವೇ ನಡೆಸುತ್ತಿದ್ದರು. ಸ್ಥಳದಲ್ಲಿ ಸುಮಾರು 80ಕ್ಕೂ ಹೆಚ್ಚು ಜನರು ಸೇರಿದ್ದರು. ಸಶ್ಮಾನ ಜಾಗ ಒತ್ತುವರಿ ಆಗಿಲ್ಲ ಎಂದು ಒಂದು ಗುಂಪು ವಾದಕ್ಕೀಳಿದಾಗ ಮಾತಿನ ಚಕಮಕಿ ಪ್ರಾರಂಭವಾಗಿದ್ದು, ಪರಿಸ್ಥಿತಿ ಕೈ ಮೀರಿದ ಪರಿಣಾಮ ಹೊಡೆದಾಡಿಕೊಂಡಿದ್ದು, ಮಹಿಳೆಯರು ಸೇರಿದಂತೆ 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
Advertisement
ಗುಂಪು ಘರ್ಷಣೆ ಏಕೆ?
ಸ್ಮಶಾನದ ಒತ್ತುವರಿ ಮಾಡಲಾಗಿದೆ ಎಂದು ಹೊಲೇರಹಳ್ಳಿಯ ಗ್ರಾಮದ ಒಂದು ಗುಂಪು ಕಂದಾಯ ಇಲಾಖೆಗೆ ದೂರು ನೀಡಿತ್ತು. ಆದರೆ ಯಾವುದೇ ಒತ್ತುವರಿ ಆಗಿಲ್ಲವೆಂದು ಮತ್ತೊಂದು ಗುಂಪಿನ ಸದಸ್ಯರು ಪಟ್ಟು ಹಿಡಿದಿದ್ದರು. ದೂರು ದಾಖಲಿಸಿಕೊಂಡಿದ್ದ ಕಂದಾಯ ಇಲಾಖೆ ಅಧಿಕಾರಿಗಳು ಇಂದು ಸ್ಮಶಾನ ಸರ್ವೇಗೆ ಗ್ರಾಮಕ್ಕೆ ಬಂದಿದ್ದಾಗ ಗುಂಪುಗಳು ಹೊಡೆದಾಡಿಕೊಂಡಿವೆ.
Advertisement
ಪರಿಸ್ಥಿತಿ ಕೈ ಮೀರುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ವೇಮಗಲ್ ಠಾಣೆ ಪೊಲೀಸರು ಲಘು ಲಾಠಿ ಚಾರ್ಜ್ ನಡೆಸಿದ್ದಾರೆ. ಬಳಿಕ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದು, ಗಾಯಾಳುಗಳನ್ನು ಕೋಲಾರ ಜಿಲ್ಲಾಸ್ಪತ್ರೆ ಸೇರಿದಂತೆ ಖಾಸಗಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಕುರಿತು ವೇಮಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.