ಕಲಬುರಗಿ: ಕಾಲೇಜು ವಿದ್ಯಾರ್ಥಿಗಳಲ್ಲಿ ರಂಗಭೂಮಿ (Rangabhoomi) ಕುರಿತು ಆಸಕ್ತಿ ಮೂಡಿಸುವುದರ ಜೊತೆಗೆ ವಿದ್ಯಾರ್ಥಿಗಳ ಮನೋವಿಕಾಸ ಮತ್ತು ಶೈಕ್ಷಣಿಕ ಕಲಿಕಾ ಸಾಮರ್ಥ್ಯ ಹೆಚ್ಚಿಸುವ ಉದ್ದೇಶದಿಂದ ಇದೇ ಜನವರಿ 10 ರಿಂದ 12ರ ವರೆಗೆ ಮೂರು ದಿನಗಳ ಕಾಲ ʻಕಾಲೇಜು ರಂಗೋತ್ಸವʼ (College Theatre Festival) ಕಾರ್ಯಕ್ರಮ ಆಯೋಜಿಸಿದೆ ಎಂದು ಕಲಬುರಗಿ ರಂಗಾಯಣದ ನಿರ್ದೇಶಕಿ ಡಾ.ಸುಜಾತಾ ಜಂಗಮಶೆಟ್ಟಿ ತಿಳಿಸಿದ್ದಾರೆ.
ರಾಯಚೂರು (Raichur) ಜಿಲ್ಲೆಯ ಸಿಂಧನೂರಿನ ಟೌನ್ ಹಾಲ್ ರಂಗಮಂದಿರದಲ್ಲಿ ಕಾರ್ಯಕ್ರಮ ನಡೆಯಲಿದೆ. ಟಿ.ವಿ, ಸಿನಿಮಾ, ಕಂಪ್ಯೂಟರ್, ಸಾಮಾಜಿಕ ಜಾಲತಾಣಗಳ ಪ್ರಭಾವದಲ್ಲಿ ರಂಗಭೂಮಿ ಮರೆಯಾಗಿ ಹೋಯಿತು ಎನ್ನುವದರ ನಡುವೆ ಕಾಲೇಜು ಮಟ್ಟದಲ್ಲಿ ರಂಗಭೂಮಿಯತ್ತ ವಿದ್ಯಾರ್ಥಿಗಳು ವಾಲುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಇಂತಹ ಯುವ ಪೀಳಿಗೆಯನ್ನು ಮತ್ತಷ್ಟು ರಂಗಭೂಮಿಯತ್ತ ಸೆಳೆಯುವ ಉದ್ದೇಶದಿಂದ ಕಾಲೇಜು ರಂಗೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
Advertisement
Advertisement
ಕಲಬುರಗಿಯೊಂದೇ ಕೇಂದ್ರವಾಗಿ ಕಾರ್ಯಕ್ರಮ ರೂಪಿತವಾಗಬಾರದೆಂಬ ಉದ್ದೇಶದಿಂದ ಪ್ರದೇಶದ 7 ಜಿಲ್ಲೆಗಳಲ್ಲಿ ತಲಾ ಒಂದು ಕಾಲೇಜು ಆಯ್ಕೆ ಮಾಡಿಕೊಳ್ಳಲಾಗಿದೆ. ಸುಮಾರು 20 ದಿನಗಳ ಕಾಲ ನಾಟಕ ನಿರ್ದೇಶಕರಿಂದ ತರಬೇತಿ ಪಡೆದ ವಿದ್ಯಾರ್ಥಿಗಳು ಇಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲಿದ್ದಾರೆ ಎಂದಿದ್ದಾರೆ.
Advertisement
3 ದಿನಗಳ 7 ನಾಟಕ ಪ್ರದರ್ಶನ:
ಸಿಂಧನೂರಿನಲ್ಲಿ ಆಕ್ಸ್‌ಫರ್ಡ್ ಸಮೂಹ ಸಂಸ್ಥೆಗಳ ಸಹಯೋಗದೊಂದಿಗೆ ಆಯೋಜಿಸಿರುವ ಮೂರು ದಿನಗಳ ಕಾಲೇಜು ರಂಗೋತ್ಸವಕ್ಕೆ ಜನವರಿ 10ರಂದು ಬೆಳಗ್ಗೆ 11 ಗಂಟೆಗೆ ಚಾಲನೆ ನೀಡಲಾಗುತ್ತದೆ. ಶ್ರೀ ಸಿದ್ದರಾಮೇಶ್ವರ ಶರಣರ ಸಾನಿಧ್ಯದಲ್ಲಿ ನಡೆಯುವ ಈ ಕಾರ್ಯಕ್ರಮವನ್ನು ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ ಉದ್ಘಾಟಿಸಲಿದ್ದು, ಅಧಿಕಾರಿಗಳು, ಕಲಾವಿದರು ಹಾಗೂ ಚುನಾಯಿತ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
Advertisement
ಜನವರಿ 10 ರಂದು ಮಧ್ಯಾಹ್ನ 12.30 ಗಂಟೆಗೆ ಶ್ರೀನಿವಾಸ ದೋರನಹಳ್ಳಿ ಅವರ ರಚನೆ ಮತು ನಿರ್ದೇಶನದ “ಶಪಥದ ಮಹಾಭಾರತ” ನಾಟಕವು ಯಾದಗಿರಿ ಜಿಲ್ಲೆಯ ಭೀಮರಾಯನಗುಡಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಮಧ್ಯಾಹ್ನ 2.30 ಗಂಟೆಗೆ ಮೈಸೂರಿನ ಎಸ್.ರಾಮನಾಥ ಅವರ ರಚನೆ ಮತು ಮಹೇಶ ಭೋವಿ ಅವರ ನಿರ್ದೇಶನದ “ಅಶ್ವ ಪರ್ವ” ನಾಟಕವನ್ನು ಸ್ಥಳೀಯ ಸಿಂಧನೂರಿನ ಆಕ್ಸ್‌ಫರ್ಡ್ ಸಮೂಹ ಸಂಸ್ಥೆಗಳ ಪಿಯು ಕಾಲೇಜಿನ ವಿದ್ಯಾರ್ಥಿಗಳು ಪ್ರದರ್ಶನ ಮಾಡಲಿದ್ದಾರೆ.
ಜನವರಿ 11 ರಂದು ಬೆಳಿಗ್ಗೆ 11 ಗಂಟೆಗೆ ದಲಿತ ಕವಿ ಡಾ.ಸಿದ್ದಲಿಂಗಯ್ಯ ಅವರ ರಚನೆಯ ʻಒಂದಾನೊಂದು ಊರು (ನನ್ನ ಕತ್ತೆ ನಿಮ್ಮ ಧರ್ಮ)ʼ ಎಂಬ ನಾಟಕವನ್ನು ಮಹೇಶ ವಿ. ಪಾಟೀಲ ಅವರ ನಿರ್ದೇಶನದಲ್ಲಿ ಬೀದರ ಜಿಲ್ಲೆಯ ಫೋಡಂಪಳ್ಳಿಯ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಮತ್ತು ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಪ್ರಸ್ತುತಪಡಿಸಲಿದ್ದಾರೆ. ಮಧ್ಯಾಹ್ನ 12.30 ಗಂಟೆಗೆ ಶಾಂತಲಿಂಗಯ್ಯ ಎಸ್.ಮಠಪತಿ ಅವರ ರಚನೆಯ ʻಕರ್ಮʼ ಎಂಬ ನಾಟಕವನ್ನು ಗಂಗೋತ್ರಿ ಎಸ್.ಮಠಪತಿ ನಿರ್ದೇಶನದಲ್ಲಿ ಕಲಬುರಗಿಯ ಎಂ.ಎ ಟೆಂಗಳೀಕರ್ ಕಾಲೇಜಿನ ವಿದ್ಯಾರ್ಥಿಗಳು ಪ್ರದರ್ಶಿಸಲಿದ್ದಾರೆ. ಮಧ್ಯಾಹ್ನ 2.30 ಗಂಟೆಗೆ ಡಾ.ಚನ್ನಣ್ಣ ವಾಲೀಕರ ರಚನೆಯ “ಬಾಲಿ” ನಾಟಕವನ್ನು ರೇಣುಶ್ರೀ ಅವರ ನಿರ್ದೇಶನದಲ್ಲಿ ಕೊಪ್ಪಳ ಜಿಲ್ಲೆಯ ಕಿನ್ನಾಳ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಪ್ರಸ್ತುತಪಡಿಸಲಿದ್ದಾರೆ.
ಕೊನೆಯ ದಿನವಾದ ಜ.12 ರಂದು ಬೆಳಿಗ್ಗೆ 11 ಗಂಟೆಗೆ ಡಾ.ಚಂದ್ರಶೇಖರ ಕಂಬಾರ ಅವರ “ಸಂಗ್ಯಾ ಬಾಳ್ಯಾ” ನಾಟಕವನ್ನು ಚಂದ್ರಶೇಖರ ಬಸಾಪುರ ಅವರ ನಿರ್ದೇಶನದಲ್ಲಿ ಬಳ್ಳಾರಿಯ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಮಧ್ಯಾಹ್ನ 12.30 ಗಂಟೆಗೆ ಹನುಮಂತ ಹಾಲಿಗೇರಿ ರಚನೆ ಮತ್ತು ಡಾ.ಸಹನ ಪಿಂಜಾರ್ ಅವರ ನಿರ್ದೇಶನದ “ಊರು ಸುಟ್ಟರು ಹನುಮಪ್ಪ ಹೊರಗ್” ಎಂಬ ನಾಟಕವನ್ನು ವಿಜಯನಗರ ಜಿಲ್ಲೆಯ ಹೊಸಪೇಟೆಯ ಟಿ.ಎಂ.ಎ.ಇ.ಎಸ್. ಪಾಲಿಟೆಕ್ನಿಕ್ ಕಾಲೇಜಿನ ತಾಂತ್ರಿಕ ವಿದ್ಯಾರ್ಥಿಗಳು ತಮ್ಮ ಕಲಾ ಪ್ರದರ್ಶನ ನೀಡಲಿದ್ದಾರೆ. ಸಂಜೆ ವೇಳೆಗೆ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಸುಜಾತಾ ಜಂಗಮಶೆಟ್ಟಿ ತಿಳಿಸಿದ್ದಾರೆ.