ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಡೆಂಗ್ಯೂಗೆ ಮೊದಲ ಬಲಿಯಾಗಿದೆ. ಕಾಲೇಜು ವಿದ್ಯಾರ್ಥಿನಿಯೊಬ್ಬಳು ಡೆಂಗ್ಯೂ ಜ್ವರದಿಂದ (Dengue Fever) ಮೃತಪಟ್ಟಿದ್ದಾಳೆ.
ಮೃತಳನ್ನು ಸಹನಾ ಬಾನು (18) ಎಂದು ಗುರುತಿಸಲಾಗಿದೆ. ಈಕೆ ಚಿಕ್ಕಮಗಳೂರು ನಗರದ ಮಹಮ್ಮದ್ ಖಾನ್ ಗಲ್ಲಿ ನಿವಾಸಿ. ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ಸಹನಾ ಬಾನು ಚಿಕ್ಕಮಗಳೂರು ಮಲ್ಲೇಗೌಡ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಆದರೆ ಚಿಕಿತ್ಸೆ ಫಲಿಸದೇ ಸಹನಾ ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದಾಳೆ.
Advertisement
Advertisement
ಡೆಂಗ್ಯೂ ಜ್ವರದ ಲಕ್ಷಣಗಳು:
* ಅಧಿಕ ಜ್ವರ, ತಲೆನೋವು, ಸುಸ್ತು ಕಾಣಿಸಿಕೊಳ್ಳುತ್ತವೆ.
* ಮಾಂಸಖಂಡಗಳಲ್ಲಿ, ಕೈ, ಕಾಲುಗಳ ಕೀಲುಗಳಲ್ಲಿ ನೋವು ಉಂಟಾಗುತ್ತದೆ.
* ಕಣ್ಣಿನಲ್ಲಿ ಹೇಳಲಾಗದ ನೋವು, ಉರಿಯಾಗುತ್ತದೆ.
* ಕೆಮ್ಮು, ಗಂಟಲು ಕೆರೆತ ಬರುತ್ತದೆ.
* ಕೆಲವರಿಗೆ ವಾಂತಿ, ತಲೆ ಸುತ್ತು ಕಾಣಿಸಿಕೊಳ್ಳುತ್ತವೆ.
Advertisement
Advertisement
ಮುಂಜಾಗ್ರತಾ ಕ್ರಮಗಳೇನು?:
* ಡೆಂಗ್ಯೂ ಹರಡುತ್ತಿದೆ ಎಂಬುದು ಗೊತ್ತಾಗುತ್ತಿದ್ದಂತೆ ನೀವು ಎಚ್ಚರಗೊಳ್ಳಬೇಕು. ನಿಮ್ಮ ಸುತ್ತಮುತ್ತಲಿನ ಪರಿಸರವನ್ನು ಶುಚಿಗೊಳಿಸಬೇಕು.
* ಸೊಳ್ಳೆಗಳಿಗೆ ಸೂಕ್ತವಾದ ತಾಣಗಳನ್ನು ನಾಶಪಡಿಸುವುದು.
* ಮನೆಯ ಸುತ್ತಮುತ್ತ ನಿಂತಿರುವ ನೀರಿನ ನೆಲೆಗಳನ್ನು ನಾಶ ಪಡಿಸಬೇಕು.
* ತೆಂಗಿನ ಚಿಪ್ಪು, ಟಯರ್ಗಳು, ಚಿಕ್ಕ ಗುಂಡಿಗಳು, ಬೇಡ ಎಂದು ಬಿಸಾಡಿದ ಪ್ಲಾಸ್ಟಿಕ್ ಬಕೆಟ್, ಜಗ್ ಇತ್ಯಾದಿಗಳ ಸಂಗ್ರಹ ಬೇಡ.
* ನೀರು ನಿಂತಿರುವ ಕಡೆ ಸೂಕ್ತ ಕೀಟನಾಶಕ ಸಿಂಪಡಿಸಿ.
* ಮಕ್ಕಳಿಗೆ ಉದ್ದ ತೋಳಿನ ಬಟ್ಟೆ, ಸಾಕ್ಸ್ ಹಾಕಿರಿ.
* ಸೊಳ್ಳೆಗಳು ಮೊಟ್ಟೆಗಳನ್ನು ಇಡಲು ಅವಕಾಶ ಇರುವ ಕುಂಡಗಳು, ಮತ್ತಿತರ ವಸ್ತುಗಳನ್ನು ಸ್ವಚ್ಛ ಮಾಡಿರಿ.
ಒಟ್ಟಿನಲ್ಲಿ ಡೆಂಗ್ಯೂ ಜ್ವರ ಬಂತೆಂದರೆ ಭಯ ಪಡುವುದು ಬೇಡ. ದಿನ ನಿತ್ಯದ ಆಹಾರ ಕ್ರಮ, ನಾಲಿಗೆ ರುಚಿಯನ್ನು ನಿಯಂತ್ರಣದಲ್ಲಿಡುವುದರಿಂದ ಡೆಂಗ್ಯೂವನ್ನು ಹೊಡೆದೋಡಿಸಬಹುದು. ಜ್ವರ ಕಾಣಿಸಿಕೊಂಡ ತಕ್ಷಣ ವೈದ್ಯರ ಭೇಟಿ ಮಾಡಿ ಸೂಕ್ತ ಔಷಧಿಗಳನ್ನು ತೆಗೆದುಕೊಳ್ಳಿ. ಸಾಕಷ್ಟು ಮನೆಮದ್ದು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಿ. ಸಲಹೆಗಳನ್ನೂ ಪಾಲಿಸಿದರೆ ನೀವು ಡೆಂಗ್ಯೂ ಜ್ವರದಿಂದ ಪಾರಾಗಬಹುದು.