ನೆನಪುಗಳನ್ನು ಹಿಡಿಯುವ ಹಂಬಲ. ಆದರೆ ಕೈ ಸಿಗದೇ ಓಡಿ ಹೋಗುತ್ತವೆ. ಪ್ರತಿಯೊಬ್ಬರ ಜೀವನದಲ್ಲೂ ನೆನಪುಗಳು ಸದಾ ಇರುತ್ತವೆ. ಕೆಲವರಿಗೆ ಸಿಹಿ ನೆನಪುಗಳಾದ್ರೆ ಇನ್ನೂ ಕೆಲವರಿಗೆ ಕಹಿ ನೆನಪುಗಳು ಅಚ್ಚಳಿಯದೇ ಉಳಿದಿವೆ. ಆದರೆ ಮನುಷ್ಯನ ಜೀವನ ಮಾತ್ರ ನೆನಪು ಮತ್ತು ಕನಸಿನ ಮಧ್ಯೆ ಸಾಗುತ್ತದೆ.
ನನ್ನ ಬದುಕಿನಲ್ಲಿ ಸದಾ ಹಸಿರಾಗಿ ಉಳಿದುಕೊಂಡಿರುವ ಒಂದು ಸಿಹಿ ನೆನಪಿನ ಪುಟ್ಟ ಕಥೆ ನಿಮಗಾಗಿ….
Advertisement
ನಾನು ಹಳ್ಳಿಯ ಹೊಲ-ಗದ್ದೆ, ಸ್ನೇಹಿತರು, ಜಾತ್ರೆ, ಹಬ್ಬ-ಹರಿದಿನಗಳ ಮಧ್ಯೆ ಅಲೆದಾಡಿ ಬೆಳೆದಿದ್ದೆ. ಆದರೆ ಹುಟ್ಟೂರಿನಿಂದ ಉನ್ನತ ವಿದ್ಯಾಭ್ಯಾಸಕ್ಕಾಗಿ ಪಟ್ಟಣಕ್ಕೆ ಕಾಲಿಟ್ಟಿದ್ದೆ. ಪಟ್ಟಣಕ್ಕಿಂತ ನಮಗೆ ಪಟ್ಟಣದ ಹಾಸ್ಟೆಲ್ ಒಂದು ಜೈಲು ಎಂದು ಅನ್ನಿಸುತ್ತಿತ್ತು. ಆದರೆ ಮೊದ ಮೊದಲು ಹೊಸ ಹಾಸ್ಟೆಲ್ ಜೀವನಕ್ಕೆ ಹೊಂದಿಕೊಳ್ಳುವಾಗ ದಿನಗಳು ವರ್ಷಗಳೇ ಕಳೆದಂತೆ ಭಾಸವಾಗುತ್ತಿತ್ತು. ಕಾಲಕ್ರಮೇಣ ದಿನ ಕಳೆದಂತೆ ತರಗತಿಯಲ್ಲಿನ ಸಹಪಾಠಿಗಳು ಮತ್ತು ಹಾಸ್ಟೆಲ್ ನ ಸ್ನೇಹಿತರು ಹತ್ತಿರವಾದರು. ಬಳಿಕ ನಮ್ಮದೇ ಆದ ಗುಂಪು ಮಾಡಿಕೊಂಡು ಕಾಲೇಜ್, ಸುತ್ತಾಟ, ತರಲೆ ಮತ್ತು ಆಟವಾಡಿಕೊಂಡು ದಿನಗಳನ್ನು ಕಳೆಯುತ್ತಿದ್ದವು.
Advertisement
Advertisement
ಆರಂಭದಲ್ಲಿ ಹಾಸ್ಟೆಲ್ ಗೆ ಬಂದಾಗ ಭಾನುವಾರ ಬಂದರೆ ಸಾಕು ಊರಿಗೆ ಹೊರಡಲು ಸಿದ್ಧರಾಗುತ್ತಿದ್ದೆವು. ಆದರೆ ಕೆಲವು ದಿನಗಳ ನಂತರ ಯಾಕಾದರೂ ರಜೆ ಬರುತ್ತದೋ ಎಂದು ಹೇಳುವಂತಾಯಿತು. ಅಷ್ಟರ ಮಟ್ಟಿಗೆ ಸ್ನೇಹಿತರೆಲ್ಲರೂ ಹತ್ತಿರವಾಗಿದ್ದೆವು.
Advertisement
ಕದ್ದ ಹಣ್ಣು ತುಂಬಾ ರುಚಿ:
ರಜೆಯ ಒಂದು ದಿನ ಹಾಸ್ಟೆಲ್ ನಲ್ಲಿ ಕ್ರಿಕೆಟ್ ಆಡಿ ಮುಗಿದ ಬಳಿಕ ವರಾಂಡದಲ್ಲಿ ಕುಳಿತು ಸ್ನೇಹಿತರೆಲ್ಲರೂ ಹರಟೆ ಹೊಡೆಯುತ್ತಿದ್ದೆವು. ಈ ಸಮಯದಲ್ಲಿ ನಮ್ಮಲ್ಲೊಬ್ಬ ಗೆಳೆಯ ಹಾಸ್ಟೆಲ್ ಹಿಂದಿನ ತೋಟದಲ್ಲಿರುವ ಹಲಸಿನ ಹಣ್ಣಿನ ಬಗ್ಗೆ ಹೇಳಿದ್ದ. ಮೊದಲೇ ಕಾಲೇಜ್- ಹಾಸ್ಟೆಲ್ ನ ಜೀವನ. ನಮಗೆ ಆ ರಾತ್ರಿಯೇ ಹಲಸಿನ ಹಣ್ಣನ್ನು ಕದಿಯುವ ಯೋಚನೆಯಾಯಿತು.
ಕೊನೆಗೆ ತಡರಾತ್ರಿಯೇ ಹಣ್ಣು ಕದಿಯಲು ನಿಪುಣ ಕಳ್ಳರಂತೆ ಯೋಜನೆ ರೂಪಿಸಿದೆವು. ಯಾರು ಮರ ಹತ್ತುವರು? ಹಣ್ಣನ್ನು ನೆಲಕ್ಕೆ ಬೀಳದಂತೆ ಕ್ಯಾಚ್ ಹಿಡಿಯುವುದು ಯಾರು? ಹಾಗೂ ತೋಟದ ಮಾಲೀಕ ಬರುವುದೊಳಗೆ ಹಿಂದಿರುಗಬೇಕು ಎಂದು ಪಿಸುಗುಟ್ಟುತ್ತಾ ತೋಟಕ್ಕೆ ನುಗ್ಗಿದೆವು. ಶಬ್ದ ಬರದಂತೆ ಹಣ್ಣನ್ನು ಕೀಳಲು ಪ್ರಯತ್ನಿಸುತ್ತಿದ್ದೆವು. ಆದರೆ ಕೆಲ ಹೊತ್ತಿನಲ್ಲಿ ತೋಟದೊಳಗೆ ಜೋರಾದ ಶಬ್ದ ಕೇಳಿಸಿತು. ಎಲ್ಲರು ತೋಟದ ಮಾಲೀಕ ಬಂದನೆಂದು ಹೆದರಿ ತೋಟದಿಂದ ಕಾಲ್ಕಿತ್ತೆವು.
ನಾವು ಓಡಿ ಹೋಗುತ್ತಿದ್ದಂತೆ ನಮ್ಮ ಹಿಂದೆಯೇ ಯಾರೋ ಇದ್ದಾರೆಂದು ಭಾಸವಾಯಿತು. ಒಮ್ಮೆ ಎಲ್ಲರೂ ಧೈರ್ಯ ಮಾಡಿ ಹಿಂದೆ ತಿರುಗಿ ನೋಡಿದರೆ ಗುಟುರಾಕುತ್ತಿದ್ದ ಹಂದಿಗಳು. ನಕ್ಕರೇ ತೋಟದ ಮಾಲೀಕ ಬರುತ್ತಾರೆ ಎಂದು ಮನಸಿನಲ್ಲೇ ನಕ್ಕು ಅವುಗಳನ್ನು ಓಡಿಸಿದೆವು. ಬಳಿಕ ಹಲಸಿನ ಹಣ್ಣಿನ ಜೊತೆ ಸಪೋಟ ಹಣ್ಣನ್ನು ಕಿತ್ತು ತೋಟದಿಂದ ಬಂದೆವು. ‘ಕದ್ದು ತಿನ್ನುವ ರುಚಿಯೇ ಬೇರೆ’ ಎಂಬ ಗಾದೆಯಂತೆ ತಂದಿಟ್ಟ ಹಣ್ಣುಗಳು ಕೇವಲ ಮೂರು ದಿನಗಳಲ್ಲಿ ಖಾಲಿಯಾಗುತ್ತಿದ್ದವು. ಯಾರನ್ನು ಕೇಳಿದರು ‘ತಿಂದವರ್ಯಾರು’ ಎಂಬ ಮರು ಪ್ರಶ್ನೆ ಹುಟ್ಟಿಕೊಳ್ಳುತ್ತಿತ್ತು.
ಹಾಸ್ಟೆಲ್ ನ ಸಪ್ಪೆ ಊಟ ತಿಂದು ಮರಗಟ್ಟಿದ್ದ ನಾಲಗೆಗೆ ರುಚಿ ಬೇಕೆನಿಸಿದಾಗ ಕೋಳಿ ಸುಟ್ಟು ತಿನ್ನುವ ಖಯಾಲಿ. ಉಪ್ಪು-ಖಾರ ಸರಿಯಾಗಿಲ್ಲ ಎಂದರೂ ಹಾಸ್ಟೆಲ್ ಊಟಕ್ಕಿನ್ನ ಮೋಸವಿಲ್ಲ ಎಂದು ಬಾಯಿ ಚಪ್ಪರಿಸಿಕೊಂಡು ತಿನ್ನುವಾಗ ಬಿಸಿ ಕೋಳಿ ತುಟಿ ಸುಟ್ಟ ನೆನಪು. ಆದರೆ ಹಳ್ಳಿಯಿಂದ ಕಾಲೇಜಿಗೆ ಈಗ ಬಂದಂತೆ ಭಾವನೆ, ನೋಡಿದರೆ ಕಾಲೇಜು ಜೀವನವೇ ಮುಗಿದು ಹೋಯಿತು.
ಕದ್ದು ತಿಂದ ಹಣ್ಣು, ತುಟಿ ಸುಟ್ಟ ಕೋಳಿ, ಕಾಲೇಜಿನಲ್ಲಿ ಸ್ನೇಹಿತರ ಕೋಳಿ ಜಗಳ, ಸೆಂಡಾಫ್ ದಿನದ ಹುಚ್ಚು ಕುಣಿತ, ಪಕ್ಕದ ಡಿಪಾರ್ಟ್ ಮೆಂಟಿನ ಊಟ, ಜೂನಿಯರ್ ಗಳ ಹರಟೆ… ಇವೆಲ್ಲವೂ ಈಗ ಬರೀ ನೆನಪು ಮಾತ್ರ…
– ಪವನ್
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv