ಬೆಂಗಳೂರು: ಸ್ಪೀಕರ್ ಆದ ದಿನದಿಂದಲೂ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ನಡುವೆ ಸದನದಲ್ಲೇ ಜಟಾಪಟಿ ನಡೆದಿತ್ತು. ಇದರಿಂದ ಹಟಕ್ಕೆ ಬಿದ್ದ ಸ್ಪೀಕರ್ ಶಿಷ್ಟಾಚಾರವನ್ನು ಮೀರಿ ನನಗೆ ಅವಮಾನ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.
ತಮ್ಮ ಆಪ್ತರ ಮುಂದೆ ಈ ವಿಚಾರವನ್ನು ಹಂಚಿಕೊಂಡ ಸಿದ್ದರಾಮಯ್ಯ ನಾನು ವಿಪಕ್ಷ ನಾಯಕನಾಗಿ 5 ತಿಂಗಳಾದರೂ ಕಾರು ನೀಡಿಲ್ಲ. ವಿಪಕ್ಷ ನಾಯಕ ನೇಮಿಸಿಕೊಳ್ಳಬಹುದಾದ ಸಿಬ್ಬಂದಿ ನೇಮಕವು ಆಗಿಲ್ಲ. ಅಲ್ಲದೆ ಭತ್ಯೆ ವಿಚಾರದಲ್ಲೂ 5 ತಿಂಗಳಿನಿಂದ ವಿಪಕ್ಷ ನಾಯಕನಿಗೆ ನೀಡಬೇಕಾದ ಯಾವುದೇ ಭತ್ಯೆ ನೀಡಿಲ್ಲ ಎಂದು ಅಸಮಾಧಾನ ಹೊರ ಹಾಕಿದ್ದಾರೆ.
Advertisement
ಸದನದಲ್ಲಿ ಸ್ಪೀಕರ್ ಜೊತೆಗೆ ನಡೆದ ಜಟಾಪಟಿಗೆ ಸೇಡಿನ ಕ್ರಮವಾಗಿ ಕಾಗೇರಿ ಹೀಗೆ ಶಿಷ್ಟಾಚಾರವನ್ನು ಉಲ್ಲಂಘಿಸಿ ಸತಾಯಿಸುತ್ತಿದ್ದಾರೆ ಎನ್ನುವುದು ಸಿದ್ದರಾಮಯ್ಯ ಆರೋಪ. ಕಳೆದ 20 ದಿನದ ಹಿಂದೆ ಸಿದ್ದರಾಮಯ್ಯ ವಿಪಕ್ಷ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆದರೆ ಅದಕ್ಕೂ ಮೊದಲು 4-5 ತಿಂಗಳ ಯಾವುದೇ ಭತ್ಯೆ ಹಾಗೂ ಅನುಕೂಲ ನೀಡಿಲ್ಲ ಎನ್ನುವುದು ಸಿದ್ದರಾಮಯ್ಯ ಆಕ್ರೋಶಕ್ಕೆ ಕಾರಣವಾಗಿದೆ.