ಬೆಳಗಾವಿ: ಕರ್ನಾಟಕ ರಾಜ್ಯ ಹೆದ್ದಾರಿಗಳ ಅಭಿವೃದ್ಧಿ ಯೋಜನೆ(ಕೆಶಿಪ್) ಕಚೇರಿ ಹಾಸನಕ್ಕೆ ಹೋಗಲು ನಾನು ಬಿಡುವುದಿಲ್ಲ. ನಮ್ಮಲ್ಲೇ ಹಲವು ಕೆಲಸಗಳು ಬಾಕಿ ಉಳಿದುಕೊಂಡಿವೆ. ಈ ಸಂಬಂಧ ಮುಖ್ಯಮಂತ್ರಿಗಳಿಗೆ ಮೌಖಿಕವಾಗಿ ಎಲ್ಲ ವಿಚಾರಗಳನ್ನು ತಿಳಿಸುತ್ತೇನೆ ಎಂದು ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೊಳಿ ಪರೋಕ್ಷವಾಗಿ ಸೂಪರ್ ಸಿಎಂ ಹೆಚ್.ಡಿ.ರೇವಣ್ಣರಿಗೆ ಸೆಡ್ಡು ಹೊಡೆದಿದ್ದಾರೆ.
ಕೇವಲ ಕಚೇರಿ ಸ್ಥಳಾಂತರದಿಂದ ಉತ್ತರ ಕರ್ನಾಟಕಕ್ಕೆ ಏನು ಅನ್ಯಾಯ ಆಗೋದಿಲ್ಲ. ಸ್ಥಳೀಯ ಶಾಸಕನಿಗೆ ಯಾವುದೇ ಮಾಹಿತಿ ನೀಡದೇ ಕಚೇರಿ ಸ್ಥಳಾಂತರಿಸೋದು ತಪ್ಪು. ನಮ್ಮಲ್ಲಿ ಇನ್ನು ಕೆಲಸಗಳು ನಡೆಯುತ್ತಿದ್ದು, ಹಾಗಾಗಿ ಕಚೇರಿ ಸ್ಥಳಾಂತರಿಸಲು ಬಿಡಲ್ಲ. ಈ ಬಗ್ಗೆ ಸ್ಥಳೀಯ ಶಾಸಕರ ಅಭಿಪ್ರಾಯ ಯಾಕೆ ಕೇಳಿಲ್ಲ ಅಂತಾ ಸಿಎಂ ಹಾಗೂ ಮಂತ್ರಿಗಳಿಗೆ ಪ್ರಶ್ನೆ ಮಾಡುತ್ತೇನೆ ಎಂದು ತಿಳಿಸಿದರು.
Advertisement
ಸ್ಥಳೀಯ ಚುನಾವಣೆಗಳಲ್ಲಿ ಮೈತ್ರಿ ಹೊಂದಾಣಿಕೆ ಅಸಾಧ್ಯ. ಮೈತ್ರಿ ಕೇವಲ ಲೋಕಸಭೆಗೆ ಚುನಾವಣೆಗೆ ಮಾತ್ರ ಸೀಮಿತವಾಗಿದೆ. ಲೋಕಸಭೆಗೆ ನಾನು ಸ್ಪರ್ಧೆ ಮಾಡುವುದಿಲ್ಲ. ಇಲ್ಲಿಂದ ಯಾರು ಸ್ಪರ್ಧೆ ಮಾಡಿದರೂ ನಾನು ಬೆಂಬಲ ನೀಡುತ್ತೇನೆ. ಆದ್ರೂ ನನ್ನ ಹೆಸರು ಕೇಳಿ ಬರುತ್ತಿದ್ದು, ಅಭ್ಯರ್ಥಿ ಯಾರೆಂಬುದನ್ನು ಹೈಕಮಾಂಡ್ ತೀರ್ಮಾನಿಸಲಿದೆ ಎಂದು ಸ್ಪಷ್ಟಪಡಿಸಿದ್ರು.
Advertisement
Advertisement
Advertisement
ಹಾಸನಕ್ಕೆ ಶಿಫ್ಟ್ ಆಗುವ ಕಚೇರಿಗಳು:
ಬೆಳಗಾವಿಯಲ್ಲಿರುವ ಕೆಶಿಪ್ ಕಚೇರಿಯನ್ನು ಹಾಸನಕ್ಕೆ ಸ್ಥಳಾಂತರ ಮಾಡಲು ರಾಜ್ಯ ಸರ್ಕಾರ ಜುಲೈ 27, 2018ರಂದು ಆದೇಶ ಹೊರಡಿಸಿತ್ತು. ಬೆಳಗಾವಿ ನಗರದಲ್ಲಿರುವ ಕೆಶಿಪ್ ವಿಭಾಗದ ಮಟ್ಟದ ಕಚೇರಿಯನ್ನು ಹಾಸನಕ್ಕೆ ಹಾಗೂ ಉಪ ವಿಭಾಗೀಯ ಕಚೇರಿಯನ್ನು ಬೆಳಗಾವಿಯಿಂದ ಮಡಿಕೇರಿಗೆ ಸ್ಥಳಾಂತರಕ್ಕೆ ಸೂಚಿಸಲಾಗಿತ್ತು. ಸಕಲೇಶಪುರದ ರಾಷ್ಟ್ರೀಯ ಹೆದ್ದಾರಿ ಉಪವಿಭಾಗ ಕಚೇರಿಯನ್ನು ಹೊಳೆನರಸೀಪುರಕ್ಕೆ ಶಿಫ್ಟ್ ಮಾಡಲು ಹಾಗೂ ಬಸವನಬಾಗೇವಾಡಿಯ ಕೆಶಿಪ್ ಉಪವಿಭಾಗ ಕಚೇರಿಯನ್ನು ಬೇಲೂರಿಗೆ ಸ್ಥಳಾಂತರಿಸಲು ಆದೇಶಿಸಲಾಗಿತ್ತು. ಅಲ್ಲದೆ ಶಿವಮೊಗ್ಗ ಲೋಕೋಪಯೋಗಿ ವಿಶೇಷ ಉಪ ವಿಭಾಗೀಯ ಕಚೇರಿಯನ್ನು ಅರಸೀಕೆರೆಗೆ ಶಿಫ್ಟ್ ಮಾಡಲು ಸೂಚಿಸಲಾಗಿತ್ತು.
ಜಿಲ್ಲೆಯಿಂದ ಕೆಶಿಪ್ ಕಚೇರಿಯನ್ನ ಹಾಸನಕ್ಕೆ ಸ್ಥಳಾಂತರ ಮಾಡಿರುವುದಕ್ಕೆ ಉತ್ತರ ಕರ್ನಾಟಕದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಕರ್ನಾಟಕ ,ರಾಜ್ಯ ಹೆದ್ದಾರಿ ಯೋಜನೆಯನ್ನ ಬೆಳಗಾವಿಯಂದ ಸ್ಥಳಾಂತರ ಮಾಡಿರುವುದಕ್ಕೆ ಸೂಪರ್ ಸಿಎಂ ರೇವಣ್ಣ ಅವರ ವಿರುದ್ಧ ತೀವ್ರ ಖಂಡನೆ ವ್ಯಕ್ತವಾಗಿದೆ. ಸಮ್ಮಿಶ್ರ ಸರ್ಕಾರದ ಸೂಪರ್ ಸಿಎಂ ಎಂದೇ ಬಿಂಬಿತವಾಗಿರುವ ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಪ್ರಭಾವದಿಂದಲೇ ಹುದ್ದೆಗಳ ಸಮೇತವಾಗಿ ಈ ಎಲ್ಲಾ ಕಚೇರಿಗಳ ಸ್ಥಳಾಂತರಕ್ಕೆ ಆದೇಶ ಹೊರ ಬಿದ್ದಿದೆ ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ಇದು ಉತ್ತರ ಕರ್ನಾಟಕದ ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews