ಬೆಂಗಳೂರು: ರಾಜ್ಯ ಕಾಂಗ್ರೆಸ್‍ನಲ್ಲೀಗ ಪವರ್ ಲೆಸ್ ಹಾಗು ಪವರ್ ಫುಲ್ ನಾಯಕರಿಬ್ಬರ ನಡುವೆ ತೆರೆಮರೆಯಲ್ಲಿ ಯಾರು ಬಲಿಷ್ಠರೆಂಬ ಪೈಪೋಟಿ ನಡೆಯುತ್ತಿದೆ. ಇಲ್ಲಿ ಒಬ್ಬರಿಗೆ ಅಧಿಕಾರವಿದ್ರೂ ಪವರ್ ಲೆಸ್ ಆಗಿದ್ದಾರೆ. ಇತ್ತ ಅಧಿಕಾರ ಇಲ್ಲದಿದ್ದರೂ ಪಕ್ಷದ ಆಂತರಿಕ ಆಡಳಿತದಲ್ಲಿ ಹಿಡಿತವನ್ನು ಹೊಂದಿದ್ದಾರೆ. ಈ ಇಬ್ಬರ ನಾಯಕರ ಪೈಪೋಟಿಯಲ್ಲಿ ರಾಜ್ಯ ಸಮ್ಮಿಶ್ರ ಸರ್ಕಾರದ ಸಂಪುಟ ವಿಸ್ತರಣೆಗೂ ಬ್ರೇಕ್ ಬಿದ್ದಿದೆ.
ಪವರ್ ಲೆಸ್ ಹಾಗೂ ಪವರ್ ಫುಲ್ ಗೇಮ್ ಆಡ್ತಾ ಇರೋದು ಬೇರೆ ಯಾರು ಅಲ್ಲಾ ಒಬ್ರು ಡಿಸಿಎಂ ಜಿ.ಪರಮೇಶ್ವರ್ ಇನ್ನೊಬ್ಬರು ಮಾಜಿ ಸಿಎಂ, ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿಯ ಮುಖ್ಯಸ್ಥ ಸಿದ್ದರಾಮಯ್ಯ. ಪವರ್ ಫುಲ್ ಮತ್ತು ಪವರ್ ಲೆಸ್ಸ್ ನಾಯಕರ ಕಣ್ಣಾಮುಚ್ಚಾಲೆ ಆಟದಿಂದಾಗಿ ವಾರದ ಒಳಗೆ ನಿಗಮ ಮಂಡಳಿ ಅಧ್ಯಕ್ಷರಾಗ್ತೀವಿ ಅಂದುಕೊಂಡಿದ್ದ ಶಾಸಕರು, ನಾಯಕರುಗಳಿಗೆ ನಿರಾಸೆಯಾಗಿದೆ.
ಕಾಂಗ್ರೆಸ್ ಹೈಕಮಾಂಡ್ ಕ್ಯಾಬಿನೆಟ್ ಹಾಗೂ ಸಂಪುಟ ವಿಸ್ತರಣೆಗೆ ಸಿದ್ಧತೆ ಮಾಡುವಂತೆ ಗ್ರೀನ್ ಸಿಗ್ನಲ್ ಕೊಟ್ಟಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಧರ್ಮಸ್ಥಳದ ಶಾಂತಿವನದಲ್ಲಿ ಪ್ರಕೃತಿ ಚಿಕಿತ್ಸೆಗೆ ಹೋದ ಕಾರಣ ಪರಮೇಶ್ವರ್ ಯಾವುದೇ ನಿರ್ಧಾರ ಕೈಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಹೈಕಮಾಂಡ್ ನಿಗಮ ಮಂಡಳಿಯ ಪಟ್ಟಿ ಕೊಡಿ ಅಂದ್ರು ಪವರ್ ಇರೋ ನಾಯಕರು ಲಿಸ್ಟ್ ಕೊಡ್ತಿಲ್ಲ. ಪವರ್ ಕಳೆದುಕೊಂಡವರು ಪಟ್ಟು ಬಿಡ್ತಿಲ್ಲ ಎನ್ನುವ ವಿಚಾರ ಮೂಲಗಳಿಂದ ಪಬ್ಲಿಕ್ ಟಿವಿಗೆ ಸಿಕ್ಕಿದೆ.
ಸಂಪುಟ ವಿಸ್ತರಣೆ ಯಾವಾಗ..?: ಇತ್ತ ಸಚಿವ ಅಥವಾ ನಿಗಮ ಮಂಡಳಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ಸಂಪುಟ ರಚನೆ ಯಾವಾಗ ಎಂದು ಪರಮೇಶ್ವರ್ ಅವರ ದುಂಬಾಲು ಬಿದ್ದಿದ್ದಾರಂತೆ. ಇತ್ತ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿರುವ ಸಿದ್ದರಾಮಯ್ಯ ಧರ್ಮಸ್ಥಳದಿಂದ ಬಂದ ಮೇಲೆ ನೆಮ್ಮದಿಯಾಗಿ ಕುಳಿತು ಮಾತನಾಡೋಣ ಅಂತಾ ಹೇಳಿದ್ದರಿಂದ ಪರಮೇಶ್ವರ್ ಯಾವ ಪಟ್ಟಿಯನ್ನು ಅಂತಿಮಗೊಳಿಸಲು ಮುಂದಾಗುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.
ಪಕ್ಷದ ಅಧ್ಯಕ್ಷ ಸ್ಥಾನದಲ್ಲಿರೋದರ ಜೊತೆಗೆ ಉಪ ಮುಖ್ಯಮಂತ್ರಿ ಆಗಿದ್ದರೂ ನಾನು ಬೇರೆಯವರ ಮಾತು ಕೇಳುವ ಪರಿಸ್ಥಿತಿ ಬಂದಿದೆ. ಆದ್ರೆ ಇದೆನ್ನಲ್ಲಾ ಎಲ್ಲರ ಮುಂದೆ ಹೇಳಿಕೊಳ್ಳೊದಕ್ಕೆ ಆಗಲ್ಲ, ಅನಿವಾರ್ಯವಾಗಿ ಸಿದ್ದರಾಮಯ್ಯನವರು ಚಿಕಿತ್ಸೆ ಮುಗಿಸಿ ಬರುವವರೆಗೂ ಕಾಯುವುದು ಅನಿವಾರ್ಯವಾಗಿದೆ ಎಂದು ಪರಮೇಶ್ವರ್ ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆಂದು ಪಬ್ಲಿಕ್ ಟಿವಿಗೆ ಮೂಲಗಳು ತಿಳಿಸಿವೆ.
ಕಾಂಗ್ರೆಸ್ ಶಾಸಕರು ಹಾಗೂ ಮುಖಂಡರುಗಳು ಈಗ ಪರಮೇಶ್ವರ್ ಗೆ ಪವರ್ ಇದ್ರು ಪವರ್ ಲೆಸ್. ಸಿದ್ರಾಮಯ್ಯ ಕೈಲಿ ಪವರ್ ಇಲ್ದಿದ್ರು ಪವರ್ ಫುಲ್ ಕಣ್ರಿ ಅಂತ ತಮ್ಮ ಆಪ್ತರ ಜೊತೆ ಮಾತನಾಡಿಕೊಳ್ಳುತ್ತಿದ್ದಾರೆ.