ಕಾಫಿ ಕಿಂಗ್ ಸಿದ್ಧಾರ್ಥ್‌ಗೆ ಬೈಕ್ ರ‍್ಯಾಲಿ ಮೂಲಕ ನಮನ

Public TV
2 Min Read
siddarth bike ride

ಬೆಂಗಳೂರು: ಇತ್ತೀಚೆಗೆ ನಿಧನರಾದ ಕೆಫೆ ಕಾಫಿ ಡೇ ಸಂಸ್ಥಾಪಕ ವಿ.ಜಿ.ಸಿದ್ಧಾರ್ಥ್ ಅವರಿಗೆ ಬೈಕ್ ರ‍್ಯಾಲಿ ನಡೆಸುವ ಮೂಲಕ ಯುವಕರು ಗೌರವ ನಮನ ಸಲ್ಲಿಸುತ್ತಿದ್ದಾರೆ.

ರೈಡರ್ಸ್ ರಿಪಬ್ಲಿಕ್ ಮೋಟರ್ ಸೈಕಲ್ ಕ್ಲಬ್‍ನ 50ಕ್ಕೂ ಹೆಚ್ಚು ಬೈಕ್ ಸವಾರರಿಂದ ಈ ರ‍್ಯಾಲಿ ಹಮ್ಮಿಕೊಂಡಿದ್ದು, ಸುಮಾರು 400 ಕಿ.ಮೀ. ಮೋಟರ್ ಸೈಕಲ್ ರೈಡ್ ನಡೆಸುವ ಮೂಲಕ ಸಿದ್ಧಾರ್ಥ್ ಅವರಿಗೆ ಗೌರವ ನಮನ ಸಲ್ಲಿಸಲಿದ್ದಾರೆ.

vlcsnap 2019 08 04 09h45m21s617 e1564892922144

ರಾಜ್ಯದಿಂದ ಆಂಧ್ರ ಪ್ರದೇಶದ ಪೆನುಗೊಂಡವರೆಗೆ ಈ ವಿಶೇಷ ಬೈಕ್ ರ‍್ಯಾಲಿ ಹಮ್ಮಿಕೊಳ್ಳಲಾಗಿದ್ದು, ಮೋಟರ್ ಸೈಕಲ್ ರೈಡ್‍ನಲ್ಲಿ ದಾರಿಯುದ್ದಕ್ಕೂ ಕಾಣಸಿಗುವ ಪ್ರಮುಖ ಕೆಫೆ ಕಾಫಿ ಡೇ ಔಟ್‍ಲೆಟ್‍ಗಳಿಗೆ ಭೇಟಿ ನೀಡಿ ಶ್ರದ್ಧಾಂಜಲಿ ಸಲ್ಲಿಸಿ, ಹೀಗೆ ಪೆನುಗೊಂಡದವರೆಗೆ ತೆರಳಲಿದ್ದಾರೆ.

ಸೋಮವಾರ ಸಿದ್ಧಾರ್ಥ್ ಕಾಣೆಯಾಗಿರುವ ಕುರಿತು ಸುದ್ದಿ ಬಿತ್ತರವಾಗಿತ್ತು. ಕೆಫೆ ಕಾಫಿ ಡೇ ಸಂಸ್ಥಾಪಕ ಸಿದ್ಧಾರ್ಥ್ ಅವರು ಕಾಣೆಯಾಗಿ 36 ಗಂಟೆಗಳ ನಂತರ ನೇತ್ರಾವತಿ ನದಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬ ಅನುಮಾನ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಪೊಲಿಸರು ತನಿಖೆ ನಡೆಸುತ್ತಿದ್ದಾರೆ.

vlcsnap 2019 08 04 09h43m03s183 e1564892999299

1993ರಲ್ಲಿ ಕಾಫಿ ಉದ್ದಿಮೆಗೆ ಕಾಲಿಟ್ಟ ಸಿದ್ದಾರ್ಥ್, ತಮ್ಮ ಜೀವಮಾನದಲ್ಲಿ ಮತ್ತೆಂದು ತಿರುಗಿಯೂ ನೋಡಲಿಲ್ಲ. 24ನೇ ವಯಸ್ಸಿಗೆ ಸ್ಟಾಕ್ ಮಾರ್ಕೆಟ್‍ನಲ್ಲಿ ಷೇರು ಖರೀದಿಸಿದ್ದರು. ಚಿಕ್ಕಮಗಳೂರು-ಹಾಸನ-ಮಡಿಕೇರಿಯಲ್ಲಿ ನಷ್ಟದಲ್ಲಿದ್ದ ಕಾಫಿ ತೋಟಗಳನ್ನು ಖರೀದಿಸಿ, ಹಂತ ಹಂತವಾಗಿ ಬೆಳೆಯುತ್ತಾ 13 ಸಾವಿರಕ್ಕೂ ಅಧಿಕ ಹೆಕ್ಟೇರ್ ಕಾಫಿ ತೋಟದ ಮಾಲೀಕರಾದರು.

1996ರಲ್ಲಿ ಬೆಂಗಳೂರಿನ ಎಂ.ಜಿ ರಸ್ತೆಯಲ್ಲಿ ಮೊದಲ ಕಾಫಿ ಡೇ ಆರಂಭಿಸಿದ್ದರು. ಒಂದು ನೂರಾಗಿ, ನೂರು ಐನೂರಾಗಿ ವಿಶ್ವಾದ್ಯಂತ 10ಕ್ಕೂ ಹೆಚ್ಚು ದೇಶ ಸೇರಿದಂತೆ 1772 ಕಾಫಿ ಡೇ ಔಟ್‍ಲೇಟ್‍ನ ಒಡೆಯರಾದರು. ವಾರ್ಷಿಕ 28 ಸಾವಿರ ಟನ್ ಕಾಫಿ ರಫ್ತು ಮಾಡುವ ಮೂಲಕ ಜಗತ್ತೇ ಕರ್ನಾಟಕದತ್ತ ತಿರುಗಿ ನೋಡುವಂತೆ ಮಾಡಿದ್ದರು. ಕಾಫಿ ಡೇಗಳಿಗೆ ಬೇಕಾದ ಬೀಜವನ್ನು ಸ್ವಂತ ತೋಟದಿಂದಲೇ ಬೆಳೆಯುತ್ತಿದ್ದರು. ಕಾಫಿಯ ಜೊತೆ 10ಕ್ಕೂ ಹೆಚ್ಚು ವಿವಿಧ ಕಂಪನಿಗಳನ್ನು ಆರಂಭಿಸಿ ಸಾವಿರಾರು ಜನರಿಗೆ ಉದ್ಯೋಗ ನೀಡಿದ್ದರು.

siddharth CCD

ಸಿದ್ಧಾರ್ಥ್ ಅವರು ಸಭೆ ಆರಂಭಕ್ಕೂ ಮೊದಲೇ ನಮ್ಮನ್ನು ಉಳಿಸೋದೆ ಹಸಿರು, ಹಸಿರನ್ನು ಬೆಳೆಸಿ ಎಂದು ಸಾರಿ-ಸಾರಿ ಹೇಳುತ್ತಿದ್ದರು. ಕಾರ್ಮಿಕರ ಮಕ್ಕಳ ಮದುವೆ, ಮನೆಗಾಗಿ ಬಂದವರಿಗೆಲ್ಲ ಸಹಾಯ ಮಾಡುತ್ತಿದ್ದ ಇವರನ್ನು ಜನ ಪೂಜ್ಯ ಭಾವನೆಯಿಂದಲೇ ನೋಡುತ್ತಿದ್ದರು. ಇಂತಹ ಗುಣದ ಸಿದ್ಧಾರ್ಥ್ ಅವರಿಗೆ ಇದೀಗ ಬೈಕ್ ರ‍್ಯಾಲಿ ಮೂಲಕ ಯುವಕರು ಶ್ರದ್ಧಾಂಜಲಿ ಅರ್ಪಿಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *