ಚಿಕ್ಕಮಗಳೂರು: ಮರಗಿಡಗಳು ಹೂ ಬಿಟ್ಟರೆ ಜನ ಖುಷಿಯಾಗುತ್ತಾರೆ. ಆದರೆ ಕಾಫಿಗಿಡದಲ್ಲಿ ಹೂವನ್ನ ಕಂಡು ಮಲೆನಾಡಿಗರು ಆತಂಕಕ್ಕೀಡಾಗಿದ್ದಾರೆ. ಹೊತ್ತಲ್ಲದ ಹೊತ್ತಲ್ಲಿ ಬಿಡುತ್ತಿರೋ ಈ ಹೂ ಬದುಕನ್ನೇ ತಿಂದಾಕುತ್ತಾ ಎಂದು ಕಂಗಾಲಾಗಿದ್ದಾರೆ. ಯಾಕಂದ್ರೆ ಗಿಡದಲ್ಲಿರೋ ಹಣ್ಣನ್ನ ಕಿತ್ತೇ ಇಲ್ಲ. ಹಣ್ಣನ್ನ ಕೀಳೋ ಮೊದಲೇ ಹೂಗಳು ಅರಳಿ ನಿಂತಿರೋದು ಮಲೆನಾಡಿಗರು ತಲೆ ಮೇಲೆ ಕೈಹೊದ್ದು ಕೂರುವಂತೆ ಮಾಡಿದೆ. ನೋಡೋ ಕಣ್ಣಿಗೆ ಸುಂದರವಾಗಿ ಕಾಣೋ ಈ ಸೌಂದರ್ಯ ಸಾವಿರಾರರು ಜನರ ಬದುಕಿಗೆ ಅಂಧಕಾರ ತರುವಂತಾಗಿದೆ. ಕಳೆದೆರಡು ವರ್ಷಗಳಿಂದ ಧಾರಾಕಾರವಾಗಿ ಹೊತ್ತಲ್ಲದ ಹೊತ್ತಲ್ಲಿ ಸುರಿಯುತ್ತಿರೋ ಮಳೆ, ಪ್ರಕೃತಿಯ ಜೀವನ ಶೈಲಿಯನ್ನೇ ಬದಲಿಸಿದ್ಯಾ ಎಂಬ ಅನುಮಾನವು ಮಲೆನಾಡಿಗರಲ್ಲಿ ದಟ್ಟವಾಗಿದೆ.
ಮಲೆನಾಡಲ್ಲಿ ಈಗ ಕಾಫಿ ಹಣ್ಣನ್ನ ಕುಯ್ಯೋ ಸಮಯ. ಏಪ್ರಿಲ್-ಮೇನಲ್ಲಿ ಹೂ ಬಿಡೋ ಗಿಡ ಡಿಸೆಂಬರ್-ಜನವರಿ ಹೊತ್ತಿಗೆ ಹಣ್ಣಾಗಿ ಕೊಯ್ಲಿಗೆ ರೆಡಿ ಇರುತ್ತೆ. ಆದರೆ ಈ ವರ್ಷ ಮಲೆನಾಡ ಕೊಟ್ಟಿಗೆಹಾರ, ತಲಗೂರು, ಗಬ್ಬಲ್, ಸಾರಗೋಡು ಸೇರಿದಂತೆ ಅಲ್ಲಲ್ಲೇ ಸುರಿದ ಅಕಾಲಿಕ ಮಳೆಗೆ ಹಣ್ಣನ್ನ ಕುಯ್ಯುವ ಮೊದಲೇ ಗಿಡದಲ್ಲಿ ಹೂಗಳು ಅರಳಿ ನಿಂತಿದೆ. ಹೀಗೆ ಹೊತ್ತಲ್ಲದ ಹೊತ್ತಲ್ಲಿ ಗಿಡದಲ್ಲಿ ಹೂವನ್ನ ಕಂಡ ಮಲೆನಾಡಿಗರು ಬದುಕಿನ ಬಗ್ಗೆ ಕಂಗಾಲಾಗಿದ್ದಾರೆ. ಯಾಕಂದ್ರೆ, ಈ ಹೂ ಮುಂದಿನ ಡಿಸೆಂಬರ್-ಜನವರಿವರೆಗೂ ಇರೋದಿಲ್ಲ. ಹಾಗಾಗಿ ಜನವರಿ ಹೂವಿನ ಘಮಲು ಕಾಫಿ ಬೆಳೆಗಾಗರರ ಬದುಕಿಗೆ ಸುಗಂಧ ತರದ ಹೂವಾಗಿದೆ.
2019ರ ಜುಲೈ, ಆಗಸ್ಟ್, ಸೆಪ್ಟೆಂಬರ್ ಮಳೆಗೆ ಮಲೆನಾಡಿಗರು ಕಂಗಾಲಾಗಿದ್ದರು. ಹೂ, ಕಾಯಿ ಗಿಡದಲ್ಲಿ ಇರೋದಕ್ಕಿಂತ ನೆಲದಲ್ಲಿ ಇದ್ದದ್ದೇ ಹೆಚ್ಚು. ಜಿಲ್ಲೆಯಲ್ಲಿ ಒಂದು ಲಕ್ಷ ಹೆಕ್ಟೆರ್ ನಲ್ಲಿ ಬೆಳೆದಿರೋ ಕಾಫಿಯಲ್ಲಿ ಮಣ್ಣಪಾಲಾದದ್ದೇ ಹೆಚ್ಚು. ಅಳಿದುಳಿದಿರೋ ಬೆಳೆ ಉಳಿಸಿಕೊಳ್ಳುವಲ್ಲಿ ಬೆಳೆಗಾರರು ಹೈರಾಣಾಗಿದ್ದರು. ಆದರೆ ಇಂದಿನ ಸ್ಥಿತಿ ಮತ್ತಷ್ಟು ಆತಂಕ ತಂದೊಡ್ಡಿದೆ. ಸೈತಾನನಂತೆ ಮಳೆ ಸುರಿಯುವಾಗ ಋಣ ಇದ್ದಷ್ಟು ಸಿಗುತ್ತೆಂದು ತೋಟದತ್ತ ಮುಖ ಮಾಡೋದನ್ನ ಕೈಬಿಟ್ಟಿದ್ದರು. ವಾಡಿಕೆಗಿಂತ ಜಾಸ್ತಿ ಸುರಿದ ಮಳೆ 2019ರ ಬದುಕನ್ನ ನುಂಗಿ ನೀರು ಕುಡಿದಿದ್ರೆ, ಈಗ ಹೊತ್ತಲ್ಲದ ಹೊತ್ತಲ್ಲಿ ಸುರಿಯುತ್ತಿರೋ ಮಳೆ ಭವಿಷ್ಯದ ಬದುಕಿಗೂ ಸಂಚಕಾರ ತಂದಿದೆ.
ಡಿಸೆಂಬರ್-ಜನವರಿಯಲ್ಲಿ ಕಾಫಿ ಗಿಡ ಹೂ ಬಿಡಲ್ಲ. ಏಪ್ರಿಲ್-ಮೇ-ಜೂನ್‍ನಲ್ಲಿ ಹೂ ಬಿಟ್ಟು ಕಾಯಾಗಿ, ಹಣ್ಣಾಗಿ, ಡಿಸೆಂಬರ್-ಜನವರಿ ಹೊತ್ತಿಗೆ ಕೊಯ್ಲಿಗೆ ಸಿದ್ಧವಿರುತ್ತೆ. ಈಗ ಗಿಡದ ತುಂಬಾ ಹೂ ಬಿಟ್ಟಿರೋದ್ರಿಂದ ಹಣ್ಣನ್ನ ಕುಯುವಂತೂ ಇಲ್ಲ. ಹಾಗೇ ಬಿಡಂಗೂ ಇಲ್ಲ. ಬೆಳೆಗಾರರು ಧರ್ಮ ಸಂಕಟದಲ್ಲಿದ್ದಾರೆ. ಸಾಲದಕ್ಕೆ ಈ ಹೂವನ್ನ ಹಾಗೇ ಬಿಟ್ರು ಇನ್ನೊಂದು ವರ್ಷ ಇರೋದಿಲ್ಲ. ಎಷ್ಟೇ ಆರೈಕೆ ಮಾಡಿದ್ರು ಉದುರಿ ಹೋಗಿತ್ತೆ. ಮತ್ತೆ ಹೂ ಬಿಡುತ್ತಾ ಅನ್ನೋ ಆತಂಕ ಬೆಳೆಗಾರರದ್ದು. ಈ ಹೊತ್ತಲ್ಲಿ ಕಾಫಿಗಿಡದಲ್ಲಿ ಹೂವನ್ನ ಕಂಡ ಮಲೆನಾಡಿಗರು ಈ ವರ್ಷದ ಕಾಫಿಯನ್ನ ಮರೆತುಕೊಳ್ಳೋದೆ ಎಂದು ಮಾನಸಿಕವಾಗಿ ಗಟ್ಟಿ ಮನಸ್ಸು ಮಾಡಿಕೊಂಡಿದ್ದಾರೆ.