Connect with us

Bengaluru City

ಮೈಂಡ್ ಟ್ರೀ ಷೇರು ವಶಕ್ಕೆ ಪಡೆದಿದ್ದು ಯಾಕೆ? – ಸಹಿ ಸಿದ್ದಾರ್ಥ್ ಅವರದ್ದಲ್ಲ ಎಂದ ಐಟಿ

Published

on

ಬೆಂಗಳೂರು: ಉದ್ಯಮಿ ಸಿದ್ಧಾರ್ಥ್ ಅವರ ನಿಗೂಢ ನಾಪತ್ತೆ ಪ್ರಕರಣದಲ್ಲಿ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಸಿದ್ಧಾರ್ಥ್ ಅವರು ಬರೆದಿದ್ದಾರೆ ಎನ್ನಲಾದ ವಿದಾಯ ಪತ್ರದಲ್ಲಿ ಸಹಿಗೂ, ವಾರ್ಷಿಕ ದಾಖಲೆ ಸಲ್ಲಿಕೆ ವೇಳೆ ಸಲ್ಲಿಸಿದ್ದ ಸಹಿಗೂ ಹೊಂದಾಣಿಕೆ ಆಗುತ್ತಿಲ್ಲ ಎಂದು ಆದಾಯ ಇಲಾಖೆ ಇಲಾಖೆ ಸ್ಪಷ್ಟನೆ ನೀಡಿದೆ.

ಐಟಿ ಕಿರುಕುಳದಿಂದಲೇ ಸಿದ್ಧಾರ್ಥ್ ಅವರು ಮನನೊಂದಿದ್ದರು ಎನ್ನುವ ವಿಚಾರಕ್ಕೆ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಐಟಿ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದೆ. ಇದರಲ್ಲಿ ಐಟಿಯಿಂದ ಕಿರುಕುಳ ಎಂದು ಹೇಳಿಕೊಂಡಿದ್ದ ಸಿದ್ಧಾರ್ಥ್ ಅವರದ್ದೇ ಎನ್ನಲಾದ ಪತ್ರದ ಬಗ್ಗೆ ಹಾಗೂ ದಾಳಿ ನಡೆಸಿದಾಗ ಬೆಳಕಿಗೆ ಬಂದ ವಿಚಾರದ ಬಗ್ಗೆ ಮಾಹಿತಿ ನೀಡಿದೆ.

ಹೇಳಿಕೆಯಲ್ಲಿ ಏನಿದೆ?
ಐಟಿ ದಾಳಿಯ ವೇಳೆ ಕರ್ನಾಟಕದಲ್ಲಿ ಸಕ್ರಿಯವಾಗಿ ರಾಜಕಾರಣದಲ್ಲಿ ಇರುವ ವ್ಯಕ್ತಿಯ ಜೊತೆ ಕೆಫೆ ಕಾಫಿ ಡೇ(ಸಿಸಿಡಿ) ಆರ್ಥಿಕ ವ್ಯವಹಾರ ನಡೆದಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಇದರ ಜೊತೆ ಸಿಂಗಾಪುರ ಪೌರತ್ವವನ್ನು ಹೊಂದಿರುವ ವ್ಯಕ್ತಿ ಬಳಿ 1.2 ಕೋಟಿ ರೂ. ಪತ್ತೆಯಾಗಿತ್ತು. ಆ ವ್ಯಕ್ತಿ ಈ ಹಣ ಸಿದ್ಧಾರ್ಥ್ ಅವರಿಗೆ ಸೇರಿದ್ದಾಗಿ ಒಪ್ಪಿಕೊಂಡಿದ್ದರು. ದಾಳಿ ವೇಳೆ ದಾಖಲೆ ಇಲ್ಲದ 362.11 ಕೋಟಿ ರೂ. ಮತ್ತು 118.02 ಕೋಟಿ ರೂ. ಹಣ ಸಿಕ್ಕಿತ್ತು. ವಿಚಾರಣೆ ವೇಳೆ ಈ ಹಣ ಕ್ರಮವಾಗಿ ತನಗೆ ಮತ್ತು ಸಿಸಿಡಿಗೆ ಸೇರಿದ ಹಣ ಎಂದು ಒಪ್ಪಿಕೊಂಡಿದ್ದರು. ಇದನ್ನು ಓದಿ: ಮೈಂಡ್ ಟ್ರೀಯಲ್ಲಿ ಸಿದ್ಧಾರ್ಥ್ ಷೇರು ಎಷ್ಟಿತ್ತು? ಕೋಕಾ ಕೋಲಾ ಡೀಲ್ ಎಲ್ಲಿಯವರೆಗೆ ಬಂದಿತ್ತು? ಸಾಲ ಎಷ್ಟಿತ್ತು?

ಸಿದ್ಧಾರ್ಥ್ ಅವರು ವಾರ್ಷಿಕ ತೆರಿಗೆಯನ್ನು ಪಾವತಿ ಮಾಡಿದ್ದರೂ ದಾಖಲೆ ಇಲ್ಲದ ಹಣಕ್ಕೆ ತೆರಿಗೆಯನ್ನು ಪಾವತಿ ಮಾಡಿರಲಿಲ್ಲ. ಈ ಎರಡು ಪ್ರಕರಣ ಹೊರತು ಪಡಿಸಿ 35 ಕೋಟಿ ರೂ. ತೆರಿಗೆ ಹಣವನ್ನು ಪಾವತಿಸಿದ್ದರು. ಉಳಿದಂತೆ ಕಾಫಿ ಡೇ ಗ್ಲೋಬಲ್ ಲಿಮಿಟೆಡ್ ಕಂಪನಿ ಸ್ವಯಂ ಮೌಲ್ಯ ಮಾಪನ ತೆರಿಗೆಯಾದ 14.5 ಕೋಟಿ ರೂ. ಪಾವತಿಸಿರಲಿಲ್ಲ.

2019ರ ಜನವರಿ 21 ರಂದು ಮಾಧ್ಯಮಗಳಲ್ಲಿ ಸಿದ್ಧಾರ್ಥ್ ಅವರು ಮೈಂಡ್ ಟ್ರೀ ಕಂಪನಿಯಲ್ಲಿದ್ದ ಷೇರನ್ನು ಮಾರಾಟ ಮಾಡಲು ಮುಂದಾಗುತ್ತಿದ್ದಾರೆ ಎನ್ನುವ ಸುದ್ದಿ ಪ್ರಕಟವಾಗಿತ್ತು. ಕಾಫಿ ಡೇ ಎಂಟರ್‌ಪ್ರೈಸಸ್, ಕಾಫಿ ಡೇ ಟ್ರೇಡಿಂಗ್ ಲಿಮಿಟೆಡ್ ಮತ್ತು ಸಿದ್ಧಾರ್ಥ್ ಹೆಸರಿನಲ್ಲಿದ್ದ ಹತ್ತಿರ ಹತ್ತಿರ ಶೇ.21 ಷೇರನ್ನು ಜನವರಿಯಲ್ಲೇ ಮಾರಾಟಕ್ಕೆ ಸಿದ್ಧತೆ ನಡೆದಿತ್ತು. ಇದನ್ನು ಓದಿ: ಸಿದ್ದಾರ್ಥ್ ಕೊನೆಯ ಮೊಬೈಲ್ ಲೊಕೇಷನ್ ಪತ್ತೆ

ದಾಳಿ ಸಂದರ್ಭದಲ್ಲಿ ದಾಖಲೆ ಇಲ್ಲದ ಹಣ, ತೆರಿಗೆ ವಂಚನೆ, ತೆರಿಗೆ ವಂಚಿಸಿದ್ದಕ್ಕೆ ದಂಡ ಎಲ್ಲವೂ ಸೇರಿದಾಗ ಈ ಮೊತ್ತ 100 ಕೋಟಿ ಆಗಿತ್ತು. ಇದರ ಜೊತೆಯಲ್ಲೇ ಆದಾಯ ತೆರಿಗೆ ಪ್ರಕ್ರಿಯೆ ನಡೆಯುತ್ತಿದ್ದಾಗ ತನ್ನ ಬಳಿಯಿದ್ದ ಆಸ್ತಿಯನ್ನು ಬೇರೆ ಕಂಪನಿಗೆ ಮಾರಾಟ ಮಾಡಬೇಕಾದರೆ ಕೆಲ ಅನುಮತಿಯನ್ನು ಪಡೆದುಕೊಳ್ಳಬೇಕಾಗುತ್ತದೆ. ಆದರೆ ಸಿದ್ಧಾರ್ಥ್ ಅವರು ಯಾವುದೇ ಅನುಮತಿಯನ್ನು ಪಡೆಯದೇ ಮಾರಾಟ ಮಾಡಲು ಮುಂದಾಗಿದ್ದರು. ಈ ಕಾರಣಕ್ಕೆ ಮೈಂಡ್ ಟ್ರೀಯಲ್ಲಿದ್ದ 74,90,000 ಶೇರುಗಳನ್ನು ಆದಾಯ ತೆರಿಗೆ ಇಲಾಖೆ ವಶಕ್ಕೆ ಪಡೆದಿತ್ತು. ಷೇರು ವಶಕ್ಕೆ ಪಡೆದ ಬಳಿಕ ಸಿದ್ಧಾರ್ಥ್ ಅವರು ಷೇರು ಮಾರಾಟಕ್ಕೆ ಅನುಮತಿ ಕೇಳಿದ್ದರು. ಈ ಪ್ರಕ್ರಿಯೆಯಾದ ಬಳಿಕ ಅನುಮತಿ ನೀಡಲಾಯಿತು. 2019ರ ಏಪ್ರಿಲ್ 24 ರಂದು 3200 ಕೋಟಿ ರೂ.ಗೆ ಸಿದ್ಧಾರ್ಥ್ ಅವರಲ್ಲಿದ್ದ ಷೇರು ಲಾರ್ಸನ್ ಆಂಡ್ ಟ್ಯಾಬ್ರೋ ಕಂಪನಿಗೆ ಮೈಂಡ್ ಟ್ರೀ ಕಂಪನಿಯ ವರ್ಗಾವಣೆ ಆಯಿತು.

https://www.youtube.com/watch?v=f5o2MLo1zXM

Click to comment

Leave a Reply

Your email address will not be published. Required fields are marked *