ಒಂದು ಕುಟುಂಬದಲ್ಲಿ ಮಗುವಿನ ಆಗಮನ ಅತ್ಯಂತ ಸಂತೋಷದ ಕ್ಷಣವಾಗಿರುತ್ತದೆ. ಅದು ಗಂಡಾಗಲಿ, ಹೆಣ್ಣಾಗಲಿ. 9 ತಿಂಗಳು ಮಗುವನ್ನು ಹೊಟ್ಟೆಯಲ್ಲಿಟ್ಟುಕೊಂಡು ಆರೈಕೆ ಮಾಡುವ ಹೆಣ್ಣು, ಅಮ್ಮ ಎನಿಸಿಕೊಳ್ಳುವ ಅದ್ಭುತ ಕ್ಷಣವದು. ಒಂದು ಹೆಣ್ಣು ಅಮ್ಮ ಆದಾಗಲೇ ಆಕೆಯ ಜೀವನ ಪರಿಪೂರ್ಣಗೊಳ್ಳುತ್ತದೆ. ಅದು ಆಕೆಯ ಪುನರ್ಜನ್ಮವೂ ಹೌದು. ಆದರೆ ಇತ್ತೀಚಿಗೆ ಆಸ್ಪತ್ರೆಗಳಲ್ಲಿ ಹುಟ್ಟಿದಾಕ್ಷಣ ನವಜಾತ ಶಿಶುಗಳ ಕಳ್ಳತನ (New Born Baby Theft) ಪ್ರಕರಣಗಳು ಜಾಸ್ತಿಯಾಗುತ್ತಿವೆ. ಇದನ್ನು ತಡೆಗಟ್ಟುವ ಸಲುವಾಗಿ ಮಹಾರಾಷ್ಟ್ರ (Maharashtra) ಸರ್ಕಾರ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ.
ಹೌದು, ಮಹಾರಾಷ್ಟ್ರದ ಕೆಲವು ಆಸ್ಪತ್ರೆಗಳಲ್ಲಿ ಶಿಶು ಕಳ್ಳತನ ಪ್ರಕರಣಗಳು ಏರಿಕೆಯಾಗುತ್ತಿದೆ. ಈ ಹಿನ್ನೆಲೆ ಮಹಾರಾಷ್ಟ್ರದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ‘ಕೋಡ್ ಪಿಂಕ್ʼ ಎಂಬ ಯೋಜನೆಯನ್ನು ಜಾರಿಗೆ ತರಲಾಗಿದೆ. ಹಾಗಿದ್ರೆ ಏನಿದು ಕೋಡ್ ಪಿಂಕ್? ಆಸ್ಪತ್ರೆಗಳಲ್ಲಿ ಹಾಗೂ ಶಿಶು ಕಳ್ಳತನ ತಡೆಗಟ್ಟುವಲ್ಲಿ ಇದರ ಪಾತ್ರವೇನು ಎಂಬುದರ ಕುರಿತು ಇಲ್ಲಿ ವಿವರಿಸಲಾಗಿದೆ.
ಏನಿದು ಕೋಡ್ ಪಿಂಕ್?
ಕೋಡ್ ಪಿಂಕ್ ಆಸ್ಪತ್ರೆಯಲ್ಲಿನ ಒಂದು ತುರ್ತು ಭದ್ರತಾ ವ್ಯವಸ್ಥೆ. ನವಜಾತ ಶಿಶು ಕಳ್ಳತನ ಪ್ರಕರಣಗಳಲ್ಲಿ ತಕ್ಷಣ ಕ್ರಮ ಕೈಗೊಳ್ಳುವ ಸಲುವಾಗಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. 2025ರ ಜುಲೈ 9ರಿಂದ ಮಹಾರಾಷ್ಟ್ರದ ಎಲ್ಲಾ ಸರ್ಕಾರಿ ಆಸ್ಪತ್ರೆಗಳು ಮತ್ತು ವೈದ್ಯಕೀಯ ಕಾಲೇಜುಗಳಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ.
ಕೋಡ್ ಪಿಂಕ್ ಯೋಜನೆಯಲ್ಲಿ ಪೋಷಕರ ಪಾತ್ರವೂ ಇದೆ. ಒಂದು ಮಹಿಳೆ ಹೆರಿಗೆ ರೂಂಗೆ ಹೋಗುವಲ್ಲಿಂದ ಹಿಡಿದು ಮಗುವನ್ನು ಪೋಷಕರಿಗೆ ಒಪ್ಪಿಸಿ ಡಿಸ್ಚಾರ್ಜ್ ಆಗುವವರೆಗೆ ಮಗುವಿಗೆ ಭದ್ರತೆ ಒದಗಿಸುವ ಜವಾಬ್ದಾರಿಯನ್ನು ಆಸ್ಪತ್ರೆ ಹೊಂದಿರುತ್ತದೆ. ಮಗು ಹುಟ್ಟಿದಾಕ್ಷಣ ಅದರ ಫೂಟ್‌ಪ್ರಿಂಟ್ ತೆಗೆಯಲಾಗುತ್ತದೆ. ಮಗುವಿಗೆ ಮತ್ತು ಪೋಷಕರಿಗೆ ಒಂದೇ ರೀತಿಯ ಐಡಿ ಬ್ಯಾಂಡ್‌ಗಳನ್ನು ನೀಡಲಾಗುತ್ತದೆ. ಇವುಗಳನ್ನು ಡಿಸ್ಚಾರ್ಜ್ ಸಮಯದಲ್ಲಿ ಪರಿಶೀಲಿಸಿ ಬಳಿಕ ಮಗುವನ್ನು ಪೋಷಕರ ಕೈಗೆ ಒಪ್ಪಿಸಲಾಗುತ್ತದೆ.
ಕೋಡ್ ಪಿಂಕ್ ಹೇಗೆ ಕಾರ್ಯ ನಿರ್ವಹಿಸುತ್ತದೆ?
ಕೋಡ್ ಪಿಂಕ್ ಯೋಜನೆಯಲ್ಲಿ ಆರ್‌ಎಫ್‌ಐಡಿ ಅಲಾರಮ್ ವ್ಯವಸ್ಥೆಯು ಮಗುವನ್ನು ವಾರ್ಡ್‌ನಿಂದ ಹೊರಗೆ ಕರೆದೊಯ್ಯುವ ಮೊದಲು ಎಚ್ಚರಿಕೆಯ ಸದ್ದು ಮಾಡುತ್ತದೆ. ಮಗು ಕಳುವಾಗಿದೆ ಎಂದು ತಿಳಿದಾಕ್ಷಣ ಆಸ್ಪತ್ರೆಯ ಎಂಟ್ರಿ ಮತ್ತು ಎಕ್ಸಿಟ್ ದ್ವಾರಗಳನ್ನು ಮುಚ್ಚಲಾಗುತ್ತದೆ. ಅನುಮಾನಾಸ್ಪದ ವ್ಯಕ್ತಿಗಳು, ದೊಡ್ಡ ಬ್ಯಾಗ್ ಹಿಡಿದುಕೊಂಡಿರುವಂತಹ ವ್ಯಕ್ತಿಗಳನ್ನು ತಕ್ಷಣವೇ ಪರಿಶೀಲನೆ ಮಾಡಲಾಗುತ್ತದೆ. ಅಲ್ಲದೇ ಆಸ್ಪತ್ರೆ ಹಾಗೂ ಸುತ್ತಮುತ್ತಲಿನ ಸಿಸಿಟಿವಿಯನ್ನೂ ಪರಿಶೀಲಿಸಲಾಗುತ್ತದೆ.
ಮಗು ಕಳುವಾಗಿ ಒಂದೆರಡು ಗಂಟೆಗಳ ಒಳಗಾಗಿ ಪತ್ತೆಯಾಗದಿದ್ದಲ್ಲಿ ಮಗುವಿನ ವಿವರ ಸಮೇತ ಪಕ್ಕದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಹುಡುಕಾಟ ನಡೆಸಲಾಗುತ್ತದೆ. ಮಗು ಪತ್ತೆಯಾದ ಬಳಿಕ ʼಆಲ್ ಕ್ಲಿಯರ್ʼ ಎಂಬ ಸಂದೇಶವನ್ನು ಆಸ್ಪತ್ರೆಯಲ್ಲಿ ರವಾನಿಸಲಾಗುತ್ತದೆ. ಬಳಿಕ ಆಸ್ಪತ್ರೆಯಲ್ಲಿನ ಚಟುವಟಿಕೆಗಳು ಮೊದಲಿನಂತೆಯೇ ಆರಂಭಗೊಳ್ಳುತ್ತದೆ.
ವೈದ್ಯಕೀಯ ಶಿಕ್ಷಣ ಮತ್ತು ಆಯುಷ್ ಆಯುಕ್ತರು ರಾಜ್ಯ ಮಟ್ಟದ ಕೋಡ್ ಪಿಂಕ್ ಅನುಷ್ಠಾನಕ್ಕೆ ಜವಾಬ್ದಾರರಾಗಿರುತ್ತಾರೆ. ವೈದ್ಯಕೀಯ ಅಧೀಕ್ಷಕರು ಮಾಸಿಕ ಭದ್ರತಾ ಪರಿಶೀಲನೆಗಳನ್ನು ನಡೆಸಬೇಕು ಮತ್ತು ಈ ಉಪಕ್ರಮದ ಕುರಿತು ತ್ರೈಮಾಸಿಕ ವರದಿಗಳನ್ನು ಸಲ್ಲಿಸಬೇಕು. ವೈದ್ಯಕೀಯ, ನರ್ಸಿಂಗ್ ಮತ್ತು ಭದ್ರತಾ ಸಿಬ್ಬಂದಿಗೆ ತರಬೇತಿ ಕಡ್ಡಾಯವಾಗಿದ್ದು, ಆಸ್ಪತ್ರೆಯ ಬಜೆಟ್‌ನಿಂದ ಈ ಯೋಜನೆಗೆ ಹಣವನ್ನು ನೀಡಲಾಗುತ್ತದೆ.
ಕೋಡ್ ಪಿಂಕ್ ಯೋಜನೆ ಏಕೆ ಅಗತ್ಯ?
2025 ರಲ್ಲಿ, ಮೀರಜ್‌ನ ಸರ್ಕಾರಿ ಆಸ್ಪತ್ರೆಯಿಂದ ನವಜಾತ ಶಿಶುವನ್ನು ಅಪಹರಿಸಲಾಯಿತು. ಇಂತಹ ಘಟನೆಗಳು ಸಾರ್ವಜನಿಕರಲ್ಲಿ ಹಾಗೂ ಪೋಷಕರಲ್ಲಿ ಭಯದ ವಾತಾವರಣವನ್ನು ಹರಡುತ್ತವೆ. ಪ್ರತಿದಿನ ಸಾರ್ವಜನಿಕ ಆಸ್ಪತ್ರೆಗಳಲ್ಲಿ ನೂರಾರು ಹೆರಿಗೆಗಳು ನಡೆಯುತ್ತಿರುವುದರಿಂದ, ಭದ್ರತಾ ಲೋಪಗಳು ಗೋಚರಿಸುತ್ತದೆ. ಇದನ್ನು ಪರಿಹರಿಸಲು, ಮಹಾರಾಷ್ಟ್ರ ಸರ್ಕಾರವು ‘ಕೋಡ್ ಪಿಂಕ್ ಯೋಜನೆ’ಯನ್ನು ಪ್ರಾರಂಭಿಸಿದೆ.
ಎಲ್ಲಿ ಜಾರಿಗೆ?
ಆರಂಭದಲ್ಲಿ, ಮುಂಬೈ, ನಾಗ್ಪುರ, ಪುಣೆ, ನಾಸಿಕ್, ಔರಂಗಾಬಾದ್‌ನಲ್ಲಿರುವ ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಇವುಗಳಲ್ಲಿ ನಾಗ್ಪುರದ ಡಾಗಾ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ, ಬಂಡಾರ ಜಿಲ್ಲಾ ಆಸ್ಪತ್ರೆ ಸೇರಿವೆ. ಅಲ್ಲಿ ಪ್ರತಿದಿನ 25ಕ್ಕೂ ಹೆಚ್ಚು ಹೆರಿಗೆಗಳು ನಡೆಯುತ್ತವೆ.
ಕೋಡ್ ಪಿಂಕ್ ಯೋಜನೆಯ ಪರಿಣಾಮ:
*ಸರ್ಕಾರಿ ಆಸ್ಪತ್ರೆಗಳ ಮೇಲೆ ಪೋಷಕರ ನಂಬಿಕೆ ಹೆಚ್ಚಾಗುತ್ತದೆ.
*ಮಕ್ಕಳ ಕಳ್ಳತನದಂತಹ ಅಪರಾಧಗಳನ್ನು ತಡೆಯಬಹುದು.
*ಮಹಾರಾಷ್ಟ್ರ ಅಂತರರಾಷ್ಟ್ರೀಯ ಸುರಕ್ಷತಾ ಮಾನದಂಡಗಳಿಗೆ ಅನುಗುಣವಾಗಿರುತ್ತದೆ.
*ಈ ಯೋಜನೆ ಇತರ ರಾಜ್ಯಗಳಿಗೂ ಮಾದರಿಯಾಗುತ್ತದೆ.
‘ಕೋಡ್ ಪಿಂಕ್ ಯೋಜನೆ ಮಹಾರಾಷ್ಟ್ರ’ ಕೇವಲ ಸುರಕ್ಷತಾ ವ್ಯವಸ್ಥೆಯಲ್ಲ, ಇದು ಪೋಷಕರ ಭಯವನ್ನು ಪರಿಹರಿಸುವ ಯೋಜನೆಯಾಗಿದೆ. ಮಕ್ಕಳ ಸುರಕ್ಷತೆಗಾಗಿ ಮಹಾರಾಷ್ಟ್ರ ಸರ್ಕಾರ ತೆಗೆದುಕೊಂಡ ಈ ಕ್ರಮ ಶ್ಲಾಘನೀಯ. ಈ ಯೋಜನೆ ಯಶಸ್ವಿಯಾದರೇ, ಇತರ ರಾಜ್ಯಗಳು ಸಹ ಇದನ್ನು ಅಳವಡಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ.
ಮಕ್ಕಳನ್ನು ರಕ್ಷಿಸುವುದು ಪೋಷಕರ ಕರ್ತವ್ಯ ಮಾತ್ರವಲ್ಲ, ಇಡೀ ಸಮಾಜದ ಕರ್ತವ್ಯ. ಈ ನಿಟ್ಟಿನಲ್ಲಿ ‘ಕೋಡ್ ಪಿಂಕ್’ ಯೋಜನೆ ಒಂದು ಮಹತ್ವದ ಹೆಜ್ಜೆಯಾಗಿದೆ.