ಬೇಸಿಗೆ ಮುನ್ನವೇ ಎಳನೀರಿಗೆ ಬೇಡಿಕೆ – ಕೇರಳದ ಎಳನೀರು ಮಾರಾಟ

Public TV
1 Min Read
kpl 4 2

-ಕಾಯಿ ಮೇಲ್ಮೈನ ಬಣ್ಣದಲ್ಲೂ ವ್ಯತ್ಯಾಸ

ಕೊಪ್ಪಳ: ಎಳನೀರು ಆರೋಗ್ಯಕ್ಕೆ ಒಳ್ಳೆಯದು. ದಿನಕ್ಕೆ 2 ಎರಡು ಎಳನೀರು ಸೇವಿಸುವಂತೆ ವೈದ್ಯರ ಸಲಹೆ ಮೇರೆಗೆ ಬೆಳಗ್ಗೆ ಅಥವಾ ಸಂಜೆ ವಾಯು ವಿಹಾರಕ್ಕೆ ಬರುವವರು ಎಳನೀರು ಸೇವಿಸುವುದು ಕಡ್ಡಾಯ ಮಾಡಿಕೊಂಡಿದ್ದಾರೆ. ಇದರಿಂದ ಬೇಸಿಗೆ ಮುನ್ನವೇ ಎಳನೀರು ಗಗನಕ್ಕೇರಿದ್ದು, 35ರಿಂದ 40ರೂ.ಗಳಿಗೆ ಮಾರಾಟವಾಗುತ್ತಿವೆ.

ಜಿಲ್ಲೆಯಲ್ಲಿ ತೆಂಗಿನ ಗಿಡಗಳು ನುಸಿ ರೋಗಕ್ಕೆ ತುತ್ತಾದ ಹಿನ್ನೆಲೆಯಲ್ಲಿ ಕಳೆದ 6 ವರ್ಷಗಳಿಂದ ವ್ಯಾಪಾರಿಗಳು ನಿರೀಕ್ಷಿಸಿದಷ್ಟು ಎಳನೀರು ಕಾಯಿ ಸಿಗುತ್ತಿಲ್ಲ. ಇತ್ತೀಚಿನ ದಿನಗಳಲ್ಲಿ ಮದ್ದೂರು, ಗುಬ್ಬಿ, ತುಮಕೂರುಗಳಿಂದ ಎಳನೀರುಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಅಲ್ಲಿಂದಲೂ ಬೇಡಿಕೆಗೆ ತಕ್ಕಂತೆ ಬಾರದಿದ್ದರಿಂದ ಕೇರಳದ ಮೊರೆ ಹೋಗಿದ್ದು, ದುಬಾರಿಯಾದರೂ ಆಮದು ಮಾಡಿಕೊಳ್ಳಲಾಗುತ್ತಿದೆ. ಆರಂಭದಲ್ಲಿ ಒಬ್ಬರೇ ದಲ್ಲಾಳಿಯಿದ್ದರು. ಆದರೆ ಬೇಡಿಕೆ ಹೆಚ್ಚುತ್ತಿದ್ದಂತೆ ದಲ್ಲಾಳಿಗಳ ಸಂಖ್ಯೆಯಲ್ಲೂ ಏರಿಕೆಯಾಗಿದೆ.

kpl 2 3

ವಿಭಿನ್ನ:
ರಾಜ್ಯದ ಎಳನೀರಿನಂತೆ ಕೇರಳದ ಎಳನೀರು ಕಾಯಿಗಳಿಲ್ಲ. ಕಾಯಿ ಮೇಲ್ಮೈನ ಬಣ್ಣದಲ್ಲೂ ವ್ಯತ್ಯಾಸವಿದ್ದು, ಹಳದಿ ಬಣ್ಣವಿದೆ. ರುಚಿಯಲ್ಲಿ ವಗರಾಗಿದ್ದು, ಗಾತ್ರದಲ್ಲೂ ಸಾಮಾನ್ಯ ಅಳತೆಯಲ್ಲಿದೆ. ನೀರಿದ್ದು, ಕೊಬ್ಬರಿಯಿಲ್ಲ. ಕರಾವಳಿ ತೀರದ ಎಳನೀರು ಕಾಯಿಗಳು ಬರುತ್ತಿದ್ದು, ವ್ಯಾಪಾರಿಗಳಿಗೆ ಪ್ರತಿ ಕಾಯಿಗೆ 28 ರೂ.ಗಳಿಗೆ ದೊರೆಯುತ್ತಿದೆ. ಮದ್ದೂರಿನ ಕಾಯಿಗಳ ದರ ಕಡಿಮೆಯಿದ್ದು, ಗಾತ್ರದಲ್ಲಿ ದೊಡ್ಡದಿವೆ. ನೀರು ಮತ್ತು ಕೊಬ್ಬರಿ ಹೊಂದಿರುವ ಕಾಯಿಗಳಿಗೆ ಇತ್ತೀಚಿನ ದಿನಗಳಲ್ಲಿ ನೀರಿಕ್ಷಿಸಿದಷ್ಟು ಜಿಲ್ಲೆಗೆ ಬರುತ್ತಿಲ್ಲ. ಅನಿವಾರ್ಯವಾಗಿ ಕೇರಳದ ಕಾಯಿಗಳನ್ನು ಪಡೆಯುವ ಸ್ಥಿತಿ ಬಂದಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ. ಹೊಸ ಬಗೆಯ ಎಳನೀರು ಕಾಯಿಗಳ ಮೇಲೆ ಗ್ರಾಹಕರ ಆಸಕ್ತಿ ಹೆಚ್ಚಿದ್ದು, ವ್ಯಾಪಾರದಲ್ಲಿ ಏರಿಕೆಯಾಗಿದೆ.

kpl 6 1

ಆತಂಕ:
ಬೇಸಿಗೆ ಮುನ್ನವೇ ಎಳನೀರು ಕಾಯಿಗಳ ದರ ದುಪ್ಪಟ್ಟ ಹೆಚ್ಚಿರುವುದು ಗ್ರಾಹಕರಲ್ಲಿ ಆತಂಕ ಹೆಚ್ಚಾಗಿದೆ. ಕಳೆದ ವರ್ಷ 20ರೂ.ಗಳಿಂದ 25ರೂ.ವರಿಗೂ ಎಳನೀರು ಮಾರಾಟವಾಗಿದ್ದವು. ದುಬಾರಿ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಚಳಿಗಾಲದಲ್ಲಿ 40ರೂ.ದರವಿದ್ದು, ಬೇಸಿಗೆಗೆ ಇನ್ನಷ್ಟು ದುಬಾರಿಯಾಗುವ ಸಾಧ್ಯತೆಗಳಿವೆ. ಶಾಪಿಂಗ್ ಮಾಲ್‍ನಲ್ಲೂ ಎಳನೀರು ಮಾರಾಟ ಮಾಡಲಾಗುತ್ತಿದ್ದು, ಸಂಸ್ಕರಿಸಿದ ಎಳನೀರು ಪ್ಯಾಕೇಟ್‍ಗಳು ಇನ್ನೂ ಬಂದಿಲ್ಲ. ಕೇರಳದ ಎಳನೀರನ್ನು ನಾಲ್ಕೈದು ದಿನಗಳಿಗೆ ಮಾತ್ರ ಸಂಗ್ರಹಿಸಿಡಲು ಸಾಧ್ಯವಿದೆ. ಹೀಗಾಗಿ ಬಹುದಿನಗಳವರಿಗೂ ಶೇಖರಿಸಿಡುವ ಸಂಸ್ಕರಿಸಿದ ಪ್ಯಾಕೇಟ್‍ಗಳು ಬರುವುದು ಉತ್ತಮ ಎನ್ನುತ್ತಾರೆ.

Share This Article
Leave a Comment

Leave a Reply

Your email address will not be published. Required fields are marked *