ದಾವಣಗೆರೆ: ಆಹಾರ ಹುಡುಕಿ ಬಂದ ನಾಗಪ್ಪ ಇಲಿ ತಿಂದು, ಬಳಿಕ ಜೀರ್ಣಿಸಿಕೊಳ್ಳಲು ಆಗದೆ ಸಂಕಟ ಅನುಭವಿಸಿದ ಘಟನೆ ದಾವಣಗೆರೆ ನಗರದ ಚಿಗಟೇರಿ ಜಿಲ್ಲಾಸ್ಪತ್ರೆ ಮುಂಭಾಗ ನಡೆದಿದೆ.
ಆಸ್ಪತ್ರೆಯ ಬಳಿ ಇರುವ ಎಳನೀರು ಅಂಗಡಿಯಲ್ಲಿ ತೆಂಗಿನ ಕಾಯಿಗಳ ಮಧ್ಯೆ ನಾಗಪ್ಪ ದೊಡ್ಡ ಇಲಿಯೊಂದನ್ನು ತಿಂದಿದೆ. ಬಳಿಕ ಅರಗಿಸಿಕೊಳ್ಳಲಾಗದೇ ರಸ್ತೆ ಮಧ್ಯೆ ಬಂದು ತೊಂದರೆ ಅನುಭವಿಸಿದಂತಾಗಿದೆ. ಈ ವೇಳೆ ಅಲ್ಲಿದ್ದ ಜನ ನಾಗಪ್ಪನನ್ನು ಕಂಡು ಗಾಬರಿಗೊಂಡಿದ್ದಾರೆ.
ಪೂರ್ಣ ಪ್ರಮಾಣದಲ್ಲಿ ಇಲಿಯನ್ನು ನುಂಗಿದ ನಾಗರ ಹಾವು ರಸ್ತೆಯಲ್ಲೇ ಒದ್ದಾಟ ಅನುಭವಿಸಿದೆ. ಹೊಟ್ಟೆಯ ಮಧ್ಯೆ ಭಾಗದ ತನಕ ಇಲಿಯನ್ನು ನುಂಗಿದ ನಾಗಪ್ಪ ಅರಗಿಸಿಕೊಳ್ಳಲಾಗದೇ ಇಲಿಯನ್ನು ಹೊರಗೆ ಉಗುಳಲು ಸರ್ಕಸ್ ನಡೆಸಿದೆ. ರಸ್ತೆ ಮಧ್ಯೆ ನಾಗಪ್ಪನ ಸುತ್ತ ಜನರು ಸುತ್ತುವರಿದಿದ್ದರು.
ನಾಗಪ್ಪ ಸುಮ್ಮನೆ ಏನೂ ಮಾಡಲಾಗದ ಸ್ಥಿತಿಯಲ್ಲಿ ನರಳಾಟ ಅನುಭವಿಸಿದೆ. ಶತಾಯಗತಾಯ ಇಲಿಯನ್ನು ಹೊರ ಹಾಕಬೇಕೆಂದು ಸರ್ಕಸ್ ನಡೆಸಿ ಹೊರಳಾಡಿ ಕೊನೆಗೆ ಇಲಿಯನ್ನು ಹೊರಹಾಕಿ ನಿಟ್ಟುಸಿರು ಬಿಟ್ಟಿದೆ. ನಾಗಪ್ಪ ಈ ಸಂಕಟ ನೋಡಲಾಗದೇ ಅಲ್ಲಿದ್ದ ಜನ ಸ್ನೇಕ್ ರಮೇಶ್ ಅವರಿಗೆ ಕರೆ ಮಾಡಿದ್ದಾರೆ.
ಕೂಡಲೇ ಸ್ಥಳಕ್ಕೆ ಧಾವಿಸಿದ ಸ್ನೇಕ್ ರಮೇಶ್ ನಾಗರಹಾವನ್ನು ರಕ್ಷಿಸಿ, ಬಳಿಕ ಕೊಂಡಜ್ಜಿ ಕಾಡಿಗೆ ಬಿಟ್ಟಿದ್ದಾರೆ.