ಧಾರವಾಡ: ನಾಗರ ಪಂಚಮಿ ಬಂದಾಗ ಹುತ್ತಗಳನ್ನು ಹುಡುಕಿಕೊಂಡು ಹೋಗಿ ಪೂಜೆ ಮಾಡುವುದು ಸಾಮಾನ್ಯವಾಗಿದೆ. ಆದರೆ ಜಿಲ್ಲೆಯ ಮುರಕಟ್ಟಿ ಗ್ರಾಮದಲ್ಲಿರುವ ಮನೆಯೊಂದರ ಗೋಡೆಯ ಮೇಲೆಯೇ ಹುತ್ತ ಬೆಳೆಯುತ್ತಿದ್ದು, ವಿಸ್ಮಯ ಮೂಡಿಸಿದೆ.
ಪಂಚಮಿ ಸಂದರ್ಭದಲ್ಲಿ ಜನರು ಇವರ ಮನೆಗೆ ತಂಡೋಪತಂಡವಾಗಿ ಬಂದು ಪೂಜೆ ಸಲ್ಲಿಸುತ್ತಿದ್ದಾರೆ. ಧಾರವಾಡ ಹಳಿಯಾಳ ರಸ್ತೆಯಲ್ಲಿರುವ ಮುರಕಟ್ಟಿ ಗ್ರಾಮದ ಪಾರೀಶನಾಥ ದುಗ್ಗನಕೇರಿ ಎಂಬವರ ಮನೆಯಲ್ಲಿಯೇ ಕಳೆದ 20 ವರ್ಷಗಳಿಂದ ಹುತ್ತ ಬೆಳೆಯುತ್ತಿದೆ.
Advertisement
Advertisement
ಸಾಮಾನ್ಯವಾಗಿ ಹುತ್ತಗಳು ನೆಲದ ಆಳದಿಂದ ಬೆಳೆಯುತ್ತವೆ. ಆದರೆ ಇಲ್ಲಿ ವಿಚಿತ್ರ ಅಂದರೆ ಗೋಡೆಯ ಮೇಲ್ಭಾಗದಿಂದ ಹುತ್ತ ಕೆಳಗಿನ ಭಾಗದತ್ತ ಬೆಳೆಯುತ್ತ ಬರುತ್ತಿದೆ. ಇಲ್ಲಿ ನಾಗರಹಾವು ಕೂಡ ಇದ್ದು, ಇದೇ ಮನೆಯಲ್ಲಿ ಹುತ್ತದ ಜೊತೆಯೇ ಈ ಮನೆಯ ಸದಸ್ಯರು ವಾಸಿಸುತ್ತಿದ್ದಾರೆ. ಆದರೆ ಇದುವರೆಗೂ ಹಾವು ಯಾವುದೇ ತೊಂದರೆ ಮಾಡಿಲ್ಲ. ನಾಗರಹಾವು ಮನೆಯಲ್ಲಿ ಓಡಾಡಿಕೊಂಡಿದೆ. ಮನೆಯ ಸದಸ್ಯರು ಕೂಡ ಹುತ್ತದ ಬಳಿ ಯಾವಾಗಲೂ ಹಾಲು ತುಂಬಿದ ಲೋಟಗಳನ್ನು ಇಟ್ಟು ಬಿಡುತ್ತಾರೆ.
Advertisement
ಈ ಹುತ್ತ ಬೆಳೆದಂತೆ ನಮ್ಮ ಕುಟುಂಬದವರಿಗೂ ಒಳ್ಳೆದಾಗುತ್ತಾ ಬಂದಿದೆ. 20 ವರ್ಷಗಳ ಹಿಂದೆ ಈ ಗ್ರಾಮದ ಮಾರ್ಗವಾಗಿ ಹೋಗುತ್ತಿದ್ದ ಸ್ವಾಮೀಜಿಯೊಬ್ಬರು ನಮ್ಮ ಮನೆಯ ಕಟ್ಟೆಯ ಮೇಲೆ ಕುಳಿತು ಅಲ್ಲೇ ಉಳಿದುಕೊಂಡಿದ್ದರು. ಜೊತೆಗೆ ಪ್ರವಚನ ನಡೆಸಿಕೊಟ್ಟಿದ್ದರು, ಆ ಸ್ವಾಮೀಜಿ ಪ್ರವಚನ ನುಡಿದಂತೆ ಈ ಹುತ್ತ ಬೆಳೆದಿದೆ. ಸ್ವಾಮೀಜಿ ವರ್ಷದ ಬಳಿಕ ಇಲ್ಲಿಂದ ಹೋದರು. ಆದರೆ ಹುತ್ತ ಮಾತ್ರ ಇಂದಿಗೂ ಬೆಳೆಯುತ್ತಲೇ ಇದೆ ಎಂದು ಮನೆಯ ಮಾಲೀಕ ಪಾರೀಶನಾಥ ತಿಳಿಸಿದ್ದಾರೆ.
Advertisement
ಹುತ್ತಕ್ಕೆ ಯಾವುದೇ ಧಕ್ಕೆ ಮಾಡದೆ ಮನೆಯ ಸದಸ್ಯರು ಕೂಡ ಕಾಪಾಡಿಕೊಂಡು ಬರುತ್ತಿದ್ದಾರೆ. ಅಮವಾಸ್ಯೆ ಮತ್ತು ಹುಣ್ಣಿಮೆಗೆ ವಿಶೇಷ ಪೂಜೆ ಮಾಡುತ್ತಾರೆ. ನಾಗರ ಪಂಚಮಿ ಆಗಿದ್ದರಿಂದ ಮುರಕಟ್ಟಿ ಗ್ರಾಮ ಮಾತ್ರವಲ್ಲದೇ ಸುತ್ತಮುತ್ತಲಿನ ಗ್ರಾಮಸ್ಥರು ಸಹ ಆಗಮಿಸಿ ಈ ಹುತ್ತಕ್ಕೆ ಹಾಲೆರೆಯುತ್ತಿದ್ದಾರೆ ಎಂದು ಗ್ರಾಮಸ್ಥ ಶಿವಯ್ಯ ಹೇಳಿದ್ದಾರೆ.