ಬೀದರ್: ದೇವರ ಮನೆಯಲ್ಲಿ ಹಾವೊಂದು ಪ್ರತ್ಯಕ್ಷವಾಗಿ ಗ್ರಾಮಸ್ಥರಲ್ಲಿ ಅಚ್ಚರಿ ಮೂಡಿಸಿರುವ ಘಟನೆ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ರಾಜೇಶ್ವರ ಗ್ರಾಮದಲ್ಲಿ ನಡೆದಿದೆ.
ರಾಜೇಶ್ವರ ಗ್ರಾಮದ ನಿವಾಸಿ ಮಾರುತಿ ಹಲಶಟ್ಟೆ ಅವರ ಮನೆ ಜಗುಲಿ (ದೇವರ ಮನೆ) ಮೇಲೆ ಭಾನುವಾರ ಬೆಳಗ್ಗೆ ಹಾವು ಪ್ರತ್ಯಕ್ಷವಾಗಿದೆ. ಹಾವು ಬೆಳಗ್ಗೆ ಪ್ರತ್ಯಕ್ಷವಾಗಿ ರಾತ್ರಿ ಸುಮಾರು 10 ಗಂಟೆವರೆಗೂ ಸ್ಥಳದಿಂದ ಕದಲದೆ ಒಂದೇ ಸ್ಥಳದಲ್ಲಿ ಕುಳಿತಿದೆ.
ಬೆಳಗ್ಗೆ ಮಹಿಳೆಯರು ಪೂಜೆ ಮಾಡಲು ಹೋದಾಗ ಈ ಹಾವು ಕಂಡು ಬಂದಿದೆ. ಹಾವು ಕಂಡಾಗ ಕೆಲ ಕ್ಷಣ ಗಾಬರಿಗೊಂಡಿದ್ದು, ನಂತರ ಮನೆಯವರಿಗೆ ತಿಳಿಸಿದ್ದಾರೆ. ಬಂದು ನೋಡಿದಾಗ ಈ ಹಾವು ಸುಮಾರು ಐದು ಅಡಿಗಿಂತ ಅಧಿಕ ಉದ್ದವಿದ್ದು, ಕಂದು ಗೋಧಿ ಬಣ್ಣ ಹೊಂದಿತ್ತು. ಮೈ ಮೇಲೆ ಸಣ್ಣ ಸಣ್ಣ ಗಾತ್ರದ ಬಿಳಿ ಚುಕ್ಕೆಗಳು ಇವೆ. ದೇವರ ಮನೆಯಲ್ಲಿಯ ದೇವರ ಮೂರ್ತಿಗಳ ಮೇಲೆ ಠಿಕಾಣಿ ಹೂಡಿದೆ. ಆಗಾಗ ಹೆಡೆ ಎತ್ತಿ ನೋಡುತ್ತಿದೆ.
ಇನ್ನು ಹಾವು ಪ್ರತ್ಯಕ್ಷವಾಗಿರುವ ಸುದ್ದಿ ತಿಳಿದ ಗ್ರಾಮಸ್ಥರು ಸೇರಿದಂತೆ ಸುತ್ತಮತ್ತಲಿನ ಮಂದಿ ಆಶ್ಚರ್ಯಪಟ್ಟು ಸ್ಥಳಕ್ಕೆ ಆಗಮಿಸಿ ವೀಕ್ಷಿಸಿದ್ದಾರೆ. ಈ ಮಧ್ಯೆ ಕೆಲವರು ಹಾವಿಗೆ ಕುಂಕುಮ ಹಚ್ಚಿ ಪೂಜೆ ಸಲ್ಲಿಸುತ್ತಿದ್ದು, ಮತ್ತೆ ಕೆಲವರು ಅದರ ಮೈ ಮುಟ್ಟಿ ನಮಿಸುತ್ತಿದ್ದಾರೆ. ಆದರೆ ಹಾವು ಯಾರಿಗೂ ಕಚ್ಚಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಈ ಹಾವು ಇದೇ ಮೊದಲ ಬಾರಿಗೆ ಮನೆಗೆ ಆಗಮಿಸಿದ್ದು, ಮನೆಯ ಜಗುಲಿ ಮೇಲೆ ಹಾವು ಬಂದಿರುವುದು ಪವಾಡವೇ ಇರಬಹುದು. ನಾಗದೇವತೆ ನಮ್ಮ ಮನೆಗೆ ಆಗಮಿಸಿದ್ದಾಳೆ ಎಂದು ಚರ್ಚೆಯಾಗುತ್ತಿದೆ. ಇನ್ನೂ ಕೆಲವರು ಕುಂಕುಮ ಮತ್ತು ಅರಿಶಿನ ಹಾಕಿ ಭಕ್ತಿ ಪರಾಕಾಷ್ಠೆ ಮೆರೆದ್ರೆ ಮತ್ತೆ ಕೆಲವರು ಹಣ ಹಾಕಿ ಆರಾಧಿಸುವಲ್ಲಿ ತಲ್ಲೀನರಾಗಿದ್ದರು.