ಚಿಕ್ಕಬಳ್ಳಾಪುರ: ಸಮ್ಮಿಶ್ರ ಸರ್ಕಾರ ಬೀಳುತ್ತಿದೆ ಎನ್ನುವುದು ಒಂದು ದೊಡ್ಡ ಡ್ರಾಮಾ. ಕಳೆದ ಆರು ತಿಂಗಳಿಂದ ಸರ್ಕಾರ ಬೀಳಿಸುವ ಅಪರೇಷನ್ ಕಮಲ ಆರಂಭವಾಗಿದೆ. ದೀಪಾವಳಿ, ಯುಗಾದಿ ಶಿವರಾತ್ರಿ ಎಂದು ಹೇಳಿಕೊಂಡೇ ಬಂದಿದ್ದು, ಈಗ ಲೋಕಸಭಾ ಚುನಾವಣೆಯ ನಂತರ ಮತ್ತೆ ಆರಂಭವಾಗಿದೆ ಎಂದು ವಸತಿ ಸಚಿವ ಎಂಟಿಬಿ ನಾಗರಾಜ್ ಹೇಳಿದ್ದಾರೆ.
ಚಿಕ್ಕಬಳ್ಳಾಪುರ ತಾಲೂಕಿನ ಮಂಚನಬಲೆ ಗ್ರಾಮದಲ್ಲಿ ಬಿರೇಶ್ವರ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಎಂಟಿಬಿ, ಸಮ್ಮಿಶ್ರ ಸರ್ಕಾರ ಯಾವ ಕಾರಣಕ್ಕೂ ಬೀಳೋದಿಲ್ಲ. 5 ವರ್ಷಗಳ ಕಾಲ ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ಸುಭದ್ರ ಆಡಳಿತ ನೀಡಲಿದ್ದೇವೆ ಎಂದರು.
ಶಾಸಕ ರಮೇಶ್ ಜಾರಕಿಹೊಳಿ ಜೊತೆ 10 ಮಂದಿ ಶಾಸಕರ ಸಾಮೂಹಿಕ ರಾಜೀನಾಮೆ ನೀಡುವ ಹೇಳಿಕೆಗೆ ಪ್ರತಿಕ್ರಿಯಿಸಿದ ಎಂಟಿಬಿ, ಹೌದು 10 ಜನ ಸೇರಿ ಸಾಮೂಹಿಕವಾಗಿ ರಾಜೀನಾಮೆ ಕೊಡುವುದಾಗಿ ಹೇಳಿದ್ದಾರೆ. ಆದರೆ ಇವರು ಹೇಳೋದನ್ನು ಏನೂ ನಂಬಲು ಸಾಧ್ಯವಿಲ್ಲ ಕಾದು ನೋಡಬೇಕು. ಬಹಳ ದಿನಗಳಿಂದ ಈ ಡ್ರಾಮಾ ಮಾಡ್ತಿದ್ದಾರೆ. ಇದು ಬಣ್ಣ ಇಲ್ಲದ ಡ್ರಾಮಾ. ಬಣ್ಣ ಹಾಕ್ಕೊಂಡು ಡ್ರಾಮಾ ಮಾಡೋದು ಬೇರೆ. ಮೇ 23ರ ನಂತರ ಬಣ್ಣ ಇಲ್ಲದ ಇವರ ಡ್ರಾಮಾ ಬೀದಿಗೆ ಬರುತ್ತೆ ಎಂದರು.
ಈ ಡ್ರಾಮಾದಲ್ಲಿ ಪಾತ್ರಕ್ಕೆ ಅನುಗುಣವಾಗಿ ಎಲ್ಲರೂ ಡ್ರಾಮಾದಲ್ಲಿ ಪಾತ್ರ ಮಾಡ್ತಿದ್ದಾರೆ. ಶಕುನಿ ಪಾತ್ರ ಮಾಡುವವರು ಶಕುನಿ ಪಾತ್ರ ಮಾಡುತ್ತಿದ್ದಾರೆ. ಭೀಮನ ಪಾತ್ರ ಮಾಡುವವರು ಭೀಮನ ಪಾತ್ರ ಮಾಡುತ್ತಿದ್ದಾರೆ. ದುರ್ಯೋಧನನ ಪಾತ್ರ ಮಾಡುವವರು ದುರ್ಯೋಧನನ ಪಾತ್ರ ಮಾಡುತ್ತಿದ್ದಾರೆ. ಅವರ ಆಸೆಗೆ ತಕ್ಕಂತೆ ಪಾತ್ರಗಳನ್ನು ಆರಂಭ ಮಾಡಿಬಿಟ್ಟಿದ್ದಾರೆ. ಈ ಡ್ರಾಮಾದಲ್ಲಿ ಶ್ರೀಕೃಷ್ಣ ಹಿಂದೆ ಇದ್ದಾನೆ. ಯಾರ ಕಣ್ಣಿಗೂ ಕಾಣ್ತಿಲ್ಲ ಎಂದು ಹೇಳಿದರು.
ಇದೇ ವೇಳೆ ಮೇ 23ರ ನಂತರ ಸರ್ಕಾರ ಅದಲು ಬದಲು ವಿಚಾರ ಸಂಬಂಧವೂ ಮಾತನಾಡಿದ ಎಂಟಿಬಿ ನಾಗರಾಜ್, ದೇವೇಗೌಡರೇ ಹೇಳಿರುವ ಹಾಗೆ ಆದರೂ ಆಗಬಹುದು. ಸಿದ್ದರಾಮಯ್ಯ ಅಥವಾ ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗಬಹುದು. ಸಚಿವ ಎಚ್.ಡಿ ರೇವಣ್ಣ ಡಿಸಿಎಂ ಆಗಬಹದು. ಆದರೆ ದೇವೇಗೌಡರ ಮಾತನ್ನು ನಾನು ಸಂಪೂರ್ಣವಾಗಿ ನಂಬಲ್ಲ. ಆದರೆ ಆಗಲೂಬಹುದು ಆಗದೇನು ಇರಬಹುದು ಎಂದರು.
ಇದೇ ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗಿ ಮಾತನಾಡಿದ ಕೃಷಿ ಸಚಿವ ಶಿವಶಂಕಕರೆಡ್ಡಿ, 6 ತಿಂಗಳಿಂದ ಈ ಪ್ರಕ್ರಿಯೆ ನಡೆಯುತ್ತಲೆ ಇದೆ. ರಮೇಶ್ ಜಾರಕಿಹೊಳಿ ಯಾವಾಗ ರಾಜೀನಾಮೆ ಕೊಡ್ತೀನಿ ಎಂದು ಹೇಳುತ್ತಿಲ್ಲ. ಅವರು ಒಬ್ಬರು ರಾಜೀನಾಮೆ ಕೊಡೋದ್ರಿಂದ ಸರ್ಕಾರಕ್ಕೆ ಏನೂ ತೊಂದರೆ ಇಲ್ಲ. ಅವರ ಜೊತೆ ಕೂಡ ಬೇರೆ ಯಾವುದೇ ಶಾಸಕರಿಲ್ಲ. ಅವರ ವೈಯುಕ್ತಿಕ ಹಾಗೂ ಆಗ ಅವರ ಜಿಲ್ಲಾ ರಾಜಕಾರಣದಲ್ಲಿ ಭಿನ್ನಾಭಿಪ್ರಾಯಗಳಿವೆ. ಈ ಬಗ್ಗೆ ಸಿಎಂ ಕುಮಾರಸ್ವಾಮಿ ಕರೆದು ಮಾತನಾಡಿ ಬಗೆಹರಿಸುವ ವಿಶ್ವಾಸವಿದೆ ಎಂದರು.