ರಾಯಚೂರು: ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆ ಚುನಾವಣೆಯಲ್ಲಿ ಗೆದ್ದು ಮತ್ತೆ ಪ್ರಧಾನಿಯಾದ ತಕ್ಷಣ ಸಮ್ಮಿಶ್ರ ಸರ್ಕಾರ ಪತನವಾಗುತ್ತದೆ ಎಂದು ಶಾಸಕ ಶ್ರೀರಾಮುಲು ಭವಿಷ್ಯ ನುಡಿದಿದ್ದಾರೆ.
ಜಿಲ್ಲೆಯ ಸಿಂಧನೂರಿನಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ರಾಜ್ಯದಲ್ಲಿ ಬರಗಾಲವಿದ್ದು ಆಡಳಿತ ಪಕ್ಷದವರು ಸ್ಪಂದಿಸುತ್ತಿಲ್ಲ. ಜನರ ಪಾಲಿಗೆ ಸಮ್ಮಿಶ್ರ ಸರ್ಕಾರ ಸತ್ತುಹೋಗಿದೆ. ಸತ್ತು ಹೋದ ಸರ್ಕಾರವನ್ನು ಕಿತ್ತುಹಾಕಬೇಕಾದರೆ ಮೋದಿಯನ್ನು ಗೆಲ್ಲಿಸಬೇಕು. ಮೋದಿ ಮತ್ತೊಮ್ಮೆ ಪ್ರಧಾನಿಯಾದ ತಕ್ಷಣವೇ ರಾಜ್ಯದಲ್ಲಿರುವ ಸರ್ಕಾರ ಪತನವಾಗಲಿದೆ ಎಂದು ಹೇಳಿದರು.
Advertisement
Advertisement
ಸಿಎಂ ಕುಮಾರಸ್ವಾಮಿಯವರು ಅಧಿಕಾರಕ್ಕೆ ಬರುವ ಮೊದಲು ಸಿನಿಮಾದಲ್ಲಿದ್ದರು. ಅವರು ಯಾರದ್ದೋ ಧ್ವನಿ ಮಿಮಿಕ್ರಿ ಮಾಡಿಸಿ ವಯಸ್ಸಾಗಿರುವ ಯಡಿಯೂರಪ್ಪ ಅವರನ್ನು ಕಾಡುತ್ತಿದ್ದಾರೆ. ಜನರ ಕಷ್ಟಗಳಿಗೆ ಸ್ಪಂದಿಸದ ಈ ಸರ್ಕಾರ ನಮಗೇ ಬೇಕೇ ಎಂದು ಅವರು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡರು.
Advertisement
ಪ್ರಾದೇಶಿಕ ಪಕ್ಷಗಳು ಮಹಾಘಟಬಂಧನ ಮಾಡಿ ನರೇಂದ್ರ ಮೋದಿ ಅವರನ್ನು ಸೋಲಿಸಲು ಪ್ರಯತ್ನ ಮಾಡುತ್ತಿವೆ. ರಾಹುಲ್ ಗಾಂಧಿ ಸೇರಿ ಕೇಳಿಬರುತ್ತಿರುವ ಹೆಸರುಗಳು ಯಾವುದು ಮೋದಿಗೆ ಸಮವಲ್ಲ. ಮೋದಿಯವರ ಕಾರ್ಯಕ್ರಮಗಳನ್ನು ಪ್ರಚಾರ ಮಾಡುವಲ್ಲಿ ನಾವು ಹಿಂದೆ ಬಿದ್ದಿದ್ದೇವೆ. ಆದರೆ ಮೋದಿಯವರ ಕೆಲಸವನ್ನು ದೇಶ ಮಾತ್ರವಲ್ಲದೇ ಇಡೀ ವಿಶ್ವವೇ ಮೆಚ್ಚುತ್ತಿದೆ ಎಂದು ಹೇಳಿದ್ದಾರೆ.
Advertisement
ನಮ್ಮ ಹಣೆಬರಹ ಚೆನ್ನಾಗಿರಲಿಲ್ಲ. ಆದರಿಂದ ನಮಗೆ ರಾಜ್ಯದಲ್ಲಿ ಸರ್ಕಾರ ರಚಿಸಲು ಸಾಧ್ಯವಾಗಿಲ್ಲ. ನಮ್ಮ ಹಣೆಬರಹ ಚೆನ್ನಾಗಿದಿದ್ದರೆ ರಾಜ್ಯ ಹಾಗೂ ಕೇಂದ್ರ ಎರಡರಲ್ಲೂ ನಮ್ಮದೇ ಸರ್ಕಾರ ಇರುತ್ತಿತ್ತು. ಕೇಂದ್ರ ಸರ್ಕಾರ ಹಲವಾರು ಕಾರ್ಯಕ್ರಮ, ಯೋಜನೆಗಳನ್ನ ಜನರಿಗೆ ನೀಡಿದೆ. ಇವತ್ತಿನವರೆಗೂ ದೇಶದ ಜನ ಕಷ್ಟದಲ್ಲಿದ್ದಾರೆ ಎಂದರೆ ಅದು ಹಿಂದಿನ ಸರ್ಕಾರಗಳು ಮಾಡಿರುವ ಎಡವಟ್ಟು. ಘಟಬಂಧನ ಮೂಲಕ ಪುನಃ ದೇಶವನ್ನ ಹಾಳು ಮಾಡಲು ವಿರೋಧ ಪಕ್ಷಗಳು ಹೊರಟಿವೆ ಎಂದು ಹರಿಹಾಯ್ದರು.
ನಾವು ಭಾಷಣ ಮಾಡುವವರು ವೋಟು ಹಾಕಿಸುವವರಲ್ಲ. ಶಕ್ತಿ ಕೇಂದ್ರದ ಪ್ರಮುಖರು ಮನಸ್ಸು ಮಾಡಿದರೆ ಐದು ಜಿಲ್ಲೆಗಳಲ್ಲಿ ಇರುವ ಎಲ್ಲಾ ಲೋಕಸಭಾ ಕ್ಷೇತ್ರಗಳನ್ನು ಬಿಜೆಪಿ ಗೆಲ್ಲಬಹುದು ಎಂದು ಕಾರ್ಯಕರ್ತರನ್ನ ಶ್ರೀರಾಮುಲು ಹುರಿದುಂಬಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv