ಚಿಕ್ಕಬಳ್ಳಾಪುರ: ಮಾಜಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಪರಮೇಶ್ವರ್, ಸಿಎಂ ಕುಮಾರಸ್ವಾಮಿ ಹಾಗೂ ದೇವೇಗೌಡರಿಗಷ್ಟೇ ದೋಸ್ತಿ ಸರ್ಕಾರದಲ್ಲಿ ನಿರ್ಣಯಗಳನ್ನು ತೆಗೆದುಕೊಳ್ಳುವುದರಿಂದ ಶಿಸ್ತು ಸಮನ್ವಯತೆ ಬರುವುದಿಲ್ಲ ಎಂದು ದೋಸ್ತಿ ಸರ್ಕಾರದ ನಾಯಕರ ವಿರುದ್ಧವೇ ಮಾಜಿ ಸಿಎಂ ವೀರಪ್ಪ ಮೊಯ್ಲಿ ಅಸಮಾಧಾನ ಹೊರಹಾಕಿದ್ದಾರೆ.
ಚಿಕ್ಕಬಳ್ಳಾಪುರ ನಗರದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ವೀರಪ್ಪ ಮೊಯ್ಲಿ, ಸಚಿವ ಸಂಪುಟ ವಿಸ್ತರಣೆ ಪುನಾರಚನೆ ಬಗ್ಗೆ ದೋಸ್ತಿ ಸರ್ಕಾರದ ಯಾವುದೇ ನಾಯಕರು ನಮ್ಮ ಬಳಿ ಚರ್ಚೆ ಮಾಡಿಲ್ಲ. ಯಾರನ್ನು ಮಂತ್ರಿ ಮಾಡಬೇಕು ಎಂಬುದರ ಬಗ್ಗೆ ಚರ್ಚೆ ಮಾಡಿಲ್ಲ. ಕೇವಲ ಸಿದ್ದರಾಮಯ್ಯ, ಡಿಸಿಎಂ ಪರಮೇಶ್ವರ್, ಸಿಎಂ ಕುಮಾರಸ್ವಾಮಿ, ಎಚ್‍ಡಿ ದೇವೇಗೌಡರೇ ಎಲ್ಲ ತೀರ್ಮಾನ ಮಾಡುತ್ತಿದ್ದಾರೆ ಎಂದರು.
Advertisement
Advertisement
ಹಿರಿಯ ನಾಯಕರ ನಡುವೆ ಸಹ ಸರಿಯಾದ ಸಮಾಲೋಚನೆ ಮಾಡುತ್ತಿಲ್ಲ. ಈ ದೋಸ್ತಿ ಪಕ್ಷಗಳ ವ್ಯವಸ್ಥೆ ಸರಿಯಿಲ್ಲ. ಇದಲ್ಲದೇ ದೋಸ್ತಿ ಪಕ್ಷಗಳ ನಾಯಕರ ನಡುವೆ ಸಹ ಸಮನ್ವಯತೆಯ ಕೊರತೆ ಇದೆ. ವಲಸಿಗರು-ಹೊಸ ಕಾಂಗ್ರೆಸ್ಸಿಗರೆಂಬ ಬೇಧಭಾವ ಮಾಡಬಾರದು. ಎಲ್ಲರೂ ಕೂತು ಒಮ್ಮತದ ನಿರ್ಣಯ ತೆಗೆದುಕೊಳ್ಳಬೇಕು. ಹಳೆಯ ಹಾಗೂ ವಲಸಿಗರ ನಡುವೆ ಸಹ ಭಾವೈಕ್ಯತೆ ಮೂಡಬೇಕು ಅದೇ ರೀತಿ ದೋಸ್ತಿ ಪಕ್ಷಗಳ ನಾಯಕರ ನಡುವೆಯೂ ಒಮ್ಮತ ಮೂಡಬೇಕು. ಹೀಗಾಗಿ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಹಿನ್ನೆಡೆಗೆ ಸಮನ್ವಯತೆಯ ಕೊರತೆಯೇ ನೇರ ಕಾರಣ ಎಂದರು.
Advertisement
Advertisement
ಜಾತ್ಯಾತೀತ ರಾಜ್ಯ ಕರ್ನಾಟಕದಲ್ಲಿ ಬಿಜೆಪಿ ಹೊರಗೆ ಇಡುವ ಉದ್ದೇಶದಿಂದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮಾಡಿದ ರಾಹುಲ್ ಗಾಂಧಿಯವರ ನಿರ್ಧಾರ ಸರಿ ಇದೆ. ಆದರೆ ಜೆಡಿಎಸ್-ಕಾಂಗ್ರೆಸ್ ನಾಯಕರು ಮಾತ್ರ ಸರ್ಕಾರ ನಡೆಸಿದರೆ ಸಾಲದು, ಎಲ್ಲ ಕಡೆಯಲ್ಲೂ ಸಮನ್ವಯತೆ ಮೂಡಿಸಬೇಕಿತ್ತು. ಇಲ್ಲದಿದ್ದರೆ ಅದು ಹೊಂದಾಣಿಕೆಯಾಗುವುದಿಲ್ಲ. ಕೇರಳದಲ್ಲೂ ಸಹ ಮೈತ್ರಿ ಸರ್ಕಾರ ರಚಿಸಿದ್ದೇವೆ. ಅಲ್ಲಿ ಏನೇ ಕಾರ್ಯಕ್ರಮ ರೂಪಿಸಿದರೂ ಎಲ್ಲಾ ಪಕ್ಷಗಳು ಒಂದುಗೂಡಿ ಮಾಡಿದ್ದೇವು. ಆದರೆ ಅಂತಹ ವ್ಯವಸ್ಥೆ ಕರ್ನಾಟಕದಲ್ಲಿ ನಿರ್ಮಾಣ ಆಗಲಿಲ್ಲ. ಕೇವಲ ಸರ್ಕಾರ ನಡೆಸಲಿಕ್ಕಷ್ಟೇ ತೃಪ್ತಿಪಟ್ಟುಕೊಂಡು ಕೂತರು. ಇದು ಸರಿಯಾಗಲಿಲ್ಲ ಎಂದು ಕಿರಿಕಾಡಿದರು.
ಲೋಕಚುನಾವಣೆಗೆ ನನ್ನ ಅಧ್ಯಕ್ಷತೆಯಲ್ಲೇ ಪ್ರಣಾಳಿಕೆ ಸಹ ಸಿದ್ದಪಡಿಸಿದ್ದೇವು. ಆದರೆ ದೋಸ್ತಿ ಸರ್ಕಾರ ಅದನ್ನು ಪ್ರಿಂಟ್ ಸಹ ಮಾಡಲಿಲ್ಲ. ಅದು ಜನರಿಗೆ ಹಂಚಿಕೆ ಮಾಡಬೇಕಿತ್ತು. ಅದನ್ನು ಸಹ ಮಾಡಲಿಲ್ಲ. ಇದರಿಂದ ಜನರ ಮನಸ್ಸಿನಲ್ಲೂ ಸಹ ದೋಸ್ತಿ ಸರ್ಕಾರ ಎಂದು ಬರುವಂತೆ ಮಾಡಲಾಗಲಿಲ್ಲ. ಲೋಕಸಭಾ ಚುನಾವಣೆಗೆ ಹಠಾತ್ ಆಗಿ ಸಮನ್ವಯತೆ ಇಲ್ಲದೆ ಮಾಡಿದ್ದೇವೆ. ಆದರಿಂದ ಜಯ ಸಿಗಲಿಲ್ಲ. ನಿಗಮ ಮಂಡಳಿ, ಸಚಿವ ಸ್ಥಾನ ಹಂಚಿಕೆ ಸಮರ್ಪಕವಾಗಿ ಆಗಬೇಕು. ಅಧಿಕಾರ ಎಲ್ಲರಿಗೂ ಹಂಚಿಕೆಯಾಗಬೇಕು ಎಂದರು.
ಸಚಿವ ಸ್ಥಾನ ಹಂಚಿಕೊಂಡರಷ್ಟೇ ಸಾಲದು. ತಳ ಮಟ್ಟದಲ್ಲೂ ಸಹ ಅಧಿಕಾರದ ಹಂಚಿಕೆ ಆಗಬೇಕು. ಜಿಲ್ಲಾ ಮಟ್ಟದಲ್ಲಿ ಸಮನ್ವಯ ಸಮಿತಿ ರಚನೆ ಆಗಬೇಕಿತ್ತು. ಅದು ಯಾವುದು ಆಗದ ಕಾರಣ ಸಮನ್ವಯತೆಯ ಕೊರತೆಯೇ ಸೋಲಿಗೆ ಕಾರಣ ಆಯಿತು ಎಂದು ವೀರಪ್ಪ ಮೊಯ್ಲಿ ವಿಮರ್ಶಿಸಿದರು. ಈ ಎಲ್ಲಾ ಕಾರಣಗಳಿಂದ ಮೈತ್ರಿ ವಿಫಲವಾಗಿ ಸೋಲುವಂತಾಯಿತು ಎಂದು ವೀರಪ್ಪ ಮೊಯ್ಲಿ ಅಸಮಾಧಾನ ಹೊರಹಾಕಿದರು.