ಬೆಂಗಳೂರು: ರೈತರ ಸಾಲಮನ್ನಾ ಸದ್ಯಕ್ಕೆ ಕಷ್ಟವಾಗಿದ್ದು, ಸಾಲ ನವೀಕರಣ ಮಾಡಿಲ್ಲದಿದ್ದರೆ ಹೊಸ ಸಾಲ ಇಲ್ಲ ಎಂದು ಸಾಲ ಮನ್ನಾದ ಖುಷಿಯಲ್ಲಿದ್ದ ರೈತರಿಗೆ ಸಮ್ಮಿಶ್ರ ಸರ್ಕಾರ ಶಾಕ್ ನೀಡಿದೆ.
ಸದ್ಯಕ್ಕೆ ಸಾಲಮನ್ನಾ ಘೋಷಿಸಿದ್ದರೂ ಅದು ವಿಳಂಬವಾಗಲಿದೆ, ರೈತರ ಸಾಲಮನ್ನಾ ಆಗಲು ಕನಿಷ್ಠ 3 ತಿಂಗಳು ಬೇಕೇ ಬೇಕು. ಸಾಲಮನ್ನಾ ಪ್ರಕ್ರಿಯೆ ಆರಂಭ ಆಗೋದಕ್ಕೆ ಇನ್ನೂ ಒಂದು ತಿಂಗಳು ಬೇಕು. ಬ್ಯಾಂಕ್ ಗಳ ಜೊತೆ ಇನ್ನೂ ಸರ್ಕಾರ ಒಪ್ಪಂದ ಮಾಡಿಕೊಂಡಿಯೇ ಇಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ಇನ್ನೂ ಸಾಲಮನ್ನಾದ ವಿವರಗಳನ್ನು ಬ್ಯಾಂಕಿನಿಂದ ಸರ್ಕಾರ ಪಡೆಯಬೇಕು. ಬ್ಯಾಂಕ್ ಗಳ ದಾಖಲಾತಿ ಕಂಪ್ಯೂಟರ್ ಗೆ ಅಪ್ಲೋಡ್ ಆಗಬೇಕು. ಅಂಕಿ ಅಂಶ ಪರಿಶೀಲನೆ ಬಳಿಕ ಅವುಗಳನ್ನು ವಿಶೇಷ ಘಟಕಕ್ಕೆ ರವಾನಿಸಬೇಕು. ಇನ್ನು ಆಧಾರ್ ಸಂಖ್ಯೆ, ರೈತರ ಜಮೀನಿನ ದಾಖಲೆಗಳನ್ನು ಪರಿಶೀಲಿಸಬೇಕು. ಖಾತೆಗಳಲ್ಲಿ ಭಿನ್ನತೆ ಕಂಡುಬಂದರೆ ಅದು ತಿರಸ್ಕೃತ ಆಗಲಿದೆ. ನಿಖರ ಖಾತೆ ಹೊಂದಿರುವವರಿಗೆ ಮಾತ್ರ ಸಾಲಮನ್ನಾ ಆಗಲಿದೆ.
ಇದೇ ವೇಳೆ ಹಳೆ ಸಾಲ ಮನ್ನಾ ಆಗುವವರೆಗೂ ಹೊಸ ಸಾಲ ಸಿಕ್ಕಲ್ಲ. ಜೊತೆಗೆ ಹಳೆ ಸಾಲದ ಋಣಮುಕ್ತ ಪತ್ರ ಬ್ಯಾಂಕಿಂದ ಸಿಗಬೇಕು. ಸಾಲಮನ್ನಾ ಪ್ರಕ್ರಿಯೆ ವಿಳಂಬದಿಂದ ಹೊಸ ಸಾಲ ಕೂಡ ಅನುಮಾನ. ಹೊಸ ಸಾಲ ಪಡೆಯಲು ಕನಿಷ್ಠ 4-5 ತಿಂಗಳಾದರೂ ಬೇಕು ಎನ್ನಲಾಗುತ್ತಿದೆ. ಇದರಿಂದ ಸಂಪೂರ್ಣ ಸಾಲಮನ್ನಾದ ನಿರೀಕ್ಷೆಯಲ್ಲಿದ್ದ ರೈತರಿಗೆ ಆಘಾತವಾಗಿದೆ.