ಬೆಳಗಾವಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜಾರಿಗೆ ತಂದ ಯೋಜನೆಗಳನ್ನು ಸಿಎಂ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಕೈ ಬಿಟ್ಟಿದೆಯಾ ಎನ್ನುವ ಪ್ರಶ್ನೆ ಹುಟ್ಟುಕೊಂಡಿದೆ.
ಸಿದ್ದರಾಮಯ್ಯ ಅಲ್ಪಸಂಖ್ಯಾತರ ಓಲೈಕೆಗೆ ಜಾರಿಗೆ ತಂದಿದ್ದ ಶಾದಿ ಭಾಗ್ಯಕ್ಕೆ ಸಮ್ಮಿಶ್ರ ಸರ್ಕಾರದಿಂದ ಸ್ಪಂದನೆ ಸಿಗುತ್ತಿಲ್ಲ. ಸರ್ಕಾರ ಧನ ಸಹಾಯ ಮಾಡುತ್ತದೆ ಎಂದು ಸಾಲಸೋಲ ಮಾಡಿ ಮದುವೆ ಮಾಡಿಕೊಂಡ ಬಡ ಕುಟುಂಬಗಳು ಈಗ ಹಿಡಿಶಾಪ ಹಾಕುತ್ತಿವೆ. ಶಾದಿ ಭಾಗ್ಯ ಯೋಜನೆ ಅಡಿಯಲ್ಲಿ ಮದುವೆಯಾದ ಸುಮಾರು 28,540 ಅರ್ಹ ಫಲಾನುಭವಿಗಳಿಗೆ ಇನ್ನೂ ಧನ ಸಹಾಯ ಸಿಕ್ಕಿಲ್ಲ.
ಅಲ್ಲದೆ ಶಾದಿಭಾಗ್ಯ ಯೋಜನೆಯ 142 ಕೋಟಿ ರೂ. ಹಣವನ್ನು ಸಮ್ಮಿಶ್ರ ಸರ್ಕಾರ ಬಾಕಿ ಉಳಿಸಿಕೊಂಡಿದೆ. ಈ ಯೋಜನೆಗೆ ಅತಿ ಹೆಚ್ಚು ಅರ್ಜಿಗಳು ಧಾರವಾಡ ಹಾಗೂ ಹಾವೇರಿ ಜಿಲ್ಲೆಯಿಂದ ಬಂದಿದೆ. ಧಾರವಾಡದಲ್ಲಿ ಸುಮಾರು 2,440 ಅರ್ಜಿಗಳು ಹಾಗೂ ಹಾವೇರಿಯಲ್ಲಿ 2,342 ಅರ್ಜಿಗಳಿಗೆ ಹಣ ನೀಡುವುದು ಬಾಕಿ ಉಳಿದಿವೆ. ಚಾಮರಾಜನಗರ ಅತಿ ಕಡಿಮೆ ಅರ್ಜಿ ಎಂದರೆ 249 ಅರ್ಜಿ ಬಾಕಿ ಉಳಿದಿದೆ. ಆರ್ಥಿಕ ಸಂಕಷ್ಟ ಎದುರಿಸುತ್ತಾ ಸರ್ಕಾರದ ಹಣ ನಂಬಿ ಮದುವೆಯಾದ ಬಡ ಕುಟುಂಬಗಳಿಗೆ ಇಲ್ಲಿಯವರೆಗೂ ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡಿಲ್ಲ.
ಬೆಳಗಾವಿಯಲ್ಲಿ ಈ ಬಗ್ಗೆ ದಾಖಲೆ ಬಿಡುಗಡೆ ಮಾಡಿದ ಆರ್.ಟಿ.ಐ ಕಾರ್ಯಕರ್ತ ಭೀಮಪ್ಪ ಗಡಾದ ಅವರು ಸಮ್ಮಿಶ್ರ ಸರ್ಕಾರದ ಮಲತಾಯಿ ಧೋರಣೆ ಮಾಹಿತಿ ಹಕ್ಕಿನಲ್ಲಿ ಈ ವಿಷಯವನ್ನು ಬಹಿರಂಗ ಮಾಡಿದ್ದಾರೆ.