ಬೆಂಗಳೂರು: ಇಡೀ ದೇಶವೇ ಕಾಯುತ್ತಿದ್ದ ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಮೊತ್ತೊಮ್ಮೆ ಮೋದಿ ಸರ್ಕಾರ ಅಧಿಕಾರಕ್ಕೆ ಬರುತ್ತಿದೆ. ಇದರ ನಡುವೆ ದೋಸ್ತಿ ಕಾಂಗ್ರೆಸ್-ಜೆಡಿಎಸ್ ಸರ್ಕಾರದ ಸಂಖ್ಯಾಬಲ ಕುಸಿದಿದೆ.
ಲೋಕಸಭಾ ಚುನಾಚಣೆಯಲ್ಲಿ ಬಿಜೆಪಿ ಪಕ್ಷ ತನ್ನ ಬಲವನ್ನು ಹೆಚ್ಚಿಸಿಕೊಂಡಿದೆ. ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 80 ಸ್ಥಾನವನ್ನು ಗೆದ್ದಿತ್ತು. ಆದರೆ ಈಗ ಲೋಕಸಭಾ ಚುನಾವಣೆಯಲ್ಲಿ 80ರಿಂದ 79ಕ್ಕೆ ಕುಸಿದಿದೆ. ಈ ಮೂಲಕ ಸಮ್ಮಿಶ್ರ ಸರ್ಕಾರದ ಬಹುಮತ 117ಕ್ಕೆ ಕುಸಿತವಾಗಿದೆ.
ಬಹುಮತಕ್ಕೂ ಸಮ್ಮಿಶ್ರ ಸರ್ಕಾರದ ಬಲಾಬಲಕ್ಕೂ ಕೇವಲ 5 ಸೀಟುಗಳ ಅಂತರ ಮಾತ್ರ ಇದೆ. ಹಾಗಾಗಿ ಬಿಜೆಪಿ ಈಗಾಗಲೇ ನಮ್ಮಲ್ಲಿ 20 ಶಾಸಕರಿದ್ದಾರೆ ಎಂದು ಹೇಳುತ್ತಿದೆ. ಒಂದು ವೇಳೆ ಆಪರೇಷನ್ ಮೂಲಕ ಐವರು ಶಾಸಕರ ಕೈಯಲ್ಲಿ ರಾಜೀನಾಮೆ ಕೊಡಿಸಿದರೆ ಸಮ್ಮಿಶ್ರ ಸರ್ಕಾರ ಬಹುಮತ ಕಳೆದುಕೊಳ್ಳುವ ಸಾಧ್ಯತೆ ಇದೆ. ಇದರಿಂದ ದೋಸ್ತಿಗಳಲ್ಲಿ ಆತಂಕ ಶುರುವಾಗಿದೆ.
ಒಂದು ವೇಳೆ ದೋಸ್ತಿ ಸರ್ಕಾರದಲ್ಲಿ ಬಹುಮತ ಕುಸಿದರೆ, ಬಿಜೆಪಿ ತಕ್ಷಣ ರಾಜ್ಯಪಾಲರನ್ನು ಭೇಟಿಯಾಗಿ ಈ ಸರ್ಕಾರಕ್ಕೆ ಬಹುಮತವಿಲ್ಲ, ಅಲ್ಪಮತದಿಂದ ಸರ್ಕಾರ ನಡೆಸುತ್ತಿದೆ. ಹೀಗಾಗಿ ತುರ್ತಾಗಿ ವಿಶ್ವಾಸ ಮತಯಾಚನೆ ಮಾಡುವಂತೆ ಒತ್ತಾಯ ಏರುವ ಸಾಧ್ಯತೆಯೂ ದಟ್ಟವಾಗಿದೆ.