ಹುಬ್ಬಳ್ಳಿ: ರಾಜ್ಯ ಮೈತ್ರಿ ಸರ್ಕಾರ ಅನೈತಿಕ ಸಂಬಂಧದಿಂದ ಹುಟ್ಟಿರುವ ಅಸಹಜ ಶಿಶು, ಆಂತರಿಕ ಕಚ್ಚಾಟದಿಂದ ರಾಜ್ಯ ಮೈತ್ರಿ ಸರ್ಕಾರ ಪತನವಾಗುತ್ತೆ ಎಂದು ಎಂದು ಸಂಸದ ಪ್ರಹ್ಲಾದ್ ಜೋಶಿ ಭವಿಷ್ಯ ನುಡಿದಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚುನಾವಣೋತ್ತರ ಸಮೀಕ್ಷೆಗಳು ಎನ್‍ಡಿಎ ಪರವಾಗಿ ಬಂದಿವೆ, ಹೀಗಾಗಿ ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರ ಮತ್ತೊಮ್ಮೆ ಆಡಳಿತಕ್ಕೆ ಬರುವುದು ಖಚಿತ ವಿಶ್ವಾಸ ವ್ಯಕ್ತಪಡಿಸಿದರು.
ನಮ್ಮ ಸಮೀಕ್ಷೆಗಳ ಪ್ರಕಾರವೂ ರಾಜ್ಯದಲ್ಲಿ 20 ಮತ್ತು ದೇಶದಲ್ಲಿ 280ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುತ್ತೇವೆ. ಈ ಬಾರಿ ಆಡಳಿತದ ಪರವಾದ ಅಲೆ ಕೆಲಸ ಮಾಡಿದೆ. ಆಡಳಿತ ಪರ, ಅಭಿವೃದ್ಧಿ ಪರ ಜನರು ಬೆಂಬಲ ವ್ಯಕ್ತಪಡಿಸಿದ್ದಾರೆ. ಪ್ರಧಾನಿಗಳು ಜಾರಿಗೆ ತಂದಿರುವ ಯೋಜನೆಗಳು ಮುಂದುವರಿಯುತ್ತವೆ. ಇನ್ನು ಹೊಸ ಯೋಜನೆಗಳು ಜಾರಿಗೆ ತರುತ್ತಾರೆ ಎಂದರು.
ರಾಜ್ಯದ ಮೈತ್ರಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ರಾಜ್ಯ ಉಪಚುನಾವಣೆಯಲ್ಲಿ ಬಿಜೆಪಿಯೇ ಗೆಲುವು ಪಡೆಯುವುದು ಖಚಿತ. ಸಂಖ್ಯಾಬಲ ಹೆಚ್ಚಿಸಿಕೊಂಡು ರಾಜ್ಯದಲ್ಲಿಯೂ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಜನಾದೇಶ ಬಿಜೆಪಿ ಪರ ಇದ್ದು, ಕಳೆದ 1 ವರ್ಷದಿಂದ ಸರ್ಕಾರ ಯಾವುದೇ ಕೆಲಸ ಮಾಡಿಲ್ಲ. ಮೈತ್ರಿ ಕೇವಲ ಅನೈತಿಕ ಅಷ್ಟೇ ಅಲ್ಲ, ಅದು ಅಸಹಜವಾಗಿರುವ ಶಿಶು. ಅಸಹಜ ಆಗಿರುವುದರಿಂದಲೇ ಅದ್ದರಿಂದ ಯಾವುದೇ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂದರು.