ರಾಯಚೂರು: ಈ ಬಾರಿ ಬೆಳಕಿನ ಹಬ್ಬ ದೀಪಾವಳಿಗೆ ರಾಜ್ಯದ ಜನತೆಗೆ ಕತ್ತಲು ಆವರಿಸುವ ಸಾಧ್ಯತೆ ದಟ್ಟವಾಗಿದೆ. ಕಲ್ಲಿದ್ದಲಿನ ಕೊರತೆಯಿಂದ ರಾಜ್ಯದ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳು ವಿದ್ಯುತ್ ಉತ್ಪಾದನೆಯನ್ನೇ ನಿಲ್ಲಿಸುತ್ತಿವೆ. ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರ(ಆರ್‌ಟಿಪಿಎಸ್), ಯರಮರಸ್ ಸೂಪರ್ ಕ್ರಿಟಿಕಲ್ ಶಾಖೋತ್ಪನ್ನ ವಿದ್ಯುತ್ ಕೇಂದ್ರ(ವೈಟಿಪಿಎಸ್) ಸೇರಿದಂತೆ ಎಲ್ಲಾ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳು ಈಗಾಗಲೇ ಹಂತ ಹಂತವಾಗಿ ಉತ್ಪಾದನೆ ಕಡಿಮೆ ಮಾಡುತ್ತಿದೆ.
ರಾಜ್ಯಕ್ಕೆ ಶೇ.40ರಷ್ಟು ವಿದ್ಯುತ್ ನೀಡುವ ಆರ್‌ಟಿಪಿಎಸ್ ಎಂಟು ಘಟಕಗಳಲ್ಲಿ ಆರು ಘಟಕಗಳು ಈಗಾಗಲೇ ಬಂದ್ ಆಗಿವೆ. ಸದ್ಯ 1 ಮತ್ತು 5ನೇ ಘಟಕಗಳು ಮಾತ್ರ ಕಾರ್ಯನಿರ್ವಹಿಸುತ್ತಿದೆ. 1720 ಮೆಗಾ ವ್ಯಾಟ್ ಸಾಮರ್ಥ್ಯದ ವಿದ್ಯುತ್ ಕೇಂದ್ರ ಕೇವಲ 305 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸುತ್ತಿದೆ. ಇನ್ನು 800 ಮೆಗಾವ್ಯಾಟ್ ಸಾಮರ್ಥ್ಯದ ವೈಟಿಪಿಎಸ್ ಕೇವಲ 303 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸುತ್ತಿದೆ. 1700 ಮೆಗಾ ವ್ಯಾಟ್ ಸಾಮರ್ಥ್ಯದ ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಕೇಂದ್ರ(ಬಿಟಿಪಿಎಸ್) ಸಂಪೂರ್ಣ ಸ್ಥಗಿತವಾಗಿದೆ.
Advertisement
Advertisement
ಕೊರತೆಯಾಗಿದ್ದು ಯಾಕೆ?
ತಿತ್ಲಿ ಚಂಡಮಾರುತದಿಂದಾಗಿ ಮಹಾರಾಷ್ಟ್ರದ ವೆಸ್ಟರ್ನ್ ಕೋಲ್ಡ್ ಫೀಲ್ಡ್ ಹಾಗೂ ಒಡಿಶಾದ ಮಹಾನದಿ ಕೋಲ್ ಫೀಲ್ಡ್ಸ್ ಗಣಿ ಕಂಪನಿಗಳಿಂದ ಕಲ್ಲಿದ್ದಲು ಸರಬರಾಜು ಸಂಪೂರ್ಣ ನಿಂತಿದೆ. ಸದ್ಯ ತೆಲಂಗಾಣದ ಸಿಂಗರೇಣಿ ಗಣಿ ಕಂಪನಿ ಮಾತ್ರ ಕಲ್ಲಿದ್ದಲು ಸರಬರಾಜು ಮಾಡುತ್ತಿದೆ. ಆದರೆ ಆರ್‍ಟಿಪಿಎಸ್‍ಗೆ ನಿತ್ಯ 25 ಸಾವಿರ ಮೆಟ್ರಿಕ್ ಟನ್‍ನಷ್ಟು ಕಲ್ಲಿದ್ದಲು ಬೇಕಿದ್ದು, ಅಗತ್ಯ ಪ್ರಮಾಣದ ಕಲ್ಲಿದ್ದಲು ಸರಬರಾಜು ಆಗುತ್ತಿಲ್ಲ.
Advertisement
ರಾಜ್ಯದ ಎಲ್ಲಾ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳಲ್ಲೂ ಕಲ್ಲಿದ್ದಲು ದಾಸ್ತಾನು ಖಾಲಿಯಾಗಿದೆ. ಕಲ್ಲಿದ್ದಲು ಕೊರತೆಯಿಂದಾಗಿ ಜಲ, ಪವನ ವಿದ್ಯುತ್ ಸ್ಥಾವರಗಳ ಮೇಲೆ ಹೆಚ್ಚು ಒತ್ತಡ ಬಿದ್ದಿದೆ. ಇದೇ ಪರಿಸ್ಥಿತಿ ಮುಂದುವರಿದರೆ ರಾಜ್ಯದಲ್ಲಿ ಭೀಕರ ವಿದ್ಯುತ್ ಸಮಸ್ಯೆ ಎದುರಾಗುವುದು ನಿಶ್ಚಿತ. ಕೇಂದ್ರ ಸರ್ಕಾರ ಕಲ್ಲಿದ್ದಲು ಪೂರೈಕೆ ಮಾಡಬೇಕಿದೆ. ಆದ್ರೆ ಈ ವಿಚಾರದಲ್ಲಿ ಕೇಂದ್ರ ರಾಜಕೀಯ ಮಾಡ್ತಿದೆ ಅನ್ನೋದು ಸಿಎಂ ಆರೋಪ. ಒಟ್ಟಿನಲ್ಲಿ ರಾಜಕೀಯ ದ್ವೇಷ ಮರೆತು ಕೇಂದ್ರ ಕಲ್ಲಿದ್ದಲು ಪೂರೈಕೆ ಮಾಡಬೇಕಿದೆ.