ನವದೆಹಲಿ/ಬೆಂಗಳೂರು: `ಕಪ್ಪು ಚಿನ್ನ’ ಅಂತಲೇ ಹೆಸರಾಗಿರುವ ಕಲ್ಲಿದ್ದಲು ಕೊರತೆಯಿಂದಾಗಿ ದೇಶದಲ್ಲಿ ಕಗ್ಗತ್ತಲ ಕಾರ್ಮೋಡ ಆವರಿಸುವ ಆತಂಕ ಹೆಚ್ಚಾಗ್ತಿದೆ.
ದೇಶದಲ್ಲಿ 135 ಉಷ್ಣ ವಿದ್ಯುತ್ ಸ್ಥಾವರಗಳಿದ್ದು, ಶೇ.70ರಷ್ಟು ವಿದ್ಯುತ್ ಶಾಖೋತ್ಪನ್ನ ಕೇಂದ್ರಗಳಲ್ಲೇ ಉತ್ಪಾದನೆ ಆಗುತ್ತದೆ. ಆದರೆ ಈಗ ಕರ್ನಾಟಕ, ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ, ದೆಹಲಿ, ಪಂಜಾಬ್, ಮಧ್ಯಪ್ರದೇಶ, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ತಮಿಳುನಾಡು, ಆಂಧ್ರ ಪ್ರದೇಶ ರಾಜ್ಯಗಳ ಶಾಖೋತ್ಪನ್ನ ಕೇಂದ್ರಗಳಲ್ಲಿ ಸಮಸ್ಯೆ ಆಗುತ್ತಿದೆ.
Advertisement
Advertisement
ಕಲ್ಲಿದ್ದಲು ಖಾತೆ ಸಚಿವ ಪ್ರಹ್ಲಾದ್ ಜೋಷಿ ಅವರು ಭಾನುವಾರ ಉನ್ನತ ಮಟ್ಟದ ಸಭೆ ನಡೆಸಿದರು. ದೇಶದಲ್ಲಿ ಸದ್ಯ 43 ದಶಲಕ್ಷ ಮೆಟ್ರಿಕ್ ಟನ್ ಕಲ್ಲಿದ್ದಲು ದಾಸ್ತಾನಿದೆ. ಇದು 24 ದಿನಗಳಿಗೆ ಆಗುತ್ತೆ. ಹಾಗಾಗಿ, ಸದ್ಯಕ್ಕೆ ಆತಂಕ ಇಲ್ಲ ಅಂತ ಎಂದಿದ್ದರು. ಇವತ್ತು ಗೃಹ ಸಚಿವ ಅಮಿತ್ ಶಾ ಜೊತೆ ಸಭೆ ನಡೆಸಿದ್ದಾರೆ. ಇದನ್ನೂ ಓದಿ: ವಿದ್ಯುತ್‌ಗೆ ಸಮಸ್ಯೆ ಆಗಲ್ಲ, ದೇಶದಲ್ಲಿ ಕಲ್ಲಿದ್ದಲು ದಾಸ್ತಾನಿದೆ- ಪ್ರಹ್ಲಾದ್ ಜೋಷಿ ಸ್ಪಷ್ಟನೆ
Advertisement
ಲಾಕ್‍ಡೌನ್ ತೆರವು ಬಳಿಕ ದಿಢೀರ್ ವಿದ್ಯುತ್ ಬಳಕೆ ಹೆಚ್ಚಳ, ಮುಂಗಾರು ಮಳೆಯಿಂದಾಗಿ ಕಲ್ಲಿದ್ದಲು ಗಣಿಗಳಲ್ಲಿ ಉತ್ಪಾದನೆ ಕಡಿಮೆ ಆಗಿರುವುದು ಸ್ವಲ್ಪ ಸವಾಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಇತ್ತ, ರಾಜ್ಯಕ್ಕೆ ವಿದ್ಯುತ್ ಕ್ಷಾಮ ಎದುರಾಗುವ ಸಾಧ್ಯತೆಗಳು ದಟ್ಟವಾಗಿವೆ. 3 ಶಾಖೋತ್ಪನ್ನ ಸ್ಥಾವರಗಳಲ್ಲಿ ಒಂದೊಂದೇ ಘಟಕಗಳು ಬಂದ್ ಆಗುತ್ತಿವೆ.
Advertisement
ಆರ್‌ಟಿಪಿಎಸ್:
ರಾಯಚೂರಿನ ಶಕ್ತಿನಗರದಲ್ಲಿ ಇರುವ ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರ(ಆರ್‌ಟಿಪಿಎಸ್) 8 ಘಟಕಗಳಿವೆ. ಈ ಪೈಕಿ 4 ಕಲ್ಲಿದ್ದಲು ಕೊರತೆ ಮತ್ತು 1 ತಾಂತ್ರಿಕ ಸಮಸ್ಯೆಯಿಂದ ಸ್ಥಗಿತಗೊಂಡಿದೆ. 1720 ಮೆಗಾ ವ್ಯಾಟ್ ಸಾಮರ್ಥ್ಯದ ಸ್ಥಾವರದಲ್ಲಿ ಈಗ ಕೇವಲ 472 ಮೆಗಾ ವ್ಯಾಟ್ ಉತ್ಪಾದನೆಯಾಗುತ್ತಿದೆ. ಸದ್ಯ 12,010 ಮೆಟ್ರಿಕ್ ಟನ್ ಕಲ್ಲಿದ್ದಲು ಸಂಗ್ರಹವಿದ್ದು 3 ಘಟಕಗಳಿಗೆ ಇದು ಒಂದು ದಿನಕ್ಕೆ ಸಾಕಾಗುತ್ತೆ. ಸಿಂಗರೇಣಿ, ಮಹಾನದಿ, ವೆಸ್ಟರ್ನ್ ಕೋಲ್ ಗಣಿಯಿಂದ ದಿನಕ್ಕೆ 8-9 ರೇಕು ಕಲ್ಲಿದ್ದಲು ಬರುತ್ತಿತ್ತು. ಈಗ ಕೇವಲ 3-4 ರೇಕು ಕಲ್ಲಿದ್ದಲು ಬರುತ್ತಿದೆ
ವೈಟಿಪಿಎಸ್ :
ರಾಯಚೂರಿನ ಯರಮರಸ್ ಶಾಖೋತ್ಪನ್ನ ವಿದ್ಯುತ್ ಕೇಂದ್ರದ(ವೈಟಿಪಿಎಸ್) 2 ಘಟಕಗಳಲ್ಲಿ 1 ಬಂದ್ ಆಗಿದೆ. 25 ಸಾವಿರ ಮೆಟ್ರಿಕ್ ಟನ್ ಕಲ್ಲಿದ್ದಲು ಸಂಗ್ರಹವಿದ್ದು ಇದು 2 ದಿನಕ್ಕೆ ಮಾತ್ರ ಸಾಕಾಗುತ್ತದೆ.
ಬಿಟಿಪಿಎಸ್:
ಕುಡುತಿನಿ ಬಳಿ ಇರುವ ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಕೇಂದ್ರದ(ಬಿಟಿಪಿಎಸ್) 3 ಘಟಕಗಳ ಪೈಕಿ 2 ಬಂದ್ ಆಗಿದೆ. 1700 ಮೆಗಾ ವ್ಯಾಟ್ ಉತ್ಪಾದನಾ ಸಾಮರ್ಥ್ಯ ಇರುವ ಈ ಘಟಕದಲ್ಲಿ ಈಗ 500 ಮೆಗಾ ವ್ಯಾಟ್ ಉತ್ಪಾದನೆ ಆಗುತ್ತಿದೆ. ನಿತ್ಯ 25 ಸಾವಿರ ಟನ್ ಕಲ್ಲಿದ್ದಲು ಅಗತ್ಯವಿದ್ದು, ಸದ್ಯ 15 ಸಾವಿರ ಟನ್ ದಾಸ್ತಾನು ಇದೆ. ಇದು ನಾಳೆಗೆ ಸಂಪೂರ್ಣ ಖಾಲಿಯಾಗಬಹುದು.