ರಾಂಚಿ: ಅಕ್ರಮ ಕಲ್ಲಿದ್ದಲು ಗಣಿ ಕುಸಿದಿರುವ ಪರಿಣಾಮ 13 ಮಂದಿ ಸಾವನ್ನಪ್ಪಿ ಹಲವರು ಅವಶೇಷಗಳಡಿ ಸಿಲುಕಿರುವ ಘಟನೆ ಜಾರ್ಖಂಡ್‌ನಲ್ಲಿ ನಡೆದಿದೆ.
ಜಾರ್ಖಂಡ್ ರಾಜ್ಯದ ಧನ್‌ಬಾದ್‌ನ ನಿರ್ಸಾ ಬ್ಲಾಕ್‌ನ ಇಸಿಎಲ್ ಮುಗ್ಮಾ ಪ್ರದೇಶದಲ್ಲಿರುವ ಅಕ್ರಮ ಗಣಿಯಲ್ಲಿ ಈ ಘಟನೆ ನಡೆದಿದೆ. ಗಣಿಗಾರಿಕೆಗೆ ಬಳಸುತ್ತಿದ್ದ ಉಪಕರಣ 20 ಅಡಿ ಎತ್ತರದಿಂದ ಬಿದ್ದ ಪರಿಣಾಮ ಕೊರೆದಿದ್ದ ಗಣಿ ಕುಸಿದಿದೆ. ಇದರಿಂದ ಅವಶೇಷಗಳಡಿ ಸಿಲುಕಿದ 13 ಮಂದಿ ಸಾವನ್ನಪ್ಪಿದ್ದಾರೆ. ಇನ್ನೂ 10 ಕ್ಕೂ ಹೆಚ್ಚು ಮಂದಿ ಸಿಲುಕಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.
ಘಟನೆ ನಡೆದ ತಕ್ಷಣ ಕೆಲವರನ್ನು ರಕ್ಷಿಸಲಾಗಿದ್ದು, ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ. ಅವಶೇಷಗಳಡಿ ಸಿಕ್ಕಿಬಿದ್ದಿರುವವರನ್ನು ರಕ್ಷಣಾ ಪಡೆಗಳು ಹೊರತೆಗೆಯಲು ಪ್ರಯತ್ನ ಪಡುತ್ತಿದ್ದಾರೆ. ಇದನ್ನೂ ಓದಿ: ಬಿಜೆಪಿ ಶಾಸಕ ನಿತೇಶ್ ರಾಣೆಗೆ ಜಾಮೀನು ನಿರಾಕರಿಸಿದ ಕೋರ್ಟ್
ಅಕ್ರಮ ಗಣಿಯಲ್ಲಿ ಕೆಲಸ ಮಾಡಲು ಪ್ರತೀ ದಿನ ಹಲವು ಮಹಿಳೆಯರು, ಪರುಷರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಬರುತ್ತಿದ್ದರು ಎಂದು ತಿಳಿದುಬಂದಿದೆ. ಧನ್‌ಬಾದ್‌ನ ನಿರ್ಸಾ ಪೊಲೀಸರು ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿ, ಹೂತು ಹೋದವರನ್ನು ರಕ್ಷಿಸಲು ಜೆಸಿಬಿ ನಿಯೋಜಿಸಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳೀಯರು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಇದನ್ನೂ ಓದಿ: Budget 2022 : ಮೋದಿ ಸೂಚನೆಯಂತೆ ಜನರಿಂದ ಹೆಚ್ಚುವರಿ ತೆರಿಗೆ ಸಂಗ್ರಹ ಇಲ್ಲ
ಘಟನೆಯ ಬಗ್ಗೆ ಸ್ಥಳೀಯರು ದೂರು ನೀಡಲು ಮುಂದಾಗಿಲ್ಲವಾದರೂ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.