ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯವರು ಎಲ್ಲಿಯೂ ಹೋಗುವುದಿಲ್ಲ, ಅವರು ತಂಡದಲ್ಲಿಯೇ ಇರುತ್ತಾರೆ ಎಂದು ಭಾರತ ಕ್ರಿಕೆಟ್ ತಂಡದ ತರಬೇತುದಾರ ರವಿಶಾಸ್ತ್ರೀಯವರು ಸ್ಪಷ್ಟನೆ ನೀಡಿದ್ದಾರೆ.
ಧೋನಿ ನಿವೃತ್ತಿ ವದಂತಿ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಅವರು, ಧೋನಿಯವರು ಕೇವಲ ಬಾಲನ್ನು ಪರೀಕ್ಷೆಗೆ ಒಳಪಡಿಸುವುದಕ್ಕೋಸ್ಕರ ತೆಗೆದುಕೊಂಡಿದ್ದಾರೆ. ಧೋನಿಯವರು ಬಾಲ್ ತೆಗೆದುಕೊಂಡಿದ್ದಕ್ಕೆ ಅವರು ನಿವೃತ್ತಿ ಹೊಂದುತ್ತಾರೆ ಎನ್ನುವ ವಂದತಿ ಹಬ್ಬಿರುವುದು ದುರದೃಷ್ಟಕರ ಸಂಗತಿ. ಧೋನಿಯವರು ಎಲ್ಲಿಯೂ ಹೋಗಲ್ಲ, ಅವರು ಭಾರತ ಕ್ರಿಕೆಟ್ ತಂಡದಲ್ಲಿಯೇ ಇರುತ್ತಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಅಂತಿಮ ಪಂದ್ಯದಲ್ಲಿ ಭಾರತ ತಂಡ ಬೌಲಿಂಗ್ ಮಾಡುವಾಗ 45 ಓವರ್ ಗಳ ಬಳಿಕವು ಬಾಲ್ ವೇಗಿಗಳಿಗೆ ಕೈಕೊಟ್ಟಿತ್ತು. ಈ ಹಿನ್ನೆಲೆಯಲ್ಲಿ ಅನುಮಾನಗೊಂಡ ಧೋನಿ ಬಾಲನ್ನು ಪಡೆದು ತಂಡದ ಭಾರತ್ ಅರುಣ್ ಎಂಬ ಬಾಲ್ ತಜ್ಞರಿಗೆ ತೋರಿಸಿ, ಬಾಲ್ ನ ಸ್ಥಿತಿಗತಿಯ ಬಗ್ಗೆ ತಿಳಿದುಕೊಳ್ಳಲು ಅಂಪೈರ್ ನಿಂದ ಪಡೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಇಂಗ್ಲೆಂಡ್ ವಿರುದ್ಧದ ಕೊನೆಯ ಪಂದ್ಯದಲ್ಲಿ ವಿದಾಯದ ಮುನ್ಸೂಚನೆ ನೀಡಿದ್ರಾ ಧೋನಿ?
ಏನಿದು ವದಂತಿ?
ಇಂಗ್ಲೆಂಡಿನಲ್ಲಿ ನಡೆದ ಅಂತಿಮ ಪಂದ್ಯದ ವೇಳೆ ಧೋನಿಯವರು ಅಂಪೈರ್ ನಿಂದ ಬಾಲನ್ನು ಪಡೆದುಕೊಂಡ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು. ಅಲ್ಲದೇ ಜಾಲತಾಣಿಗರು ವಿಡಿಯೋವನ್ನು ನೋಡಿ ಧೋನಿಯವರು ನಿವೃತ್ತಿಗಾಗಿ ಬಾಲನ್ನು ಪಡೆದುಕೊಂಡಿದ್ದಾರೆ ಎಂದು ವದಂತಿ ಹರಿಬಿಟ್ಟಿದ್ದರು. ಧೋನಿಯವರು ಬಾಲ್ ಪಡೆದ ಬಗ್ಗೆ ಸಾಕಷ್ಟು ಉಹಾಪೋಹಗಳು ಕೇಳಿಬಂದಿದ್ದವು.