Bengaluru City
ನೂತನ ಸಚಿವರಿಗೆ ಸಿಎಂ ಯಡಿಯೂರಪ್ಪ ಖಡಕ್ ಸೂಚನೆ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಇಂದು ಸಂಪುಟ ವಿಸ್ತರಣೆ ನಡೆದ ನಂತರ ಔಪಚಾರಿಕ ಸಚಿವ ಸಂಪುಟ ಸಭೆ ನಡೆಸಿದ್ದಾರೆ. ಈ ವೇಳೆ ಅವರು ಪ್ರವಾಹ ಪೀಡಿತ ಜಿಲ್ಲೆಗಳಿಗೆ ಭೇಟಿ ನೀಡಿ ಪರಿಶೀಲನೆ ಕೈಗೊಳ್ಳುವಂತೆ ನೂತನ ಸಚಿವರಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಯಡಿಯೂರಪ್ಪ ಅವರು, ನಮ್ಮ ಸರ್ಕಾರದ ಮೊದಲ ಆದ್ಯತೆ ಪ್ರವಾಹ ಸಂತ್ರಸ್ತರ ನೋವಿಗೆ ಸ್ಪಂದಿಸುವುದು. ಎರಡು ದಿನ ಪ್ರವಾಹ ಪ್ರದೇಶಗಳಿಗೆ ಹೋಗಿ ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ಪರಿಶೀಲನಾ ಸಭೆ ನಡೆಸಬೇಕು. ಬಳಿಕ ಪ್ರವಾಹದಿಂದ ತೀವ್ರ ತೊಂದರೆಯಾಗಿರುವ ಗ್ರಾಮಗಳಿಗೆ ಭೇಟಿ ನೀಡಿ, ಸಂತ್ರಸ್ತರೊಂದಿಗೆ ಮಾತನಾಡಿ ಅದರ ವರದಿಯನ್ನು ಸಲ್ಲಿಸಬೇಕು ಎಂದು ನೂತನ ಸಚಿವರಿಗೆ ಸೂಚಿಸಿದ್ದಾರೆ.
ಕೆಲವು ದಿನಗಳಲ್ಲಿ ಜಿಲ್ಲಾ ಉಸ್ತುವಾರಿಯ ಹೊಣೆಗಾರಿಕೆ ಹಾಗೂ ಖಾತೆ ಹಂಚಿಕೆ ಬಗ್ಗೆ ನಿರ್ಧರಿಸುತ್ತೇನೆ. ಅಲ್ಲಿಯವರೆಗೂ ಪ್ರವಾಹದಿಂದ ಆಗಿರುವ ಸಮಸ್ಯೆಗಳ ಬಗ್ಗೆ ಅಧ್ಯಯನ ನಡೆಸಿ ವರದಿ ಸಿದ್ಧಪಡಿಸಿಕೊಳ್ಳಿ. ಮುಂದಿನ ಸಚಿವ ಸಂಪುಟ ಸಭೆಯೊಳಗೆ ಅನುಷ್ಠಾನ ಯೋಗ್ಯ ಕಾರ್ಯತಂತ್ರ ರೂಪಿಸಿ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ರಾಜ್ಯದ ಅಭಿವೃದ್ಧಿಯೆಡೆಗೆ ಮುನ್ನಡೆಸಲು ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಪ್ರವಾಹ ಪೀಡಿತ ಜಿಲ್ಲೆಗಳ ಉಸ್ತುವಾರಿ:
ಬೆಳಗಾವಿ- ಲಕ್ಷಣ ಸವದಿ, ಚಿಕ್ಕೋಡಿ(ಬೆಳಗಾವಿ)- ಶಶಿಕಲಾ ಜೊಲ್ಲೆ, ವಿಜಯಪುರ- ಗೋವಿಂದ ಕಾರಜೋಳ, ಬಳ್ಳಾರಿ- ಶ್ರೀರಾಮುಲು, ಬಾಗಲಕೋಟೆ- ಕೆ.ಎಸ್ ಈಶ್ವರಪ್ಪ, ಹಾವೇರಿ- ಬಸವರಾಜ ಬೊಮ್ಮಾಯಿ, ಗದಗ- ಸಿ. ಸಿ.ಪಾಟೀಲ್, ಯಾದಗಿರಿ – ಶ್ರೀರಾಮುಲು ಮತ್ತು ಪ್ರಭು ಚೌಹಾಣ್, ಧಾರವಾಡ- ಜಗದೀಶ ಶೆಟ್ಟರ್, ಚಿಕ್ಕಮಗಳೂರು- ಸಿ.ಟಿ ರವಿ, ಉಡುಪಿ- ಕೋಟ ಶ್ರೀನಿವಾಸ್ ಪೂಜಾರಿ, ಹಾಸನ- ಮಾಧುಸ್ವಾಮಿ, ಕೊಡಗು – ಎಸ್. ಸುರೇಶ್ ಕುಮಾರ್, ಮೈಸೂರು – ಆರ್. ಅಶೋಕ್, ಚಾಮರಾಜನಗರ- ವಿ.ಸೋಮಣ್ಣ
