ಬೆಂಗಳೂರು: ರಾಜ್ಯದಲ್ಲಿ 410 ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ವರದಿಯಾಗಿದೆ ಎಂದು ಸಿಎಂ ಬಿ.ಎಸ್ ಯಡಿಯೂರಪ್ಪ ಇಂದು ನಡೆದ ಕಾಂಗ್ರೆಸ್ ನಿಯೋಗದ ಸಭೆಯಲ್ಲಿ ಹೇಳಿದ್ದರು. ಇದಕ್ಕೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಪ್ರತಿಕ್ರಿಯೆ ನೀಡಿದ್ದು, ರಾಜ್ಯದಲ್ಲಿ ಇಲ್ಲಿಯವರೆಗೆ 401 ಕೊರೊನಾ ಸೋಂಕಿತ ಪ್ರಕರಣ ವರದಿಯಾಗಿದೆ ಎಂದು ಗೊಂದಲಕ್ಕೆ ಸ್ಪಷ್ಟನೆ ನೀಡಿದ್ದಾರೆ.
ಸಿಎಂಗೆ ಏನೋ ಗೊಂದಲ ಆಗಿರಬೇಕು ಅದಕ್ಕೆ ಆ ಸಂಖ್ಯೆ ಹೇಳಿದ್ದಾರೆ. ಸೋಂಕಿತರ ಸಂಖ್ಯೆಯಲ್ಲಿ ಬದಲಾವಣೆ ಆಗ್ತಿರುತ್ತೆ ಎಂದು ಸುಧಾಕರ್ ಸ್ಪಷ್ಟನೆ ನೀಡಿದರು. ಇದುವರೆಗೆ 401 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. 104 ಮಂದಿ ಗುಣಮುಖರಾಗಿದ್ದಾರೆ. ಇದುವರೆಗೆ 14 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದರು.
ಇಂದು ವರದಿಯಾದ 17 ಜನ ಸೋಂಕಿತರ ಸಂಪೂರ್ಣ ವಿವರ ಪಡೆದು ಹೇಳಲು ಸ್ವಲ್ಪ ವಿಳಂಬ ಆಗಲಿದೆ. 17 ಲ್ಯಾಬ್‍ಗಳಿವೆ, ಅಲ್ಲಿಂದ ವರದಿಗಳು ಬರುತ್ತಲೇ ಇರುತ್ತವೆ. ಹೀಗಾಗಿ ಸೋಂಕಿತರ ಸಂಖ್ಯೆಯಲ್ಲಿ ಬದಲಾವಣೆಗಳು ಆಗ್ತಿರುತ್ತವೆ. ಸಂಜೆವರೆಗೆ ಇಂದಿನ ಪ್ರಕರಣಗಳ ವರದಿ ಬರಲಿದ್ದು, ಆಗ ಸೋಂಕಿತರ ನಿಖರ ಸಂಖ್ಯೆ ಲಭ್ಯವಾಗಲಿದೆ ಎಂದು ಸಚಿವರು ಮಾಹಿತಿ ನೀಡಿದರು.
ಇಂದು ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಬಿಎಸ್‍ವೈರನ್ನು ಕಾಂಗ್ರೆಸ್ ನಿಯೋಗ ಭೇಟಿ ಮಾಡಿ ಸಭೆ ನಡೆಸಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಡಿಸಿಎಂ ಡಾ.ಜಿ ಪರಮೇಶ್ವರ್, ಮಾಜಿ ಸ್ಪೀಕರ್ ರಮೇಶ್ ಕುಮಾರ್, ಆರ್ ವಿ ದೇಶಪಾಂಡೆ, ದಿನೇಶ್ ಗುಂಡೂರಾವ್ ಸೇರಿದಂತೆ ಹಲವರು ಸಭೆಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಆಹಾರ ಮತ್ತು ರೇಷನ್ ಕಿಟ್‍ಗಳ ವಿತರಣೆ ವಿಚಾರದಲ್ಲಿ ಕಾಂಗ್ರೆಸ್ ಶಾಸಕರಿಗೆ ತಾರತಮ್ಯ ಹಾಗೂ ರಾಜ್ಯದ ಕೊರೊನಾ ವಸ್ತುಸ್ಥಿತಿಯ ಬಗ್ಗೆ ಕಾಂಗ್ರೆಸ್ ನಾಯಕರು ಸಿಎಂ ಜೊತೆ ಚರ್ಚೆ ನಡೆಸಿದರು.
ಇದೇ ವೇಳೆ ಕಾಂಗ್ರೆಸ್ ನಿಯೋಗ ಸಿಎಂಗೆ ಟಾಸ್ಕ್ ಫೋರ್ಸ್ ವರದಿ ನೀಡಿದೆ. ಕೊರೊನಾ ಸಂದರ್ಭದಲ್ಲಿ ಪರಿಸ್ಥಿತಿ ನಿಭಾಯಿಸುವ ಬಗ್ಗೆ, ಕಾರ್ಮಿಕರಿಗೆ, ಅಸಂಘಟಿತ ವಲಯಕ್ಕೆ ಹಣದ ನೆರವು ನೀಡುವ ಬಗ್ಗೆ ವರದಿಯಲ್ಲಿ ಶಿಫಾರಸ್ಸು ಮಾಡಲಾಗಿದೆ.