– ಪ್ರಧಾನಿ ಸೂಚನೆ ಬಳಿಕವಷ್ಟೇ ಲಾಕ್‍ಡೌನ್ ಸಡಿಲ
– ಆನೆಕಲ್ಲು ಮಳೆಯಿಂದ ಆದ ಹಾನಿಗೆ ಪರಿಹಾರ
– ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಬಿಡಿಎ ಕಾರ್ನರ್ ಸೈಟ್ ಮಾರಾಟ
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಸೂಚನೆ ಬಳಿಕವಷ್ಟೇ ಲಾಕ್‍ಡೌನ್ ಸಡಿಲಗೊಳಿಸಲಾಗುತ್ತದೆ. ಕೇಂದ್ರ ಸರ್ಕಾರದ ಮಾರ್ಗಸೂಚಿ ಬಂದ ಬಳಿಕ ಮದ್ಯ ಮಾರಾಟದ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಸಿಎಂ ಯಡಿಯೂರಪ್ಪ ಸುದ್ದಿಗೋಷ್ಠಿಯಲ್ಲಿ ಹೇಳಿಕೆ ನೀಡಿದ್ದಾರೆ.
ಪ್ರಧಾನಿಗಳು ಸಲಹೆಗಳನ್ನು ನೀಡುತ್ತೇವೆ ಎಂದಿದ್ದಾರೆ. ಕೆಲ ರಾಜ್ಯಗಳಿಗೆ ಲಾಕ್‍ಡೌನ್ ಬಗ್ಗೆ ಅಲ್ಲಿನ ಸರ್ಕಾರಗಳೇ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಸೂಚಿಸಿದ್ದಾರೆ ಎಂದು ಸಿಎಂ ತಿಳಿಸಿದರು. ಎಂಎಸ್‍ಐಎಲ್ ಮೂಲಕ ಮದ್ಯ ಮಾರಾಟದ ಬಗ್ಗೆ ಚರ್ಚೆ ನಡೆಯುತ್ತಿದೆ. ಕೇಂದ್ರ ಸರ್ಕಾದಿಂದ ಮಾರ್ಗಸೂಚಿ ಬಂದ ಬಳಿಕ ಕ್ರಮ ಕೈಗೊಳ್ಳಲಾಗುತ್ತೆ. ಕೇಂದ್ರ ಸರ್ಕಾರದಿಂದ ಇನ್ನು ಮಾರ್ಗಸೂಚಿ ಬಂದಿಲ್ಲ ಎಂದು ಹೇಳಿದರು.
ರಾಜ್ಯದ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಹೀಗಾಗಿ ಬಿಡಿಎ ವ್ಯಾಪ್ತಿಯ ಕಾರ್ನರ್ ಸೈಟ್‍ಗಳ ಹರಾಜು ಹಾಕಲು ತೀರ್ಮಾನಿಸಿದ್ದೇವೆ. ಬಿಡಿಎ ಕಾರ್ನರ್ ಸೈಟ್ ಮಾರಾಟದಿಂದ 15 ಸಾವಿರ ಕೋಟಿ ಆದಾಯ ಬರುವ ನಿರೀಕ್ಷೆ ಇದೆ. ಒಳ್ಳೆಯ ಬೆಲೆ ಬಂದ್ರೆ ಮಾತ್ರ ಮಾರಾಟ ಮಾಡುತ್ತೇವೆ ಎಂದು ಸಿಎಂ ಮಾಹಿತಿ ನೀಡಿದ್ದಾರೆ.
ಅಲ್ಲದೇ ಮುಂದಿನ ವಾರದ ತನಕವೂ ಹಾಲು ವಿತರಣೆ ಮುಂದುವರಿಕೆ ಮಾಡಲಾಗುತ್ತದೆ. ಅನಧಿಕೃತ ಕಟ್ಟಡಗಳ ಬಗ್ಗೆ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ಸೂಚಿಸಲಾಗಿದೆ ಎಂದರು.
ಸಕ್ಕರೆ ಕಾರ್ಖಾನೆ ಮಾಲೀಕರು ರೈತರಿಗೆ ಕಬ್ಬಿನ ಬಾಕಿ ಹಣ ಕೊಡಬೇಕು ಎಂದು ಸೂಚನೆ ಕೊಟ್ಟಿದ್ದೇವೆ. ಅಕಾಲಿಕ ಆನೆಕಲ್ಲು ಮಳೆಯಿಂದ ರಾಜ್ಯದ ಯಾವ ಯಾವ ಭಾಗದಲ್ಲಿ ಭತ್ತದ ಬೆಳೆಗೆ ಹಾನಿಯುಂಟಾಗಿದೆಯೋ ಅದಕ್ಕೆ ಆದಷ್ಟು ಬೇಗ ಪರಿಹಾರ ನೀಡುತ್ತೇವೆ. ಹಾಗೆಯೇ ಆನೆಕಲ್ಲು ಮಳೆಯಿಂದ ಹಾನಿಯಾದ ಬೇರೆ ಬೆಳೆಗಳಿಗೂ ಪರಿಹಾರ ನೀಡುವುದಾಗಿ ಸಿಎಂ ಭರವಸೆ ನೀಡಿದರು.