– ಹಿಂದೆ ಮೋದಿ ಮತನಾಡ್ತಾರೆ, ಸಿಎಂ ಮುಂದೆ ಬಾಯಿ ಬಡಿತಾರೆ
ಧಾರವಾಡ: ಸಿಎಂ ಯಡಿಯೂರಪ್ಪ ಒಬ್ಬ ಪೊಪೆಟ್ ಎಂದು ಕೇಂದ್ರ ಮಾಜಿ ಸಚಿವ ಬಾಬಾಗೌಡ ಪಾಟೀಲ್ ಲೇವಡಿ ಮಾಡಿದ್ದಾರೆ.
ಧಾರವಾಡದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಬಾಯಿ ಮಾತ್ರ ಬಡಿಯೋದು, ಹಿಂದೆ ಮಾತನಾಡುವವರೆ ಬೇರೆ. ಹಿಂದೆ ಪ್ರಧಾನಿ ನರೇಂದ್ರ ಮೋದಿ ಮಾತನಾಡ್ತಾರೆ. ಮುಂದೆ ಯಡಿಯೂರಪ್ಪ ಬಾಯಿ ಮಾತ್ರ ಬಡಿತಾರೆ ಎಂದು ಬಾಬಾಗೌಡ ಪಾಟೀಲ್ ವ್ಯಂಗ್ಯವಾಡಿದ್ದಾರೆ.
ಇಲಿಗಳು ಹೊರಗೆ ಬರಲಿ ಎಂದು ಸಂಸದ ಅನಂತ್‍ಕುಮಾರ್ ಹೆಗಡೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಬಾಬಾಗೌಡ ಅವರು, ಯಾರು ಇಲಿ ಎಂದು ನಾವು ನೋಡಿಕೊಳ್ಳುತ್ತೇವೆ. ಇವರೆಷ್ಟು ಧೈರ್ಯವಂತರು ಅಂತ ಗೊತ್ತಿದೆ ಎಂದು ತಿರುಗೇಟು ನೀಡಿದರು. ಅಲ್ಲದೆ ಮಂತ್ರ ಹೇಳುವವರಿಗೆ ಹೆದರಬೇಕಿಲ್ಲ, ಖಡ್ಗ ಹಿಡಿದುಕೊಂಡೇ ನಾವು ಹುಟ್ಟಿದವರು ಎಂದರು. ಇವರನ್ನು ಮೊದಲು ಪಕ್ಷದಿಂದ ಹೊರಗೆ ಹಾಕಬೇಕಿತ್ತು. ಮೇಲಿನವರು ಅದೇ ಮನಸ್ಥಿತಿಯಲ್ಲಿದ್ದಾರೆ, ಇವರನ್ನು ಮಾತನಾಡುವುದಕ್ಕಾಗಿ ಅವರು ಬಿಟ್ಟಿದ್ದಾರೆ ಅನಿಸುತ್ತಿದೆ ಎಂದು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ಕೇಂದ್ರ ಸಚಿವ ಅನುರಾಗ್ ಠಾಕೂರ್ ಗುಂಡು ಹಾಕಿ ಅಂತ ಹೇಳುತ್ತಾರೆ. ಓರ್ವ ಕೇಂದ್ರ ಸಚಿವರಾಗಿ ಈ ಹೇಳಿಕೆ ಕೊಟ್ಟಿದ್ದು ಅವರು ಸರ್ಕಾರದ ಒಂದು ಭಾಗ, ಮೋದಿನೂ ಕೂಡ ಇದರ ಭಾಗ. ಗುಂಡು ಹಾಕುವುದು ನಿಮಗೇನು ಹೊಸದಲ್ಲ. ನಾವು ರೈತರು ಸಾಕಷ್ಟು ಗುಂಡು ಹಾಕಿಸಿಕೊಂಡಿದ್ದೇವೆ. ಗುಂಡು ಹಾಕಿ ಅಂತ ಹೇಳುವ ಸರ್ಕಾರ ನಮಗೆ ಬೇಕಾ? ಇವರಿಗೆ ನಾಚಿಕೆ, ಮಾನ, ಮರ್ಯಾದೆ ಇದ್ದರೆ ಮುಂದೆ ಅಂಬೇಡ್ಕರ ಹೆಸರು ತೆಗೆದುಕೊಳ್ಳಬಾರದು ಎಂದು ಕೇಂದ್ರ ಸರ್ಕಾರಕ್ಕೆ ಸವಾಲ್ ಹಾಕಿದರು. ಹಾಗೆಯೇ ಇವರಗಷ್ಟೇ ಗುಂಡು ಹಾಕಲು ಬರುತ್ತಾ? ದೇಶದೊಳಗೆ ಅಧಿಕೃತ ಮಾತ್ರವಲ್ಲ, ಅನಧಿಕೃತ ಗುಂಡು ಹಾಕುವವರು ಇದ್ದಾರೆ. ಒಳಗೆ ಗುಂಡು ಹಾಕುವ ತರಬೇತಿ ಪಡೆದಿದ್ದಾರೆ ಎಂದು ಮಾತಿನ ಚಾಟಿ ಬೀಸಿದರು.
ಕೇಂದ್ರ ಸಚಿವ ಸುರೇಶ ಅಂಗಡಿ ಕೂಡ ಗುಂಡು ಹಾಕುವ ಮಾತು ಹೇಳಿದ್ದಾರೆ. ಗುಂಡು ಹಾಕುವ ಆದೇಶದ ವಿಶೇಷ ಅಧಿಕಾರ ಅಂಗಡಿಗೆ ಮೋದಿ ಕೊಟ್ಟಿದ್ದಾರಾ? ಮೋದಿ ಮತ್ತು ಅಮಿತ್ ಶಾಗಿಂತ ದಡ್ಡರು ಈ ದೇಶದಲ್ಲಿ ಯಾರಿಲ್ಲ. ಇಷ್ಟು ದಿನ ಜನ ಮಾತನಾಡುತ್ತಿರಲಿಲ್ಲ ಇನ್ನು ಮುಂದೆ ಮಾತನಾಡುತ್ತಾರೆ. ಗುಂಡು ಹಾಕುವವನು ಹೇಡಿ, ಪುಕ್ಕಲ. ಆದರೆ ಗುಂಡು ಹಾಕಿಸಿಕೊಳ್ಳುವವರೇ ನಿಜವಾದ ಧೈರ್ಯವಂತರು ಎಂದು ಹೇಳಿದರು.