ಬೆಂಗಳೂರು: ನ್ಯಾಯಾಂಗ ಕ್ಷೇತ್ರದಲ್ಲಿ ಕನ್ನಡ ಭಾಷೆ ಬೆಳೆಯಬೇಕು ಎನ್ನುವುದು ಸರ್ಕಾರದ ನಿಲುವು. ಇದಕ್ಕಾಗಿ ಕಾಲಕಾಲಕ್ಕೆ ನ್ಯಾಯಾಂಗ ಕ್ಷೇತ್ರದಲ್ಲಿ ಕನ್ನಡ ಭಾಷೆ ಬಳಕೆಗೆ ಉತ್ತೇಜನ ಕೊಡುವಂಥ ಕೆಲಸ ಆಗಬೇಕಿದೆ. ಈ ಕೆಲಸವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ 2016-17 ನೇ ಸಾಲಿನಿಂದ ಮಾಡಿಕೊಂಡು ಬರುತ್ತಿದೆ. ಕನ್ನಡ ಅಭಿವೃದ್ದಿ ಪ್ರಾಧಿಕಾರವು ಕನ್ನಡದಲ್ಲೇ ತೀರ್ಪು ಕೊಡುವ ನ್ಯಾಯಾಧೀಶರು, ಕನ್ನಡದಲ್ಲಿ ವಾದ ಮಂಡಿಸುವ ಅಭಿಯೋಜಕರು ಮತ್ತು ವಕೀಲರನ್ನು ಗುರುತಿಸಿ “ನ್ಯಾಯಾಂಗದಲ್ಲಿ ಕನ್ನಡ ಪ್ರಶಸ್ತಿ” ನೀಡಿ ಸನ್ಮಾನಿಸುವ ಪರಿಪಾಠವನ್ನು ಯಶಸ್ವಿಯಾಗಿ ಬೆಳೆಸಿಕೊಂಡು ಬರುತ್ತಿದೆ.
ಇದೀಗ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ 2017-18 ಮತ್ತು 2018-19 ನೇ ಸಾಲಿನ “ನ್ಯಾಯಾಂಗದಲ್ಲಿ ಕನ್ನಡ ಪ್ರಶಸ್ತಿ” ಪ್ರದಾನ ಮಾಡಲಾಗಿದೆ. ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರು ನ್ಯಾಯಾಂಗ ಕ್ಷೇತ್ರದಲ್ಲಿ ಕನ್ನಡ ಭಾಷೆ ಬಳಕೆ ಮಾಡಿದ 102 ಗಣ್ಯರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಿದರು.
Advertisement
Advertisement
ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ಕನ್ನಡದಲ್ಲಿ ತೀರ್ಪು ನೀಡಿದ 72 ಜನ ನ್ಯಾಯಾಧೀಶರುಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಜೊತೆಗೆ ಕನ್ನಡದಲ್ಲಿ ವಾದ ಮಂಡನೆ ಮಾಡಿದ 10 ಸರ್ಕಾರಿ ಅಭಿಯೋಜಕರು ಹಾಗೂ 20 ಜನ ವಕೀಲರಿಗೂ “ನ್ಯಾಯಾಂಗದಲ್ಲಿ ಕನ್ನಡ ಪ್ರಶಸ್ತಿ” ಪ್ರದಾನ ಮಾಡಲಾಯಿತು. ಪ್ರಶಸ್ತಿ ಪುರಸ್ಕೃತರಿಗೆ ಶಾಲು ಹೊದಿಸಿ, ಪ್ರಶಸ್ತಿ ಫಲಕ, ಗೌರವಧನ ಕೊಟ್ಟು ಪುರಸ್ಕರಿಸಲಾಯಿತು. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಿಎಂ ಯಡಿಯೂರಪ್ಪ ಅಲ್ಲದೇ ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಸಿ ಟಿ ರವಿ, ಹೈಕೋರ್ಟ್ ನ್ಯಾಯಮೂರ್ತಿ ಫಣೀಂದ್ರ ಕುಮಾರ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿಎಸ್ ನಾಗಾಭರಣ ಉಪಸ್ಥಿತರಿದ್ದರು.