ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ಈ ತಿಂಗಳಾಂತ್ಯದಲ್ಲಿ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಆದರೆ ಅರ್ಹ ಶಾಸಕರು ಮತ್ತು ಮೂಲ ಬಿಜೆಪಿ ಶಾಸಕರ ಪೈಕಿ ಎಷ್ಟೆಷ್ಟು ಮಂದಿಯನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು ಅನ್ನುವ ವಿಚಾರದಲ್ಲಿ ಇನ್ನೂ ಚರ್ಚೆಗಳು ನಡೆಯುತ್ತಲೇ ಇವೆ. ಈ ಮಧ್ಯೆ ಅರ್ಹ ಶಾಸಕರ ಪೈಕಿ 8 ಶಾಸಕರಿಗಷ್ಟೇ ಸಚಿವ ಸ್ಥಾನ ಕೊಡಲಾಗುತ್ತದೆ ಎಂದು ಪಕ್ಷದ ಮೂಲಗಳು ತಿಳಿಸುತ್ತಿವೆ. ಹಾಗಿದ್ದರೆ ಉಳಿದ ಮೂವರು ಅರ್ಹ ಶಾಸಕರನ್ನು ಸಚಿವರಾಗಿ ಮಾಡುವುದಿಲ್ಲವಾ, ಇದು ನಿಜವಾದರೆ ಆ ಮೂವರು ಅರ್ಹರು ಯಾರು ಅನ್ನುವ ಪ್ರಶ್ನೆಗಳೂ ಹುಟ್ಟಿಕೊಂಡಿವೆ.
ಇದಕ್ಕಾಗಿ ಸಿಎಂ ಯಡಿಯೂರಪ್ಪನವರು ಒಂದು ಸಂಧಾನ ಸೂತ್ರ ರೆಡಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಸಂಧಾನ ಸೂತ್ರದ ಸಕ್ಸಸ್ ಮೇಲೆಯೇ ನಿಂತಿದೆಯಂತೆ ಸಂಪುಟ ವಿಸ್ತರಣೆ. ಈ ಸಂಧಾನ ಸೂತ್ರ ಸಕ್ಸಸ್ ಆದರೆ ಈ ತಿಂಗಳಲ್ಲೇ ಸಂಪುಟ ವಿಸ್ತರಣೆ ನಡೆಸಲಾಗುತ್ತದೆಯಂತೆ. ಒಂದು ವೇಳೆ ಈ ಸಂಧಾನ ಸೂತ್ರ ಫೇಲ್ ಆದ್ರೆ ಸಂಪುಟ ಕಸರತ್ತು ಫೆಬ್ರವರಿಯಲ್ಲಿ ನಡೆಯಲಿದೆಯೆಂತಲೂ ಹೇಳಲಾಗುತ್ತಿದೆ. ಮೂಲ ಬಿಜೆಪಿಗೆ ಶಾಸಕರನ್ನು ಸಚಿವರಾಗಿ ಮಾಡಲು ರೂಪಿಸಿದ ಸಂಧಾನ ಸೂತ್ರವಿದಂತೆ. ಸಚಿವ ಸಂಪುಟದಲ್ಲಿ 7 ರಿಂದ 8 ಜನ ಅರ್ಹರಿಗೆ ಮಾತ್ರ ಸೇರ್ಪಡೆ ಮಾಡಿಕೊಂಡು, ಕಡೆಯ ಪಕ್ಷ ಮೂವರು ಅರ್ಹ ಶಾಸಕರಿಗೆ ಸಚಿವ ಸ್ಥಾನ ಕೊಡದಿರಲು ಯಡಿಯೂರಪ್ಪ ಲೆಕ್ಕಾಚಾರ ಹಾಕಿದ್ದಾರೆ ಎನ್ನಲಾಗುತ್ತಿದೆ. ಸಚಿವ ಸಂಪುಟ ವಿಸ್ತರಣೆ ಆಗಬೇಕು ಅಂದ್ರೆ ಇದೇ ಸೂತ್ರ ಸರಿ ಅಂತಿದ್ದಾರಂತೆ ಸಿಎಂ ಯಡಿಯೂರಪ್ಪ.
ಮೂಲಗಳ ಪ್ರಕಾರ ಮಹೇಶ್ ಕುಮಟಳ್ಳಿ, ಶ್ರೀಮಂತ್ ಪಾಟೀಲ್ ಮತ್ತು ನಾರಾಯಣ ಗೌಡರಿಗೆ ಸಚಿವ ಸ್ಥಾನ ಕೊಡದಿರಲು ಚಿಂತಿಸಲಾಗುತ್ತಿದೆ. ಈ ಮೂವರಿಗೂ ಸಚಿವ ಸ್ಥಾನದ ಬದಲು ಪ್ರಭಾವಿ ನಿಗಮ ಮಂಡಳಿಗಳನ್ನು ಕೊಡಲು ಪಕ್ಷದಲ್ಲಿ ಚರ್ಚೆ ನಡೆಯುತ್ತಿದೆ ಎನ್ನಲಾಗಿದೆ.
ಹಾಗಿದ್ರೆ ಯಡಿಯೂರಪ್ಪ ಸಂಧಾನ ಸೂತ್ರಕ್ಕೆ ಓಕೆ ಅಂತಾರಾ ಗೆದ್ದು ಬಂದವರು? ಕಡೆಯ ಪಕ್ಷ ಮೂವರು ಅರ್ಹರನ್ನು ಸಚಿವ ಸ್ಥಾನ ಕೊಡದೇ ಕೂರಿಸ್ತಾರಾ ಯಡಿಯೂರಪ್ಪ? ಮೂವರನ್ನು ಕೂರಿಸಿ ಉಳಿದ ಎಂಟು ಅರ್ಹ ಶಾಸಕರನ್ನು ಸಚಿವರಾಗಿ ಮಾಡ್ತಾರಾ ಬಿಎಸ್ ವೈ ? ಈ ಮೂವರ ಮೇಲೆ ನಿಂತಿದ್ಯಾ ಸಚಿವ ಸಂಪುಟ ವಿಸ್ತರಣೆ ಕಸರತ್ತು? ಅಷ್ಟಕ್ಕೂ ಈ ಮೂವರು ಅರ್ಹರು ಸಚಿವರಾಗದೇ ಇರಲು ಒಪ್ಕೋತಾರಾ? ಈ ಮೂವರದ್ದು ಓಕೆ ಆದ್ರೆ ಸಚಿವ ಸಂಪುಟ ವಿಸ್ತರಣೆ ಕಸರತ್ತು ಅಂತ್ಯವಾಗುತ್ತಾ?. ಹಾಗಿದ್ರೆ ಈ ಮೂವರನ್ನು ಮನವೊಲಿಸಲು ಯಡಿಯೂರಪ್ಪ ಮಾಡ್ಕೊಂಡಿರೋ ಪ್ಲಾನ್ ಏನು ? ಇವೇ ಮುಂತಾದ ಪ್ರಶ್ನೆಗಳು ಬಿಜೆಪಿ ವಲಯದಲ್ಲಿ ಹರಿದಾಡಲಾರಂಭಿಸಿವೆ.
ಯಡಿಯೂರಪ್ಪನವರು ದಾವೋಸ್ ಪ್ರವಾಸ ಮುಗಿಸಿ ವಾಪಸ್ ಬಂದಾಗಲೇ ಈ ಪ್ರಶ್ನೆಗಳಿಗೆ ಉತ್ತರ ಸಿಗೋದು. ಅಲ್ಲೀವರೆಗೂ ಯಡಿಯೂರಪ್ಪನವರ ಈ ಸಂಧಾನ ಸೂತ್ರ ಫುಲ್ ಕುತೂಹಲ ಮೂಡಿಸಿದೆ.