ಬೆಂಗಳೂರು: ಕಾಂಗ್ರೆಸ್ ಆಡಿಯೋ ಅಸ್ತ್ರಕ್ಕೆ ಅನರ್ಹ ಶಾಸಕರು ಪ್ರತ್ಯಾಸ್ತ್ರ ಪ್ರಯೋಗಕ್ಕೆ ಮುಂದಾಗಿದ್ದಾರೆ. ಧರ್ಮಸ್ಥಳದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿದ್ದ ವಿಡಿಯೋವನ್ನು ಸುಪ್ರೀಂಕೋರ್ಟಿಗೆ ಸಲ್ಲಿಸುವ ಸಾಧ್ಯತೆಗಳಿವೆ.
ಸಿಎಂ ಯಡಿಯೂರಪ್ಪನವರು ಮಾತನಾಡಿದ್ದ ಆಡಿಯೋಗೆ ಸಂಬಂಧಿಸಿದಂತೆ ಮಂಗಳವಾರ ಸುಪ್ರೀಂಕೋರ್ಟಿನಲ್ಲಿ ವಿಚಾರಣೆ ನಡೆಯಲಿದೆ. ಈ ಹಿಂದೆ ಧರ್ಮಸ್ಥಳದ ಶಾಂತಿವನದಲ್ಲಿ ಲೋಕಸಭಾ ಚುನಾವಣೆ ಬಳಿಕ ಮೈತ್ರಿ ಸರ್ಕಾರ ಇರಲ್ಲ ಎಂದು ಹೇಳಿದ್ದ ವಿಡಿಯೋ ಬಿಡುಗಡೆ ಆಗಿತ್ತು. ಈ ಹಿನ್ನೆಲೆಯಲ್ಲಿ ಶಾಸಕರ ರಾಜೀನಾಮೆಗೆ ಸಿದ್ದರಾಮಯ್ಯನವರೇ ಕಾರಣ. ಈ ವಿಡಿಯೋವನ್ನು ಅಸ್ತçವಾಗಿ ಬಿಜೆಪಿ ಪರ ವಕೀಲರು ಬಳಸಿಕೊಳ್ಳುವ ಸಾಧ್ಯತೆಗಳಿವೆ.
ಯಡಿಯೂರಪ್ಪನವರ ಆಡಿಯೋಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಿಯೋಗ ರಾಜ್ಯಪಾಲರಿಗೆ ದೂರು ಸಲ್ಲಿಸಿದೆ. ಮೈತ್ರಿ ಸರ್ಕಾರ ಪತನಕ್ಕೆ ಬಿಜೆಪಿ ನಾಯಕರು ಕಾರಣ ಎಂದು ಕಾಂಗ್ರೆಸ್ ಆರೋಪಿಸಿತ್ತು. ಪಬ್ಲಿಕ್ ಟಿವಿಗೆ ನೀಡಿದ ಸಂದರ್ಶನದಲ್ಲಿ ಹುಬ್ಬಳ್ಳಿ ಸಭೆ ಆಡಿಯೋದಲ್ಲಿರುವ ಧ್ವನಿ ನನ್ನದೇ ಎಂದು ಒಪ್ಪಿಕೊಂಡಿದ್ದ ಸಿಎಂ, ಭಾನುವಾರ ಅನರ್ಹ ಶಾಸಕರಿಗೂ ಮತ್ತು ನಮಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳುವ ಮೂಲಕ ಡ್ಯಾಮೇಜ್ ಕಂಟ್ರೋಲಿಗೆ ಮುಂದಾಗಿದ್ದರು.