ಮಂಡ್ಯ: ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ ಬಿ.ಎಸ್. ಯಡಿಯೂರಪ್ಪ ಮನೆದೇವರು, ಗ್ರಾಮದೇವತೆಯ ಮೊರೆ ಹೋಗುತ್ತಿದ್ದಾರೆ.
ಇಂದು ತಮ್ಮ ಹುಟ್ಟೂರು ಮಂಡ್ಯ ಜಿಲ್ಲೆ ಕೆಆರ್ ಪೇಟೆ ತಾಲೂಕಿನ ಬೂಕನಕೆರೆ ಮತ್ತು ಮೇಲುಕೋಟೆಗೆ ಭೇಟಿ ನೀಡಲಿದ್ದಾರೆ. ಮೊದಲು ಮನೆ ದೇವರು ಗವಿಮಠದ ಸಿದ್ದಲಿಂಗೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಿದ್ದಾರೆ. ಬಳಿಕ ಬೂಕನಕೆರೆ ಗ್ರಾಮದ ಗೋಗಾಲಮ್ಮ ದೇವರಿಗೆ ಪೂಜೆ ಸಲ್ಲಿಸುತ್ತಾರೆ. ನಂತರ ಮೇಲುಕೋಟೆ ಚಲುವನಾರಾಯಣಸ್ವಾಮಿಯ ದರ್ಶನ ಪಡೆಯಲಿದ್ದಾರೆ.
Advertisement
ಈಗ ಬಹುಮತ ಸಾಬೀತು ಪಡಿಸಿ, ಸಂಪುಟ ರಚನೆಯಾದರೆ ರಾಜ್ಯದಲ್ಲಿ ಬಿಎಸ್‍ವೈ ಸರ್ಕಾರ ಸಂಪೂರ್ಣವಾಗಲಿದೆ. ಶುಕ್ರವಾರ ರಾತ್ರಿ ಧವಳಗಿರಿ ನಿವಾಸಕ್ಕೆ ಆಗಮಿಸಿದ ಸಿಎಂ ಯಡಿಯೂರಪ್ಪ ಅವರಿಗೆ ಕಾರ್ಯಕರ್ತರು ಅದ್ಧೂರಿ ಸ್ವಾಗತ ನೀಡಿದ್ದರು. ನಿವಾಸದೆದುರು ಡೊಳ್ಳು ಕುಣಿತ, ವೀರಗಾಸೆ ಕುಣಿತ ಅಬ್ಬರ ಜೋರಾಗಿತ್ತು. ಬಿಎಸ್‍ವೈ ಪುತ್ರ ಬಿ.ವೈ ರಾಘವೇಂದ್ರರನ್ನ ಅಭಿಮಾನಿಗಳು ಮೇಲಕ್ಕೆ ಎತ್ತಿ ಜೈಕಾರ ಕೂಗಿದ್ದರು.
Advertisement
Advertisement
ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮೊದಲ ದಿನವೇ ಬಿ.ಎಸ್.ಯಡಿಯೂರಪ್ಪ ಅವರು ರೈತರು ಹಾಗೂ ನೇಕಾರರಿಗೆ ಕೊಡುಗೆ ಕೊಟ್ಟಿದ್ದಾರೆ. ರಾಜ್ಯದಲ್ಲಿ ಮಳೆ ಇಲ್ಲದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರು, ನೇಕಾರರು, ಮೀನುಗಾರರ ಸಂಕಷ್ಟವನ್ನು ಪರಿಹರಿಸಲು ವಿಶೇಷ ಗಮನ ಹರಿಸುತ್ತೇನೆ. ಈ ಸಂಬಂಧ ಕ್ಯಾಬಿನೆಟ್ ಸಭೆಯಲ್ಲಿ ಎರಡು ನಿರ್ಧಾರಗಳನ್ನು ಕೈಗೊಂಡಿದ್ದೇವೆ. ಪ್ರಧಾನ ಮಂತ್ರಿ ಸಮ್ಮಾನ್ ಯೋಜನೆಗೆ ಈಗಾಗಲೇ ಆಯ್ಕೆ ಮಾಡಲಾದ ರೈತರಿಗೆ ರಾಜ್ಯ ಸರ್ಕಾರದಿಂದಲೂ 4 ಸಾವಿರ ರೂ.ವನ್ನು ಎರಡು ಕಂತುಗಳಲ್ಲಿ ನೀಡಲು ನಿರ್ಧರಿಸಿದ್ದೇವೆ. ನೇಕಾರರ 100 ಕೋಟಿ ರೂ. ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡುತ್ತೇವೆ ಎಂದು ತಿಳಿಸಿದ್ದರು.