ಹಾಸನ/ಮೈಸೂರು: ಈ ತಿಂಗಳ ಅಂತ್ಯದೊಳಗೆ ಸಚಿವ ಸಂಪುಟ ವಿಸ್ತರಣೆ ಆಗಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಮೈಸೂರು ಜಿಲ್ಲೆಯ ಕೆಆರ್ ನಗರ ತಾಲೂಕಿನ ದೇವಿತಂದ್ರೆ ಗ್ರಾಮದಲ್ಲಿ ಸಪ್ತಮಾತೃಕೆ ದೇವಾಲಯದ ರಾಜಗೋಪುರ ಉದ್ಘಾಟನೆ ಮಾಡಲು ಸಿಎಂ ಆಗಮಿಸಿದ್ದರು. ಈ ವೇಳೆ ಮಾತನಾಡಿದ ಅವರು, ಈ ತಿಂಗಳ ಅಂತ್ಯದೊಳಗೆ ಸಚಿವ ಸಂಪುಟ ವಿಸ್ತರಣೆ ಮಾಡುವುದಾಗಿ ತಿಳಿಸಿದರು. ಜೊತೆಗೆ ಈ ಬಾರಿ ಬಜೆಟ್‍ನಲ್ಲಿ ಕೃಷಿ ಕಾರ್ಮಿಕರು, ರೈತರು, ಮಹಿಳೆಯರಿಗೆ ಅನುಕೂಲವಾಗುವ ಬಜೆಟ್ ಮಂಡಿಸೋದಾಗಿ ತಿಳಿಸಿದರು.
ದಾವೋಸ್‍ಗೆ ಹೋಗಿ ಬಂದ ಮೇಲೆ 40ಕ್ಕೂ ಹೆಚ್ಚು ಜನ ಕೈಗಾರಿಕೋದ್ಯಮಿಗಳನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಕರ್ನಾಟಕದಲ್ಲಿ ಹೂಡಿಕೆ ಮಾಡಲು ವಿನಂತಿಸಿದ್ದೇನೆ. ಬಹಳ ದೊಡ್ಡ ಪ್ರಮಾಣದಲ್ಲಿ ಕೈಗಾರಿಕೆ ಅಭಿವೃದ್ಧಿ ಮಾಡಲು ಭರವಸೆ ನೀಡಿದ್ದಾರೆ. ಕೃಷಿಕರಿಗೆ ಸಂಬಂಧಿಸಿದಂತೆ, ನಿರುದ್ಯೋಗ ಸಮಸ್ಯೆ ಬಗೆಹರಿಸಲು ಸಂಬಂಧಿಸಿದಂತೆ ದಾವೋಸ್ ಪ್ರವಾಸ ಅನುಕೂಲ ಆಗಲಿದೆ ಎಂದು ತಿಳಿಸಿದರು.
ಇದೇ ವೇಳೆ ಮಾತನಾಡಿದ ಸಚಿವ ಸೋಮಣ್ಣ, ಬೇರೆಯವರು ಸಿಎಂ ಆದಾಗ ಅನಾವೃಷ್ಟಿಯಾಗಿತ್ತು. ಆದರೆ ಯಡಿಯೂರಪ್ಪರವರು ಸಿಎಂ ಆದಾಗ ಅತಿವೃಷ್ಟಿಯಾಗಿದೆ. ಯಡಿಯೂರಪ್ಪರವರು ಮೂರು ವರ್ಷಗಳ ಕಾಲ ಸಿಎಂ ಆಗಿರುತ್ತಾರೆ. ಯುವಕರು ನಾಚಿಸುವಂತೆ 24 ಗಂಟೆಗಳ ಕಾಲ ಯಡಿಯೂರಪ್ಪ ಕೆಲಸ ಮಾಡುತ್ತಿದ್ದಾರೆ ಎಂದು ಬಿಎಸ್‍ವೈ ಗುಣಗಾನ ಮಾಡಿದರು.