ಬೆಂಗಳೂರು: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಜಾರಿ ನಿರ್ದೇಶನಾಲಯ (ಇಡಿ) ಬಂಧನದಿಂದ ಹೊರಬರಲಿ ಅಂತ ದೇವರಲ್ಲಿ ಪಾರ್ಥಿಸುತ್ತೇನೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಡಿಕೆ ಶಿವಕುಮಾರ್ ಅವರನ್ನು ಇಡಿ ಬಂಧಿಸಿರುವ ಕುರಿತು ಪ್ರತಿಕ್ರಿಯೆ ನೀಡಿರುವ ಸಿಎಂ, ಮಾಜಿ ಸಚಿವರ ಬಂಧನ ಆಗಿರುವ ಬಗ್ಗೆ ನನಗೇನು ಸಂತೋಷವಾಗಿಲ್ಲ. ಇದೆಲ್ಲದರಿಂದ ಅವರು ಆದಷ್ಟು ಬೇಗ ಹೊರಬರಲಿ. ಡಿ.ಕೆ.ಶಿವಕುಮಾರ್ ಅವರು ಹೊರಬಂದರೆ ಎಲ್ಲರಿಗಿಂತ ನಾನು ಹೆಚ್ಚು ಸಂತೋಷ ಬಡುತ್ತೇನೆ ಎಂದರು.
ಕಾನೂನು ಚೌಕಟ್ಟಿನಲ್ಲಿ ಕೆಲವೊಂದು ನಿರ್ಧಾರ ಆಗಿರುತ್ತದೆ. ಹೀಗಾಗಿ ಬಂಧನ ಆಗಿರಬೇಕು. ನನ್ನ ಜೀವನದಲ್ಲಿ ಯಾರನ್ನೂ ದ್ವೇಷಿಸಿಲ್ಲ, ಕೆಟ್ಟದ್ದನ್ನು ಬಯಸಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಇಡಿ ಕಚೇರಿ ಮುಂಭಾಗದಲ್ಲಿ ಹೈಡ್ರಾಮಾ – ನಾನು ಹೇಡಿಯಲ್ಲ ಎಲ್ಲವನ್ನೂ ಎದುರಿಸುತ್ತೇನೆ ಎಂದ ಡಿಕೆಶಿ
ಇತ್ತ ಮೌರ್ಯ ಸರ್ಕಲ್‍ನಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನಾಕಾರರು ಸಿಎಂ ಯಡಿಯೂರಪ್ಪ ಅವರ ಮನೆ ಮುಂದೆ ಪ್ರತಿಭಟನೆ ಮಾಡುವ ಸಾಧ್ಯತೆ ಇದೆ. ಹೀಗಾಗಿ ಡಾಲರ್ಸ್ ಕಾಲೋನಿಯಲ್ಲಿರುವ ಬಿಎಸ್ ಯಡಿಯೂರಪ್ಪನವರ ದವಳಗಿರಿ ನಿವಾಸಕ್ಕೆ ಬೀಗಿ ಭದ್ರತೆ ಒದಗಿಸಲಾಗಿದೆ. ಇದನ್ನೂ ಓದಿ: ಇಡಿಗೆ ಪ್ರಶ್ನೆ ಕೇಳುವ ಅಧಿಕಾರವೇ ಇಲ್ಲ: ಡಿಕೆಶಿ ಪರ ವಕೀಲ ಶ್ಯಾಮ್ ಸುಂದರ್
ಇದಕ್ಕೂ ಮುನ್ನ ಡಿಸಿಎಂ ಅಶ್ವಥ್ ನಾರಾಯಣ್ ಟ್ವೀಟ್ ಮಾಡಿ, ಮಾಡಿದ್ದುಣ್ಣೋ ಮಾರಾಯ ಎಂದು ಡಿಕೆ ಶಿವಕುಮಾರ್ ಅವರಿಗೆ ಗುದ್ದು ಕೊಟ್ಟಿದ್ದರು. ಹೊಸ ಭಾರತದಲ್ಲಿ ಭ್ರಷ್ಟರಿಗೆ ಜಾಗವಿಲ್ಲ. ಭ್ರಷ್ಟರನ್ನ ಶಿಕ್ಷಿಸುವ ಸರ್ಕಾರ ಕೆಲಸ ಮಾಡುತ್ತಿದೆ. ಕಣ್ಣೀರು ಹಾಕಿ ಅನುಕಂಪ ಗಿಟ್ಟಿಸಿಕೊಳ್ಳುವ ಪ್ರಯತ್ನ ವರ್ಕೌಟ್ ಆಗಲ್ಲ ಎಂದು ಹೇಳಿದ್ದರು.
ಉಪ್ಪು ತಿಂದವರು ನೀರು ಕುಡಿಯಲೇಬೇಕು ಎಂಬ ಡಿಸಿಎಂ ಗೋವಿಂದ ಕಾರಜೋಳ ಮತ್ತು ಸಚಿವ ರಾಮುಲು ಹೇಳಿಕೆಯಿಂದ ಡಿಕೆ ಶಿವಕುಮಾರ್ ಸೋಮವಾರ ಕಣ್ಣೀರು ಹಾಕಿದ್ದರು. ಈ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಲೇ ಸಚಿವ ರಾಮುಲು ಡಿಕೆಶಿ ಅವರಿಗೆ ಕೈಮುಗಿದು ಕ್ಷಮೆ ಕೇಳಿ, ನಾನು ವೈಯಕ್ತಿಕವಾಗಿ ಟೀಕೆ ಮಾಡಿಲ್ಲ. ರಾಜಕೀಯವಾಗಿ ಟೀಕೆ ಮಾಡಿದ್ದೆ ಅಷ್ಟೇ ಎಂದು ತಿಳಿಸಿದ್ದರು.