ತಬ್ಲಿಘಿ ಜಮಾತ್‍ಗೆ ಕರ್ನಾಟಕದಿಂದ 1,300ಕ್ಕೂ ಹೆಚ್ಚು ಜನರು ಭಾಗಿ – ಸಿಎಂ ಮಾಹಿತಿ

Public TV
2 Min Read
CM

ಬೆಂಗಳೂರು: ದೆಹಲಿಯ ನಿಜಾಮುದ್ದೀನ್‍ನಲ್ಲಿ ತಬ್ಲಿಘಿ ಜಮಾತ್‍ನ ಪ್ರಾರ್ಥನಾ ಸಭೆಯಲ್ಲಿ ಕರ್ನಾಟಕದಿಂದ 1,300ಕ್ಕೂ ಹೆಚ್ಚು ಜನರು ತೆರಳಿದ್ದರು ಎಂದು ಮುಖ್ಯಮಂತ್ರಿ ಸಿಎಂ ಯಡಿಯೂರಪ್ಪ ಮಾಹಿತಿ ನೀಡಿದ್ದಾರೆ.

ಸಿಎಂ ಯಡಿಯೂರಪ್ಪ ಅವರು ದೆಹಲಿ ಜಮಾತ್ ಕಾರ್ಯಕ್ರಮಕ್ಕೆ ಹೋದವರ ಕುರಿತು ಟ್ಟಿಟ್ಟರಿನಲ್ಲಿ ಮಾಹಿತಿ ನೀಡಿದ್ದಾರೆ. “ದೆಹಲಿಯ ನಿಜಾಮುದ್ದೀನ್‍ನ ತಬ್ಲಿಘಿ ಜಮಾತ್‍ನ ಪ್ರಾರ್ಥನಾ ಸಭೆಯಲ್ಲಿ ಭಾಗವಹಿಸಿದವರನ್ನು ಗುರುತಿಸಿ ಕ್ವಾರಂಟೈನ್ ನಲ್ಲಿರಿಸಲಾಗಿದೆ. ಇತರ ರಾಜ್ಯಗಳಿಗೆ ತೆರಳಿದವರ ಕುರಿತು ಸಹ ಮಾಹಿತಿ ಸಂಗ್ರಹಿಸಲಾಗಿದೆ” ಎಂದು ಟ್ವಿಟ್ಟರಿನಲ್ಲಿ ಬರೆದುಕೊಂಡಿದ್ದಾರೆ.

Tablighi Jamaat meet C

ಅಷ್ಟೇ ಅಲ್ಲದೇ ಎಷ್ಟು ಮಂದಿ ಜಮಾತ್‍ನಲ್ಲಿ ಭಾಗಿಯಾಗಿದ್ದರು, ಯಾವ ಜಿಲ್ಲೆಯಿಂದ ಎಷ್ಟು ಮಂದಿ ಹೋಗಿದ್ದರು ಎಂಬುದರ ಬಗ್ಗೆಯೂ ಮಾಹಿತಿ ನೀಡಿದ್ದಾರೆ. ದೆಹಲಿಯ ನಿಜಾಮುದ್ದೀನ್‍ನಲ್ಲಿ ತಬ್ಲಿಘಿ ಜಮಾತ್‍ನ ಪ್ರಾರ್ಥನಾ ಸಭೆಯಲ್ಲಿ ಭಾಗವಹಿಸಲು ಕರ್ನಾಟಕದಿಂದ 1,300ಕ್ಕೂ ಹೆಚ್ಚು ಜನರು ತೆರಳಿದ್ದು, ಅವರೆಲ್ಲರ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಅವರಲ್ಲಿ ಬೆಂಗಳೂರಿನಲ್ಲಿ 276 ಹಾಗೂ ಇತರ ಜಿಲ್ಲೆಗಳಲ್ಲಿ 482 ಕಾರ್ಯಕರ್ತರನ್ನು ಗುರುತಿಸಿ, ಕ್ವಾರಂಟೈನ್‍ನಲ್ಲಿರಿಸಲಾಗಿದೆ. ಇತರ ರಾಜ್ಯಗಳಿಗೆ ತೆರಳಿದವರ ಕುರಿತು ಸಹ ಮಾಹಿತಿ ಸಂಗ್ರಹಿಸಿ, ಆಯಾ ರಾಜ್ಯಗಳಿಗೆ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಭಾರತೀಯರನ್ನು ಹೊರತುಪಡಿಸಿ ಬೇರೆ ಬೇರೆ ರಾಷ್ಟ್ರೀಯತೆಯ 57 ತಬ್ಲಿಘಿ ಜಮಾತ್ ಕಾರ್ಯಕರ್ತರನ್ನು ಕರ್ನಾಟಕದ ಬೀದರಿನಲ್ಲಿ 8 ಜನರು, ಬೆಳಗಾವಿಯಲ್ಲಿ 10 ಮಂದಿ, ತುಮಕೂರಿನಲ್ಲಿ 8 ಜನರು ಹಾಗೂ ಬೆಂಗಳೂರಿನಲ್ಲಿ 31 ಮಂದಿಯನ್ನ ಗುರುತಿಸಿ ಕ್ವಾರಂಟೈನ್‍ನಲ್ಲಿ ಇರಿಸಲಾಗಿದೆ ಎಂದರು.

kwr corona

ಅಲ್ಲದೇ ಭಾರತಕ್ಕೆ ಬರಲು ನೀಡುವ ವೀಸಾ ಪ್ರಕ್ರಿಯೆಯಲ್ಲಿ ಇವರನ್ನು ಕಪ್ಪುಪಟ್ಟಿಗೆ ಸೇರಿಸುವ ಸೂಚನೆಯೊಂದಿಗೆ 57 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಅವರ ಪೈಕಿ 20 ಇಂಡೋನೇಷ್ಯಾ, 1 ಇಂಗ್ಲೆಂಡ್, 4 ದಕ್ಷಿಣ ಆಫ್ರಿಕಾ, 3 ಗ್ಯಾಂಬಿಯಾ, 19 ಕಿರ್ಗಿಸ್ತಾನ್, 1 ಯುಎಸ್‍ಎ, 1 ಫ್ರಾನ್ಸ್, 1 ಕೀನ್ಯಾ ಮತ್ತು ಏಳು ಮಂದಿ ಬಾಂಗ್ಲಾದೇಶದವರಾಗಿದ್ದಾರೆ ಎಂಬ ಮಾಹಿತಿಯನ್ನು ತಿಳಿಸಿದ್ದಾರೆ.

ನಿರ್ಣಾಯಕ ಅವಧಿಯಲ್ಲಿ ಹಾಟ್ ಸ್ಪಾಟ್‍ನ ಸಮೀಪದಲ್ಲಿದ್ದ 276 ತಬ್ಲಿಘಿ ಜಮಾತ್ ಕಾರ್ಯಕರ್ತರನ್ನು ಬೆಂಗಳೂರಿನಲ್ಲಿ ಗುರುತಿಸಲಾಗಿದ್ದು, ಕ್ವಾರಂಟೈನ್ ನಲ್ಲಿರಿಸಲಾಗಿದೆ. ಇದೇ ರೀತಿಯ ಹಿನ್ನೆಲೆ ಹೊಂದಿರುವ 482 ಜಮಾತ್ ಕಾರ್ಯಕರ್ತರನ್ನು ಕರ್ನಾಟಕದ ಇತರ ಜಿಲ್ಲೆಗಳಲ್ಲಿ ಗುರುತಿಸಲಾಗಿದೆ. ಆದ್ದರಿಂದ ಕರ್ನಾಟಕದಲ್ಲಿ 808 ಜಮಾತ್ ಕಾರ್ಯಕರ್ತರನ್ನು ಕಡ್ಡಾಯವಾಗಿ ಕ್ವಾರಂಟೈನ್‍ನಲ್ಲಿರಿಸಿ ಪರೀಕ್ಷಿಸಲಾಗಿದೆ ಎಂದಿದ್ದಾರೆ.

ಇತರ ರಾಜ್ಯಗಳಲ್ಲಿ ಪ್ರವಾಸ ಮಾಡುತ್ತಿರುವ ತಬ್ಲಿಘಿ ಜಮಾತ್‍ಗೆ ಸೇರಿದ 581 ಕಾರ್ಯಕರ್ತರ ಹೆಸರುಗಳಿವೆ. ನಾವು ಸಂಬಂಧಪಟ್ಟ ಎಲ್ಲ ರಾಜ್ಯಗಳಿಗೂ ಮಾಹಿತಿ ರವಾನಿಸಿದ್ದೇವೆ. ಹೀಗಾಗಿ ಯಾರೂ ಆತಂಕ ಪಡುವ ಅಗತ್ಯವಿಲ್ಲ. ಸರ್ಕಾರ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಸಿಎಂ ಮಾಹಿತಿ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *