ಹುಬ್ಬಳ್ಳಿ: ಜಿಲ್ಲೆಯ ಕಿಮ್ಸ್‌ನಲ್ಲಿ ಕಳೆದ ಫೆ.10 ರಿಂದ ಚಿಕಿತ್ಸೆ ಪಡೆಯುತ್ತಿರುವ ಹಿರಿಯ ಪತ್ರಕರ್ತ, ರಾಜ್ಯಸಭೆ ಮಾಜಿ ಸದಸ್ಯ ನಾಡೋಜ ಡಾ.ಪಾಟೀಲ ಪುಟ್ಟಪ್ಪ ಅವರ ಆರೋಗ್ಯವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಖುದ್ದಾಗಿ ಭೇಟಿ ನೀಡಿ ವಿಚಾರಿಸಿದರು.
ಕಿಮ್ಸ್‌ನಲ್ಲಿ ಪಾಟೀಲ ಪುಟ್ಟಪ್ಪನವರಿಗೆ ಉತ್ತಮ ಚಿಕಿತ್ಸೆ ದೊರೆಯುತ್ತಿದೆ. ಸಾಧ್ಯವಾದಷ್ಟು ಇನ್ನೂ ಹೆಚ್ಚಿನ ಪ್ರಯತ್ನ ಮಾಡಿ ಎಂದು ಯಡಿಯೂರಪ್ಪ ಸಲಹೆ ನೀಡಿದರು. ಪಾಟೀಲ ಪುಟ್ಟಪ್ಪನವರ ಮಕ್ಕಳಾದ ಅಶೋಕ, ಮಂಜುಳಾ ಹಾಗೂ ಶೈಲಜಾ ಅವರಿಂದಲೂ ಮುಖ್ಯಮಂತ್ರಿಗಳು ಮಾಹಿತಿ ಪಡೆದರು.
ಕಿಮ್ಸ್ ವೈದ್ಯಶಾಸ್ತ್ರ ಒಳರೋಗಿ ವಿಭಾಗದಲ್ಲಿ ದಾಖಲಾಗಿರುವ ನಾಡೋಜ ಪಾಪು ಅವರು, ವಿಪರೀತ ಜ್ವರ, ಉಸಿರಾಟ ತೊಂದರೆ ಹಾಗೂ ಆಯತಪ್ಪಿ ಬಿದ್ದ ಪರಿಣಾಮ ತಲೆಗೆ ಪೆಟ್ಟಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದೀರ್ಘಕಾಲದ ಪುಪ್ಪಸ ತೊಂದರೆ ಹಾಗೂ ತಲೆಯಲ್ಲಿ ರಕ್ತಸ್ರಾವ ಉಂಟಾಗಿದ್ದರಿಂದ ಚಿಕಿತ್ಸೆ ಮಾಡಲಾಗಿದೆ. ಕಿಡ್ನಿ ತೊಂದರೆ, ರಕ್ತ ಹೀನತೆ ಹಾಗೂ ಸೋಂಕು ಕಂಡು ಬಂದಿದ್ದು, ಎಲ್ಲಾ ಖಾಯಿಲೆಗಳಿಗೆ ಚಿಕಿತ್ಸೆ ನೀಡಲಾಗಿದೆ.
ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿದ್ದರಿಂದ ಶಸ್ತ್ರಚಿಕಿತ್ಸೆ ಮಾಡಲಾಯಿತು. ಆದರೆ ಶಸ್ತ್ರಚಿಕಿತ್ಸೆ ನಂತರ ಆರೋಗ್ಯ ಗಂಭೀರವಾಗಿದೆ. ಕೃತಕ ಉಸಿರಾಟ ಯಂತ್ರ (ವೆಂಟಿಲೇಟರ್) ಅಳವಡಿಸಲಾಗಿದೆ. ದೀರ್ಘಕಾಲ ಹಾಸಿಗೆ ಹಿಡಿದ ಪರಿಣಾಮ ಪಲ್ಮನರಿ ಥ್ರಂಬೋ ಎಂಬೋಲಿಸಂ ಆಗಿದೆ ಎಂದು ತಜ್ಞ ವೈದ್ಯ ಪ್ರೊ.ಡಿ.ಎಂ.ಕಬಾಡಿ ವಿವರಿಸಿದರು.
ಸಚಿವ ಜಗದೀಶ ಶೆಟ್ಟರ್, ಗೃಹಸಚಿವ ಬಸವರಾಜ ಬೊಮ್ಮಾಯಿ, ಸಂಸದೆ ಶೋಭಾ ಕರಂದ್ಲಾಜೆ, ಜಿಲ್ಲಾಧಿಕಾರಿ ದೀಪಾ ಚೋಳನ್, ಪೊಲೀಸ್ ಆಯುಕ್ತ ಆರ್.ದಿಲೀಪ್, ಮಹಾನಗರ ಪಾಲಿಕೆ ಆಯುಕ್ತ ಡಾ.ಸುರೇಶ್ ಇಟ್ನಾಳ, ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ಅಂತರಠಾಣಿ, ವೈದ್ಯಕೀಯ ನಿರ್ದೇಶಕ ಡಾ.ಅರುಣಕುಮಾರ್, ಮುಖ್ಯ ಆಡಳಿತಾಧಿಕಾರಿ ರಾಜಶ್ರೀ ಜೈನಾಪುರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಶವಂತ ಮದೀನಕರ್, ಜಿಲ್ಲಾ ಸಮೀಕ್ಷಣಾಧಿಕಾರಿ ಡಾ.ಸುಜಾತಾ ಹಸವಿಮಠ ಮತ್ತಿತರರು ಇದ್ದರು.