ಬೆಂಗಳೂರು: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಅಗತ್ಯವಿದ್ದ ಶಾಸಕ ಸ್ಥಾನ ಮತ್ತು ಸಂಖ್ಯಾಶಾಸ್ತ್ರದ ಜ್ಯೋತಿಷ್ಯದ ಲೆಕ್ಕ ಈಗ ಭರ್ಜರಿ ಚರ್ಚೆಗೆ ಕಾರಣವಾಗಿದ್ದು, ಉಪಚುನಾವಣೆ ಕಣದಲ್ಲಿ 12 ಸ್ಥಾನದಲ್ಲಿ ಗೆಲುವು ಬಾರಿಸಿರುವುದಕ್ಕೆ ಈಗ ಸಿಎಂ ಸಂಖ್ಯಾಶಾಸ್ತ್ರದ ಜ್ಯೋತಿಷ್ಯಕ್ಕೆ ಸಂತಸಗೊಂಡಿದ್ದಾರೆ.
ಸಿಎಂ ಬಿಎಸ್‍ವೈ ಪಾಲಿಗೆ 12 ಲಕ್ಕಿ ನಂಬರ್ ಆಗಲಿದೆ ಎಂಬ ವಿಶ್ಲೇಷಣೆಗಳು ಕೇಳಿಬಂದಿದ್ದು, ಸಂಖ್ಯಾಶಾಸ್ತ್ರ ಜ್ಯೋತಿಷ್ಯದ ಪ್ರಕಾರ ಬಿಜೆಪಿ ಪಾಲಿಗೆ ಒಳ್ಳೆಯ ನಂಬರ್ ಆಗಿದೆ. ಮುಂದಿನ ದಿನದಲ್ಲಿ ಬಿಜೆಪಿ ಪಕ್ಷ ಭದ್ರವಾಗಿ ಬೇರೂರುವ ಸಾಧ್ಯತೆ ಇದೆ ಎನ್ನುವ ವಿಶ್ಲೇಷಣೆ ನಡೆಯುತ್ತಿದೆ.
ಸಂಖ್ಯಾಶಾಸ್ತ್ರ ಜ್ಯೋತಿಷ್ಯದಲ್ಲಿ 12 ನಂಬರಿಗೆ ಬಹಳಷ್ಟು ಮಹತ್ವ ಇದ್ದು, ಈ ನಂಬರ್ ಗೇಮ್‍ಗೆ ಬಿಎಸ್‍ವೈ ಖುಷಿಯಾಗಿದ್ದಾರೆ. 12 ಸ್ಥಾನಗಳು ಲಭಿಸಿರುವುದರಿಂದ ಬಿಜೆಪಿ ಪಾಲಿಗೆ ವರದಾನವಾಗಲಿದ್ದು, ಸರ್ಕಾರಕ್ಕೆ ಯಾವುದೇ ಗಂಡಾಂತರ ಹಾಗೂ ಕಿರಿಕಿರಿ ಇಲ್ಲದೇ ಸಂಪೂರ್ಣವಾಗಿ ಸ್ಥಿರವಾಗಲಿದೆ ಎಂಬ ವಿಶ್ಲೇಷಣೆ ಕೇಳಿ ಬಂದಿದೆ. ಚುನಾವಣೆಯಲ್ಲಿ ಅಗತ್ಯವಿದ್ದ ಸ್ಥಾನಕ್ಕಿಂತಲೂ ಹೆಚ್ಚಿನ ಸ್ಥಾನ ಗಳಿಸಿರುವ ಕಾರಣ ಸರ್ಕಾರ ಸೇಫ್ ಆಗಿದ್ದು, ಅಗತ್ಯ ಸ್ಥಾನಗಳನ್ನಷ್ಟೇ ಗಳಿಸದಿದ್ದರೆ ಮತ್ತೆ ವಿರೋಧಿಗಳಿಂದ ಸಮಸ್ಯೆ ಎದುರಿಸುವ ಸಾಧ್ಯತೆ ಇತ್ತು. ಆದರೆ ಈಗ 12 ಸ್ಥಾನ ಗೆಲುವು ಪಡೆದಿರುವುದರಿಂದ ಬಿಎಸ್‍ವೈ ಕೂಡ ನಿರಳರಾಗಿದ್ದಾರೆ. ಅಲ್ಲದೇ ಸಂಪುಟ ವಿಸ್ತರಣೆ ಸಮಯದಲ್ಲೂ ಯಾವುದೇ ಸಮಸ್ಯೆ ಎದುರಾಗುವುದಿಲ್ಲ ಎಂಬ ಮಾಹಿತಿ ವಿಶ್ಲೇಷಣೆ ನಡೆದಿದೆ.
ಸಿಎಂ ಬಿಎಸ್ ಯಡಿಯೂರಪ್ಪ ಅವರು ಸಂಖ್ಯಾಶಾಸ್ತ್ರವನ್ನು ನಂಬುತ್ತಾರೆ. ಈ ಹಿಂದೆ 2017ರ ಚುನಾವಣೆ ಸಂದರ್ಭದಲ್ಲಿ ರಾಜ್ಯದಲ್ಲಿ ಪರಿವರ್ತನಾ ರ್ಯಾಲಿ ನಡೆಸಿದ್ದ ಸಿಎಂ ಬಿಎಸ್‍ವೈ ಅವರ ವಾಹನ ಸಂಖ್ಯೆ 45 ಆಗಿದ್ದು. ಸಿಎಂ ಅವರು ಓಡಾಡುವ ಕಾರಿನ ನಂಬರ್ ಹಾಗೂ ಪ್ರಚಾರ ವಾಹನದ ನಂಬರ್ 45 ಆಗಿತ್ತು. 4+5=9 ಆಗಿರುವುದರಿಂದ ಅವರ ಲಕ್ಕಿ ನಂಬರ್ 9 ಬರುವ ಸಂಖ್ಯೆಯ ವಾಹನವನ್ನೇ ಬಳಕೆ ಮಾಡಿದ್ದರು.
2007ರಲ್ಲಿ ಸಂಖ್ಯಾಶಾಸ್ತ್ರರ ಜ್ಯೋತಿಷಿಗಳ ಸಲಹೆ ಮೇರೆಗೆ ತಮ್ಮ ಹೆಸರಿನ ಸ್ಪೆಲಿಂಗ್ ನಲ್ಲಿದ್ದ ಒಂದು ಡಿ ಅಕ್ಷರದ (Yediyurappa) ಪಕ್ಕ ಐ ಅಕ್ಷರ ಕೈಬಿಟ್ಟು ಡಿ ಅಕ್ಷರ (Yeddyurappa)ವನ್ನು ಕೂಡಿಸಿಕೊಂಡಿದ್ದರು. ಆ ಬಳಿಕ 2019 ಜುಲೈ 26 ರಂದು ಮತ್ತೆ ಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿದ ಸಂದರ್ಭದಲ್ಲಿ ಒಂದು ಡಿ ಅಕ್ಷರನ್ನು ಬಿಟ್ಟು ಮತ್ತೆ ಮೊದಲಿನಂತೆ ಬದಲಾಯಿಸಿಕೊಂಡಿದ್ದರು.